ಭಾನುವಾರ, ಜೂನ್ 13, 2021
21 °C
ಆರ್ಥಿಕ ಬಿಕ್ಕಟ್ಟಿನಲ್ಲಿ ಬಿಬಿಎಂಪಿ * ಸಿದ್ಧವಾಗುತ್ತಿದೆ ಪ್ರಸ್ತಾವನೆ

ಆಸ್ತಿ ತೆರಿಗೆ ಪ್ರತಿವರ್ಷ ಪರಿಷ್ಕರಣೆ?

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಬಿಬಿಎಂಪಿ ಇನ್ನು ಮುಂದೆ ಆಸ್ತಿ ತೆರಿಗೆಯನ್ನು ಪ್ರತಿವರ್ಷ ಪರಿಷ್ಕರಿಸಲಿದೆಯೇ?

‘ಹೌದು. ಈ ಬಗ್ಗೆ ಸಿದ್ಧತೆಗಳು ನಡೆದಿವೆ’ ಎನ್ನುತ್ತವೆ ಸರ್ಕಾರದ ಮೂಲಗಳು. ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಡೀಕರಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವಿಡಿಯೊ ಸಂವಾದದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆಯನ್ನು ಪ್ರತಿವರ್ಷ ಪರಿಷ್ಕರಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ವಾರದೊಳಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿಯ ವಿಶೇಷ ಆಯುಕ್ತರೊಬ್ಬರು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

1976ರ ಕೆಎಂಸಿ ಕಾಯ್ದೆಯ ನಿಯಮಗಳ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಚಾಲ್ತಿಯಲ್ಲಿರುವ ಪ್ರದೇಶವಾರು ಯೂನಿಟ್‌ ದರಗಳ ಆಧಾರದಲ್ಲಿ ಕನಿಷ್ಠ ಶೇ 15ರಷ್ಟು ಹಾಗೂ ಗರಿಷ್ಠ ಶೇ 30ರಷ್ಟು ಹೆಚ್ಚಳ ಮಾಡಲು ಅವಕಾಶ ಇದೆ. 2016ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಿಸಲಾಗಿತ್ತು. ಆಗ ವಸತಿ ಕಟ್ಟಡಗಳಿಗೆ ಹಿಂದಿನ ದರಕ್ಕಿಂತ ಶೇ 15ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇ 30ರಷ್ಟು ತೆರಿಗೆ ಹೆಚ್ಚಿಸಲಾಗಿತ್ತು. ಆ ಬಳಿಕ ತೆರಿಗೆ ಪರಿಷ್ಕರಣೆ ಆಗಿಲ್ಲ.

2019–20ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಿಸುವ ಕುರಿತು ಆಯುಕ್ತರು 2018ರ ನವೆಂಬರ್‌ನಲ್ಲಿ ಟಿಪ್ಪಣಿ ಸಿದ್ಧಪಡಿಸಿದ್ದರು. ವಸತಿ ಸ್ವತ್ತುಗಳಿಗೆ ಶೇ 25ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇ 30ರಷ್ಟು ಹೆಚ್ಚಿಸುವ ಕುರಿತು ಪ್ರಸ್ತಾಪಿಸಿದ್ದರು. ತೆರಿಗೆ ಪರಿಷ್ಕರಣೆ ಪ್ರಸ್ತಾಪಕ್ಕೆ ಕೌನ್ಸಿಲ್‌ ಅನುಮೋದನೆ ಸಿಗಬೇಕು. ಬಳಿಕ ಆ ನಿರ್ಣಯಕ್ಕೆ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಪಡೆಯಬೇಕಾಗುತ್ತದೆ. ಆ ಬಳಿಕವಷ್ಟೇ ಪರಿಷ್ಕೃತ ತೆರಿಗೆ ದರ ಜಾರಿಗೆ ಬರುತ್ತದೆ.

ಚುನಾಯಿತ ಕೌನ್ಸಿಲ್‌ ಆಡಳಿತದ ಅವಧಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಹರಸಾಹಸ ಪಡಬೇಕಾಗುತ್ತದೆ. ತೆರಿಗೆ ಪರಿಷ್ಕರಣೆ ಪ್ರಸ್ತಾವನೆಯು ಪಾಲಿಕೆಯ ಪ್ರತಿ ಕೌನ್ಸಿಲ್‌ ಸಭೆಯ ಕಾರ್ಯಸೂಚಿಯಲ್ಲೂ ಇರುತ್ತದೆ. ಆದರೆ, ಕೌನ್ಸಿಲ್‌ ಸಭೆ ಈ ಪ್ರಸ್ತಾವನೆಯನ್ನ ಮುಂದೂಡುತ್ತಲೇ ಬರುತ್ತಿದೆ.  ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಎಲ್ಲಿ ಚುನಾವಣೆಯಲ್ಲಿ ತಮಗೆ ಹಿನ್ನಡೆ ಆಗುತ್ತದೆಯೇನೋ ಎಂಬ ಭಯದಿಂದ ಈ ಪ್ರಸ್ತಾಪಕ್ಕೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. 

ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣ ಹೊಂದಿಸುವುದು ಸುಲಭದ ಮಾತಲ್ಲ. ಪಾಲಿಕೆಯಲ್ಲಿ ಪ್ರತಿ ಬಾರಿಯೂ ವಾಸ್ತವಕ್ಕಿಂತ ಹೆಚ್ಚು ವರಮಾನ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗುತ್ತದೆ. ನಿರೀಕ್ಷೆಯಷ್ಟು ತೆರಿಗೆ ಸಂಗ್ರಹವಾಗುತ್ತಿಲ್ಲ. ಆದರೆ, ವೆಚ್ಚ ಭರಿಸಲು ಬೇರೆ ಸಂಪನ್ಮೂಲಗಳನ್ನೂ ಪಾಲಿಕೆ ಕಂಡುಕೊಂಡಿಲ್ಲ. ಹಾಗಾಗಿ ಬಾಕಿ ಬಿಲ್‌ಗಳು ಹಾಗೂ ಸಾಲದ  ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗುತ್ತಿದೆ. 

ಬಾಕಿ ಅನುದಾನ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ಸದಸ್ಯರು ಕಳೆದ ತಿಂಗಳ ಕೌನ್ಸಿಲ್‌ ಸಭೆಯಲ್ಲಿ ದುಂಬಾಲು ಬಿದ್ದಿದ್ದರು. ‘ಪಾಲಿಕೆ ಖಾತೆಯಲ್ಲಿ ಕೇವಲ ₹ 64 ಕೋಟಿ ಇದೆ. ನಾನು ಹೇಗೆ ಎಲ್ಲರಿಗೂ ಬಾಕಿ ಅನುದಾನ ಬಿಡುಗಡೆ ಮಾಡಲಿ. ಆದ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಸಹಾಯಕತೆ ತೋಡಿಕೊಂಡಿದ್ದರು. 

‘ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ ಸೆ 10ಕ್ಕೆ ಕೊನೆಗೊಳ್ಳಲಿದೆ. ಆ ಬಳಿಕ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ‍ಪಾಲಿಕೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಇದರ ಬೆನ್ನಲ್ಲೇ ಆಸ್ತಿ ತೆರಿಗೆಗೆ ಸಂಬಂಧಿಸಿ ಮಹತ್ತರ ಬದಲಾವಣೆ ನಿಶ್ಚಿತ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು