ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ನಿಯಂತ್ರಣ: ಇನ್ನಷ್ಟು ಬಿಗಿಕ್ರಮ ಅಗತ್ಯ: ಬಿಬಿಎಂಪಿ ಮುಖ್ಯ ಆಯುಕ್ತ

Last Updated 3 ಡಿಸೆಂಬರ್ 2021, 8:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಓಮೈಕ್ರಾನ್‌ ವೈರಾಣುವಿನಿಂದ ಕೋವಿಡ್‌ ಹರಡಿದ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ, ಈ ರೂಪಾಂತರಿಗೊಂಡ ವೈರಾಣು ಹರಡುವಿಕೆ ತಡೆಯಲು ಇನ್ನಷ್ಟು ಬಿಗು ಕ್ರಮ ಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಇತ್ತೀಚೆಗೆ ಸಡಿಲಗೊಳಿಸಿದ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಮತ್ತೆ ಜಾರಿಗೊಳಿಸಬಹುದು. ಸಮಸ್ಯೆಯ ತೀವ್ರತೆ ನೋಡಿಕೊಂಡು, ತಜ್ಞರ ಅಭಿಪ್ರಾಯ ಪಡೆದು ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದರು.

‘ಇಂತಹ ಸಂದರ್ಭ ಎದುರಾಗಬಹುದು ಎಂದು ಮುಂದಾಲೋಚನೆ ಹೊಂದಿದ್ದೆವು. ಇದಕ್ಕೆ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ಹರಡುವಿಕೆ ತಡೆಯಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಅಂತರರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ನಿಗಾ ಇಟ್ಟಿದ್ದೇವೆ. ಕೋವಿಡ್‌ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ, ಅವರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಅಗತ್ಯ ಇರುವ ಕಡೆ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸುತ್ತಿದ್ದೇವೆ’ ಎಂದರು.

‘ಓಮೈಕ್ರಾನ್‌ ಕೊರೊನಾ ವೈರಸ್‌ನ ರೂಪಾಂತರಗೊಂಡ ತಳಿ. ಇದರ ನಿಯಂತ್ರಣಕ್ಕೆ ಮಾಸ್ಕ್‌ ಧರಿಸುವುದು ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದರ ಬಗ್ಗೆಯೂ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದಕ್ಕಾಗಿ 54 ತಂಡಗಳನ್ನು ನಿಯೋಜಿಸಿದ್ದೇವೆ’ ಎಂದು ತಿಳಿಸಿದರು.

‘ತಜ್ಞರು ಹೊಸ ತಳಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡುವ ಸಲಹೆ ಸೂಚನೆಗಳಿಗೆ ಹಾಗೂ ರಾಜ್ಯ ಮಟ್ಟದ ಸಭೆಯ ತೀರ್ಮಾನಗಳಿಗೆ ಅನುಗುಣವಾಗಿ ನಾವೂ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಕೋವಿಡ್ ಪರೀಕ್ಷಾ ಮಾದರಿಗಳನ್ನು ವೈರಾಣು ವಂಶವಾಹಿ ಸಂಚರನೆ ವಿಶ್ಲೇಷಣೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಒಳಪಡಿಸುವ ಪದ್ಧತಿಯನ್ನು ಹಿಂದಿನಿಂದಲೂ ಅನುಸರಿಸುತ್ತಿದ್ದೆವು. ಈ ಹಿಂದೆ ಅದರ ಫಲಿತಾಂಶ ಬರುವುದಕ್ಕೆ ಎರಡು ತಿಂಗಳು ಸಮಯ ತಗುಲುತ್ತಿತ್ತು. ಏಪ್ರಿಲ್‌ನಲ್ಲಿ ಕಳುಹಿಸಿದ ಮಾದರಿಗಳ ಫಲಿತಾಂಶ ಜೂನ್‌ನಲ್ಲಿ ಬರುತ್ತಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಆದಷ್ಟು ಬೇಗ ಫಲಿತಾಂಶ ಪಡೆಯಲು ಕ್ರಮ ಕೈಗೊಂಡಿದ್ದೇವೆ. ಎರಡು ವಾರದೊಳಗೆ ಫಲಿತಾಂಶ ಬರುತ್ತಿದೆ. ವೈರಾಣು ಪ್ರಮಾಣ ಹೆಚ್ಚು ಇರುವ 10–15 ಮಾದರಿಗಳನ್ನು ಸೀಕ್ವೆನ್ಸಿಂಗ್‌ಗೆ ಕಳುಹಿಸುತ್ತಿದ್ದೇವೆ. ಈ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ. ಬದಲಾವಣೆ ಅಗತ್ಯ ಇರುವಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ರೂಪಾಂತರಗೊಂಡ ತಳಿಯ ನಿಯಂತ್ರಣಕ್ಕೆ ಇನ್ನಷ್ಟು ಮುಜಾಗ್ರತಾ ಕ್ರಮ ಅನುಸರಿಸಬೇಕು. ಲಸಿಕೆ ಹಾಕಿದರೆ ಹೆಚ್ಚಿನ ಪರಿಣಾಮ ಇರಲ್ಲ. ಲಸಿಕೆ ಹಾಕಿದವರು ಆಸ್ಪತ್ರೆಗೆ ದಾಖಲಾಗುವ ಪ್ರಮೇಯ ಕಡಿಮೆ. ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೂ ಎಲ್ಲ ಕಡೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ‌ಲ್ಲೂ ಲಸಿಕೆ ಲಭ್ಯವಿದೆ’ ಎಂದರು.

ಸೊಂಕಿತರ ಸಂಪರ್ಕಕ್ಕೆ ಬಂದ 10 ಮಂದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅವರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಫೋನ್‌ನಲ್ಲಿ ಪ್ರತಿಕ್ರಿಯಿಗೆ ಲಭ್ಯ ಆಗದವರನ್ನು ಹೇಗೆ ಪತ್ತೆ ಹಚ್ಚಬೇಕು ತಿಳಿದಿದೆ. ಯಾವುದೇ ಪರಿಸ್ಥಿತಿಯನ್ನೂ ನಿಭಾಯಿಸುವುದಕ್ಕೂ ಸಿದ್ಧವಾಗಿದ್ದೇವೆ. ಜನ ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸುವುದು ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT