ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್‌ ವಿಂಗಡಣೆ: ಅಂತಿಮ ಅಧಿಸೂಚನೆ

ಬಿಬಿಎಂಪಿ: ವಾರ್ಡ್‌ಗೆ ಪುನೀತ್‌ ರಾಜ್‌ಕುಮಾರ್‌; 180 ಮತ್ತು 230 ವಾರ್ಡ್‌ಗೆ ಅಗರ ಹೆಸರು
Last Updated 14 ಜುಲೈ 2022, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳ ಹೆಸರು ಬದಲಿಸಿ, ಸುಮಾರು 40 ವಾರ್ಡ್‌ಗಳ ಗಡಿಯಲ್ಲಿ ಕೆಲವು ಬದಲಾವಣೆ ಮಾಡಿ ಸರ್ಕಾರ ಗುರುವಾರ ರಾತ್ರಿ ಅಂತಿಮ ಅಧಿಸೂಚನೆ ಹೊರಡಿಸಿದೆ.

ಮಹಾಲಕ್ಷ್ಮಿಪುರ ಬಡಾವಣೆ ವಿಧಾನಸಭೆ ಕ್ಷೇತ್ರದ 55ನೇ ವಾರ್ಡ್‌ನ ಕಾವೇರಿನಗರದ ಹೆಸರು ಬದಲಿಸಿ, ಬಹುಜನರ ಬೇಡಿಕೆಯಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಇರಿಸಲಾಗಿದೆ. ಕರಡಿನಲ್ಲಿದ್ದ ಕೆಲವು ವಾರ್ಡ್‌ಗಳ ಹೆಸರನ್ನು ಅದಲು–ಬದಲು ಮಾಡಲಾಗಿದೆ. ಅಂತಿಮ ಅಧಿಸೂಚನೆಯಲ್ಲಿ 180 ಮತ್ತು 230 ವಾರ್ಡ್‌ಗಳೆರಡಕ್ಕೂ ಅಗರ ಎಂದೇ ಹೆಸರಿಸಲಾಗಿದೆ.

198 ವಾರ್ಡ್‌ಗಳಿಂದ 243 ವಾರ್ಡ್‌ಗಳಿಗೆ ಪುನರ್‌ವಿಂಗಡಣೆ ಮಾಡಿ ಸರ್ಕಾರ ಜೂನ್‌ 23ರಂದು ಕರಡು ಪಟ್ಟಿಯ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಜುಲೈ 7ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿತ್ತು. ಈ ಆಕ್ಷೇಪಣೆಗಳನ್ನು ಸ್ವೀಕರಿಸಿದ ಮೇಲೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜುಲೈ 11 ಮತ್ತು 12ರಂದು ಪರಿಶೀಲನಾ ಸಮಿತಿ ಸಭೆಗಳನ್ನು ನಡೆಸಲಾಗಿತ್ತು. ಈ ಸಭೆಗಳ ಶಿಫಾರಸಿನ ಮೇರೆಗೆ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

3,833 ಆಕ್ಷೇಪಣೆ: ಬಿಬಿಎಂಪಿ ವಾರ್ಡ್‌ ಮರುವಿಂಗಡಣೆಗೆ ನಾಗರಿಕರು, ಸಂಘ–ಸಂಸ್ಥೆಗಳಿಂದ 3,833 ಆಕ್ಷೇಪಣೆಗಳು ಬಂದಿವೆ. ಇದರಲ್ಲಿ 1,700 ಅರ್ಜಿಗಳು ವಾರ್ಡ್‌ ಹೆಸರು ಬದಲಾವಣೆಗೆ ಆಗ್ರಹಿಸಿದ್ದವು. ಆಕ್ಷೇಪಣೆಗಳನ್ನು ಒಟ್ಟುಗೂಡಿಸಿ, ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್.ಎಲ್‌. ದೀಪಕ್‌ ನೇತೃತ್ವದ ಸಮಾಲೋಚನಾ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಹೆಸರು ಬದಲಾವಣೆಯ ನಂತರ ಗಡಿ ಗುರುತಿಸುವಿಕೆ ಬಗ್ಗೆ ಆಕ್ಷೇ‍ಪಗಳು ಹೆಚ್ಚಾಗಿವೆ. ಕೆಲವರು ವೈಜ್ಞಾನಿಕವಾಗಿಲ್ಲ ಎಂದಿದ್ದಾರೆ. ಇನ್ನು ಕೆಲವರು ಮಧ್ಯೆ ಮುಖ್ಯ ರಸ್ತೆ ಇದ್ದು, ಅದನ್ನು ಇಲ್ಲಿಗೆ ಸೇರಿಸಬಹುದು ಎಂದೆಲ್ಲ ಸಲಹೆ ನೀಡಿದ್ದಾರೆ. ಕೆಲವು ವಾರ್ಡ್‌ಗಳು ಎರಡು–ಮೂರು ವಾರ್ಡ್‌ಗಳಾಗಿ ವಿಭಜನೆಗೊಂಡಿರುವುದರಿಂದ ಯಾವುದಕ್ಕೆ ಮೂಲ ಹೆಸರನ್ನು ಇಡಬೇಕು ಎಂಬ ಸಲಹೆಗಳೂ ಬಂದಿವೆ ಎಂದು ಮಾಹಿತಿ ನೀಡಿದರು.

‘ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಅತಿಹೆಚ್ಚು ಆಕ್ಷೇಪಣೆಗಳು (1967) ಬಂದಿವೆ. ನಮ್ಮ ಭಾಗದಲ್ಲಿದ್ದ ಎಲ್ಲ ಕರ್ತವ್ಯಗಳನ್ನು ನಾವು ಪೂರೈಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಶುಕ್ರವಾರ ಮೀಸಲಾತಿ ವರದಿ: ನ್ಯಾಯಮೂರ್ತಿ ಭಕ್ತವತ್ಸಲಂ ನೇತೃತ್ವದ ಸಮಿತಿ ವಾರ್ಡ್‌ಗಳ ಮೀಸಲಾತಿ ವರದಿಯನ್ನು ಶುಕ್ರವಾರ ಸರ್ಕಾರಕ್ಕೆ ಸಲ್ಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ಶೇಕಡ 50ಕ್ಕೆ ಸೀಮಿತಗೊಳಿಸಿ ಕಳೆದ ತಿಂಗಳು ಸುಗ್ರೀವಾಜ್ಞೆ ಹೊರಡಿಸಿತ್ತು.

ವಾರ್ಡ್‌ಗಳು
ವಾರ್ಡ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT