ಶನಿವಾರ, ಆಗಸ್ಟ್ 13, 2022
27 °C
ಗೋವಿಂದರಾಜನಗರದಲ್ಲಿ ಸರಾಸರಿ 30 ಸಾವಿರ, ಚಾಮರಾಜಪೇಟೆಯಲ್ಲಿ ಸರಾಸರಿ 39 ಸಾವಿರ

ವಾರ್ಡ್‌: ಜನಸಂಖ್ಯೆ ಹಂಚಿಕೆಯಲ್ಲೂ ‘ಪಕ್ಷ’ ತಾರತಮ್ಯ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕರು ಪ್ರತಿನಿಧಿಸುವ ಹಲವು ಕ್ಷೇತ್ರಗಳ ವಾರ್ಡ್‌ಗಳಲ್ಲಿ ಸರಾಸರಿ ಜನಸಂಖ್ಯೆ 30 ಸಾವಿರ ಇದ್ದರೆ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸರಾಸರಿ ಜನಸಂಖ್ಯೆ 39 ಸಾವಿರ!

ವಾರ್ಡ್‌ಗಳ ಮರು ವಿಂಗಡಣೆ ಪಟ್ಟಿಯಲ್ಲಿ ವಿಧಾನಸಭೆ ಕ್ಷೇತ್ರವಾರು ವಾರ್ಡ್‌ಗಳ ಜನಸಂಖ್ಯೆ ಗಮನಿಸಿದರೆ ಈ ಮಾಹಿತಿ ಎದ್ದು ಕಾಣಿಸುತ್ತದೆ.

‘2011ರ ಜನಗಣತಿ ಪ್ರಕಾರ 84.65 ಲಕ್ಷ ಮತದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಅದನ್ನು ಆಧರಿಸಿ 243 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 34,750 ಮತದಾರರು ಇರಲಿದ್ದಾರೆ. ರೈಲು ಹಳಿ, ರಸ್ತೆಗಳ ವಿಭಜನೆ ಆಗುವ ಕಡೆ ಶೇ 10ರಷ್ಟು ಕಡಿಮೆ ಅಥವಾ ಹೆಚ್ಚು ಆಗಲಿದೆ’ ಎಂದು ಬಿಬಿಎಂಪಿ ಹೇಳುತ್ತಿದೆ.

ಆದರೆ, ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒಂದು ಮಾನದಂಡ, ಅನ್ಯ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಮತ್ತೊಂದು ಬಗೆಯ ಮಾನದಂಡವನ್ನು ಬಿಬಿಎಂಪಿ ಅನುಸರಿಸಿದೆಯೇ ಎಂಬ ಅನುಮಾನವನ್ನು ಈ ಅಂಕಿ–ಅಂಶಗಳು ಹುಟ್ಟುಹಾಕುತ್ತಿವೆ.

ಉದಾಹರಣೆಗೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಸಚಿವ ವಿ.ಸೋಮಣ್ಣ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿನ ಒಟ್ಟಾರೆ ಜನಸಂಖ್ಯೆ 3,05,725 ಇದೆ. ಈ ಕ್ಷೇತ್ರದಲ್ಲಿ 10 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 30,572 ಜನಸಂಖ್ಯೆ ಇದೆ. ಈ ಕ್ಷೇತ್ರದಲ್ಲಿನ 9 ವಾರ್ಡ್‌ಗಳ ಜನಸಂಖ್ಯೆ 30 ಸಾವಿರ ಆಸುಪಾಸಿನಲ್ಲೇ ಇದ್ದು, ಒಂದೇ ಒಂದು ವಾರ್ಡ್‌ನ ಜನಸಂಖ್ಯೆ 31 ಸಾವಿರ ದಾಟಿದೆ. ವಾರ್ಡ್‌ಗಳ ಸಂಖ್ಯೆಯನ್ನು 9ಕ್ಕೆ ಸೀಮಿತ ಮಾಡಿದ್ದರೂ ಪ್ರತಿ ವಾರ್ಡ್‌ಗೆ ಸರಾಸರಿ ಜನಸಂಖ್ಯೆ 33,969 ಆಗುತ್ತಿತ್ತು.

ಸಚಿವ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 14 ವಾರ್ಡ್‌ಗಳಿವೆ. ಇಲ್ಲಿನ ಸರಾಸರಿ ಜನಸಂಖ್ಯೆ 32,709 ಇದೆ. 13 ವಾರ್ಡ್‌ಗಳಿಗೆ ಸೀಮಿತ ಮಾಡಿದ್ದರೂ ಸರಾಸರಿ ಜನಸಂಖ್ಯೆ 35,225 ಇರುತ್ತಿತ್ತು.

ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಖ್ಯೆ 2,37,460 ಇದೆ. ಇಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು 7ರಿಂದ 6ಕ್ಕೆ ಇಳಿಸಲಾಗಿದೆ. ಈಗ ಪ್ರತಿ ವಾರ್ಡ್‌ನ ಸರಾಸರಿ ಜನಸಂಖ್ಯೆ 39,576 ಆಗಿದೆ. ಏಳು ವಾರ್ಡ್‌ಗಳನ್ನೇ ಉಳಿಸಿದ್ದರೆ ಸರಾಸರಿ ಜನಸಂಖ್ಯೆ 33,922 ಆಗಿರುತ್ತಿತ್ತು. ಅದೇ ರೀತಿ ಜಯನಗರ ಕ್ಷೇತ್ರದಲ್ಲೂ ಒಂದು ವಾರ್ಡ್‌ ಕಡಿಮೆ ಮಾಡಿ 6 ವಾರ್ಡ್‌ಗೆ ಸೀಮಿತ ಮಾಡಲಾಗಿದೆ. ಆರು ವಾರ್ಡ್‌ಗಳ ಸರಾಸರಿ ಜನಸಂಖ್ಯೆ 38,305 ಇದೆ. ಏಳು ವಾರ್ಡ್‌ಗಳನ್ನೇ ಉಳಿಸಿದ್ದರೂ ಸರಾಸರಿ ಜನಸಂಖ್ಯೆ 32,833 ಇರುತ್ತಿತ್ತು.

ವಿಜಯನಗರ ವಿಧಾನಸಭಾ ಕ್ಷೇತ್ರವನ್ನು 9 ವಾರ್ಡ್‌ಗಳಾಗಿ ವಿಭಾಗಿಸಲಾಗಿದೆ. ಇಲ್ಲಿಯೂ ಪ್ರತಿವಾರ್ಡ್‌ಗೆ ಸರಾಸರಿ ಜನಸಂಖ್ಯೆ 36,041 ಇದೆ. 10 ವಾರ್ಡ್‌ಗಳಾಗಿ ವಿಭಾಗಿಸಿದ್ದರೂ, ಸರಾಸರಿ ಜನಸಂಖ್ಯೆ 32,437 ಇರುತ್ತಿತ್ತು. ಬ್ಯಾಟರಾಯನಪುರ ಕ್ಷೇತ್ರದಲ್ಲಿ 10 ವಾರ್ಡ್‌ಗಳಿದ್ದು, ಇಲ್ಲಿಯೂ ಪ್ರತಿ ವಾರ್ಡ್‌ಗೆ ಸರಾಸರಿ ಜನಸಂಖ್ಯೆ 37,275 ಇದೆ. ವಾರ್ಡ್‌ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಿದ್ದರೂ ಸರಾಸರಿ ಜನಸಂಖ್ಯೆ 33,886 ಇರುತ್ತಿತ್ತು. ಈ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

‘ಮಹದೇವಪುರ, ಪದ್ಮನಾಭನಗರ, ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ ಜನಸಂಖ್ಯೆಯನ್ನು ಮೀರಿ ಹೆಚ್ಚುವರಿಯಾಗಿ ಒಂದೊಂದು ವಾರ್ಡ್‌ಗಳನ್ನು ನೀಡಲಾಗಿದೆ. ಬ್ಯಾಟರಾಯನಪುರ, ಚಾಮರಾಜಪೇಟೆ, ಸರ್ವಜ್ಞನಗರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಒಂದೊಂದು ಹೆಚ್ಚುವರಿ ವಾರ್ಡ್‌ಗೆ ಅವಕಾಶ ಇದ್ದರೂ ಕಡಿತ ಮಾಡಲಾಗಿದೆ.‌ ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡಿಕೊಂಡಿರುವ ತಂತ್ರ’ ಎಂಬ ಆಕ್ಷೇಪಣೆಗಳು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿವೆ.

ಯಾವ ರೀತಿಯಲ್ಲೂ ವೈಜ್ಞಾನಿಕವಾಗಿಲ್ಲ
‘ವಾರ್ಡ್‌ ವಿಂಗಡಣೆ ಮಾಡಿರುವುದು ಯಾವ ರೀತಿಯಲ್ಲಿಯೂ ವೈಜ್ಞಾನಿಕವಾಗಿ ಇಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಜನಸಂಖ್ಯೆ, ವಿರೋಧ ಪಕ್ಷದ ಶಾಸಕರ ಕ್ಷೇತ್ರದ ವಾರ್ಡ್‌ಗಳ ಜನಸಂಖ್ಯೆಯನ್ನು ಗಮನಿಸಿದರೆ ವಾರ್ಡ್‌ ಮರು ವಿಂಗಡಣೆ ಯಾವ ರೀತಿಯಲ್ಲಿ ಆಗಿದೆ ಎಂಬುದು ಅರ್ಥವಾಗುತ್ತದೆ’ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

‘ಈ ರೀತಿಯ ಮಾನದಂಡದಿಂದಲೇ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಮೂರು ವಾರ್ಡ್‌ಗಳನ್ನು ಕಡಿಮೆ ಮಾಡಲಾಗಿದೆ. ಗೋವಿಂದರಾಜನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಮಹದೇವಪುರ ವಾರ್ಡ್‌ಗಳ ಜನಸಂಖ್ಯೆ ನೋಡಿದರೆ ಇದು ತಾರತಮ್ಯ ಎಂಬುದು ಗೊತ್ತಾಗುತ್ತದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು