ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಮರು ವಿಂಗಡಣೆ: ತಕ್ಷಣ ವರದಿ ಸಲ್ಲಿಸಿ

ಸುಪ್ರೀಂ ಕೋರ್ಟ್‌ ಆದೇಶ ಉಲ್ಲೇಖ l ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆ ಸೂಚನೆ
Last Updated 22 ಮೇ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಸಮಿತಿಯ ವರದಿಯನ್ನು ತಕ್ಷಣವೇ ಕಳುಹಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶದಂತೆ ಅಗತ್ಯ ಕ್ರಮಕೈಗೊಳ್ಳಲು ಈ ವರದಿ ಸಲ್ಲಿಸಬೇಕು ಎಂದು ಪುನರ್‌ವಿಂಗಡಣಾ ಸಮಿತಿ ಅಧ್ಯಕ್ಷ್ಯರಾಗಿರುವ ಮುಖ್ಯ ಆಯುಕ್ತರಿಗೆ ತಿಳಿಸಿದೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್‌ ಈ ಬಗ್ಗೆ ಅವರು ಶನಿವಾರ ಪತ್ರ ಬರೆದಿದ್ದಾರೆ.

2020ರ ಜನವರಿಯಲ್ಲಿ ಜಾರಿ ಗೊಳಿಸಲಾದ ಬಿಬಿಎಂಪಿ ಹೊಸ ಕಾಯ್ದೆ ಅನ್ವಯ ಈಗಿರುವ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.ಈ ಕಾರ್ಯಕ್ಕೆ ರಚಿಸಿದ್ದ ಪುನರ್‌ ವಿಂಗಡಣಾ ಸಮಿತಿ ಒಂದೂವರೆ ವರ್ಷದಲ್ಲಿ ಮೂರು ಬಾರಿ ವಿಸ್ತರಣೆ ಕೋರಿತ್ತು.

‘ವಾರ್ಡ್‌ಗಳ ಪುನರ್‌ ವಿಂಗಡಣೆಗಾಗಿ ರಚಿಸಿದ್ದ ಸಮಿತಿಗೆ ಆರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿತ್ತು. ಈ ಸಮಿತಿಯ ಅವಧಿಯನ್ನು 2021ರ ಜುಲೈ 28ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ಮುಂದುವರಿಸಿ ಆದೇಶಿಸಲಾಗಿತ್ತು. ಈ ಅವಧಿಯು 2022ರ ಜನವರಿ 28ಕ್ಕೆ ಮುಕ್ತಾಯವಾಗಿದೆ. ಆದರೆ, ಸಮಿತಿಯು ಇದುವರೆಗೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿ ಸಿದಂತೆ ರಾಜ್ಯ ಸರ್ಕಾರವು ದಾಖಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಬಿಬಿಎಂಪಿ ವಾರ್ಡ್‌ ವಿಂಗಡಣೆ, ಮೀಸಲಾತಿ ಪೂರ್ಣಗೊಳಿಸಲು ಸರ್ಕಾರಕ್ಕೆ ಎಂಟು ವಾರ ಸಮಯ ನೀಡಿದೆ ಎಂದು ಪತ್ರದಲ್ಲಿ ನೆನಪಿಸಲಾಗಿದೆ.

ಪುನರ್‌ ವಿಂಗಡಣೆ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಬರೆದಿದ್ದ ಪತ್ರವನ್ನು ಸಹ ಉಲ್ಲೇಖಿಸಲಾಗಿದೆ. ಇದರಿಂದ, ಆಯೋಗವು ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿತ್ತು.

ಸರ್ಕಾರವು ಪುನರ್‌ ವಿಂಗಡಣೆ ವರದಿಯನ್ನು ಸಾರ್ವಜನಿಕರ ಅವಗಾಹ ನೆಗೆ ತರುವ ನಿರೀಕ್ಷೆ ಇದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಕರಡು ಪ್ರತಿ ಸಿದ್ಧವಾಗಿದೆ ಎಂದು ಕಳೆದ ವಾರ ತಿಳಿಸಿದ್ದರು.

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿನ ಹೊರವಲಯದ ವಾರ್ಡ್‌ಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಮತದಾರರ ಸಂಖ್ಯೆ ಕಡಿಮೆ ಇರುವ ನಗರದ ಕೇಂದ್ರ ಭಾಗದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಹಿಂದುಳಿದ ವರ್ಗ: ಶೇ 32 ರಷ್ಟು ಮೀಸಲಾತಿ ನೀಡಿ’
‘ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 18 ರಷ್ಟು ಮೀಸಲಾತಿ ನೀಡಿ, ಉಳಿದ ಶೇ 32ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಪಿ.ಆರ್.ರಮೇಶ್ ಕೋರಿದ್ದಾರೆ.

ಈ ಬಗ್ಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ‘8 ವಾರದೊಳಗೆ ವಾರ್ಡ್‌ಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ರಾಜಕೀಯ ಮೀಸಲಾತಿ ಅನ್ವಯ, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ 15, ಪಂಗಡಗಳಿಗೆ ಶೇ 3ರಷ್ಟು ಮೀಸಲಾತಿ ನೀಡಬೇಕು. ಈಚೆಗೆ ಸಚಿವಾಲಯದಿಂದ ಶಾಸಕರಿಗೆ ಒದಗಿಸಿರುವ ಮಾಹಿತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶೇ 53 ರಷ್ಟು ಜನರು ಹಿಂದುಳಿದ ವರ್ಗದವರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ಬಿಬಿಎಂಪಿ ಆಡಳಿತ ಪ್ರದೇಶದಲ್ಲೂ ಶೇ 50ಕ್ಕಿಂತ ಅಧಿಕ ಜನರು ಹಿಂದುಳಿದವರೆಂದು ಅಂದಾಜಿಸಲಾಗಿದೆ. ಒಟ್ಟು ಮೀಸಲಾತಿ ಶೇ 50 ರಷ್ಟು ಮೀರಲು ಅವಕಾಶವಿಲ್ಲ. ಹೀಗಾಗಿ, ಪ.ಜಾತಿ ಮತ್ತು ಪ.ಪಂಗಡಗಳಿಗೆ ಶೇ 18 ರಷ್ಟು ಮೀಸಲಾತಿ ನೀಡಿ, ಉಳಿದ ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಬಹುದಾಗಿದೆ. ಮಧ್ಯಪ್ರದೇಶಕ್ಕೆ ಸುಪ್ರೀಂ ಕೋರ್ಟ್ ಇದೇ ರೀತಿ ನಿರ್ದೇಶನ ನೀಡಿದೆ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT