ಶುಕ್ರವಾರ, ಫೆಬ್ರವರಿ 26, 2021
31 °C

4 ತಿಂಗಳಿನಿಂದ ಗೌರವಧನ ಇಲ್ಲ: ಅತಿಥಿ ಉಪನ್ಯಾಸಕರ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಾಲ್ಕು ತಿಂಗಳಿಂದ ಬೋಧನೆ ಮಾಡಿರುವ ಹಲವು ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಿಲ್ಲ. ಇದರಿಂದಾಗಿ ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ರಸಾಯನ ವಿಜ್ಞಾನ ವಿಭಾಗದಲ್ಲಿ ಇದ್ದ 10 ಮಂದಿ ಅತಿಥಿ ಉಪನ್ಯಾಸಕರಿಗೆ ನಾಲ್ಕು ತಿಂಗಳ ಗೌರವಧನ ನೀಡಿಲ್ಲ. ಈ ಉಪನ್ಯಾಸಕರ ಪೈಕಿ ಒಬ್ಬರು ‘ಪ್ರಜಾವಾಣಿ’ಗೆ ತಮ್ಮ ಗೋಳು ತೋಡಿಕೊಂಡರು.

‘ಫೆಬ್ರುವರಿ 27ರಂದು ಎರಡನೇ ಸೆಮಿಸ್ಟರ್‌ಗೆ ಬೋಧನೆ ಆರಂಭಿಸಿದ್ದೆವು. ಜೂನ್‌ 22ರವರೆಗೂ ಬೋಧನೆ ಮಾಡಿದ್ದೇವೆ. ಆದರೆ, ಗೌರವಧನ ನೀಡಿಯೇ ಇಲ್ಲ. ನನಗೊಬ್ಬನಿಗೆ ಅಲ್ಲ, ವಿಭಾಗದ ಎಲ್ಲ 10 ಮಂದಿಗೂ ಕೊಟ್ಟಿಲ್ಲ. ನನ್ನ ಅಮ್ಮನಿಗೆ ಅಸೌಖ್ಯ ಕಾಡುತ್ತಿದ್ದು, ಔಷಧ ತರುವುದಕ್ಕೂ ದುಡ್ಡಿಲ್ಲ. ಹೀಗಾಗಿ ನಿಮಗೆ ಕರೆ ಮಾಡಿ ನನ್ನ ದುಃಖ ಹೇಳಿಕೊಳ್ಳಬೇಕಾಯಿತು’ ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.

‘ಯಾಕಾಗಿ ಗೌರವಧನ ತಡೆಹಿಡಿದಿದ್ದಾರೋ ಗೊತ್ತಿಲ್ಲ, ಕುಲಪತಿ ಅಥವಾ ಕುಲಸಚಿವರ ಬಳಿ ಈ ಸಮಸ್ಯೆ ಹೇಳಿಕೊಳ್ಳಲು ಭಯ, ಏಕೆಂದರೆ ಇದೇ ನೆಪ ಹೇಳಿ ಮುಂದಿನ ಬಾರಿ ಕೆಲಸ ಕೊಡದಿದ್ದರೆ ಮತ್ತಷ್ಟು ಸಂಕಷ್ಟ. ಇತರ ಕೆಲವು ವಿಭಾಗಗಳಲ್ಲೂ ಸಹ ಇದೇ ರೀತಿಯ ಸಮಸ್ಯೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.

ಆಡಿಟ್‌ ಸಮಸ್ಯೆ ಇದೆ: ‘ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರು ಇಂತಿಷ್ಟೇ ಗಂಟೆ ಬೋಧನೆ ಮಾಡಬೇಕೆಂದಿದೆ. ನಿಗದಿತ ಅವಧಿಗಿಂತ ಅಧಿಕ ಬೋಧನೆ ಮಾಡಿದ ಲೆಕ್ಕಾಚಾರ ನೀಡಿದರೆ ಲೆಕ್ಕಪರಿಶೋಧನೆ ವೇಳೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಮತ್ತೊಮ್ಮೆ ಸರಿಯಾಗಿ ಲೆಕ್ಕ ಮಾಡಿ ಗೌರವಧನ ದೊರಕಿಸಿಕೊಳ್ಳಲು ಹೇಳಿದ್ದೇವೆ. ಅದನ್ನು ತಕ್ಷಣ ಒದಗಿಸುತ್ತೇವೆ’ ಎಂದು ಕುಲಸಚಿವ ಪ್ರೊ.ಎಂ.ರಾಮಚಂದ್ರ ಗೌಡ ತಿಳಿಸಿದರು.

‘ಅತಿಥಿ ಉಪನ್ಯಾಸಕರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ನಿಯಮದಂತೆ ಅವರು ತಮ್ಮ ಹಾಜರಾತಿ ಸಹಿತ ಸರಿಯಾಗಿ ಲೆಕ್ಕ ನೀಡಿದ್ದೇ ಆದರೆ ಸಮಸ್ಯೆ ಇಲ್ಲ. ತಿದ್ದುಪಡಿಗಾಗಿ ವಾಪಸ್ ಕಳುಹಿಸಿಕೊಟ್ಟಾಗ ಇಂತಹ ವಿಳಂಬ ಆಗಬಹುದು. ಇನ್ನಷ್ಟು ವಿಳಂಬ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದರು.

*
ಗೌರವಧನ ನೀಡಿಕೆಯಲ್ಲಿ ವಿಶ್ವವಿದ್ಯಾಲಯ ವಿಳಂಬ ಮಾಡುವುದಿಲ್ಲ. ಈ ಬಾರಿ ಹೀಗೇಕೆ ಆಯಿತು ಎಂದು ಪರಿಶೀಲಿಸಿ ನ್ಯಾಯ ಕೊಡಿಸುವೆ
ಪ್ರೊ.ಎಸ್.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು