ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡ ಸಕ್ರಮಕ್ಕೆ ಒಪ್ಪಿಗೆ: ಸಚಿವ ಸಂಪುಟ ತೀರ್ಮಾನ

ಮಾರ್ಗಸೂಚಿ ಮೌಲ್ಯದ ಪ್ರಕಾರ ದಂಡ ನಿಗದಿ
Last Updated 12 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎ ಬಡಾವಣೆಗಳಲ್ಲಿ ಸೂಕ್ತ ಪ್ರಾಧಿಕಾರಗಳು ಮತ್ತು ಇಲಾಖೆಗಳಿಂದ ಅನುಮತಿ ಪಡೆಯದೇ ನಿರ್ಮಿಸಿರುವ ಮನೆ ಮತ್ತು ಕಟ್ಟಡಗಳನ್ನು ಸಕ್ರಮಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸುಮಾರು 5,000 ಎಕರೆ ಪ್ರದೇಶದಲ್ಲಿ ಈ ರೀತಿಯ 75,000 ಕಟ್ಟಡಗಳು ಇರುವುದನ್ನು ಪತ್ತೆ ಮಾಡಲಾಗಿದೆ. ದಂಡ ಕಟ್ಟಿ ಸಕ್ರಮಗೊಳಿಸಲು ಅವಕಾಶ ನೀಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಕಟ್ಟಡ ಯೋಜನೆಗೆ ಒಪ್ಪಿಗೆ ಪಡೆಯದೇ ಇರುವುದು, ಅಭಿವೃದ್ಧಿ ಶುಲ್ಕ ಪಾವತಿಸದಿರುವುದು, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವವರು ಕಟ್ಟಡ ಸಕ್ರಮಗೊಳಿಸಿಕೊಳ್ಳಬೇಕು. ಇದಕ್ಕಾಗಿ ಮುಂದಿನ ಅಧಿವೇಶನದಲ್ಲಿ ಬಿಡಿಎ ಕಾಯ್ದೆಯ 38 ಸಿಗೆ ತಿದ್ದುಪಡಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಇದಕ್ಕಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಆಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗುವುದು. ಇದರಲ್ಲಿ ಕಂದಾಯ ಸಚಿವ ಆರ್.ಅಶೋಕ, ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌, ವಸತಿ ಸಚಿವ ವಿ.ಸೋಮಣ್ಣ ಸದಸ್ಯರಾಗಿರುತ್ತಾರೆ. ಮಾರ್ಗಸೂಚಿ ಮೌಲ್ಯದ ಪ್ರಕಾರ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುವುದು. ಆರಂಭಿಕ ಪ್ರಸ್ತಾವನೆಯ ಪ್ರಕಾರ, 30x40 ಅಳತೆಯ ನಿವೇಶನಗಳಿಗೆ ಹಾಲಿ ಮಾರ್ಗಸೂಚಿ ಮೌಲ್ಯದ ಶೇ 70 ರಷ್ಟು ದಂಡ ವಿಧಿಸಲು ಉದ್ದೇಶಿಸಲಾಗಿದೆ. ಇದಕ್ಕಿಂತ ದೊಡ್ಡ ಸ್ವತ್ತಿಗೆ ಶೇ 100 ರಷ್ಟು ದಂಡ ವಿಧಿಸಲಾಗುವುದು ಎಂದರು.

ಪಿನಾಕಿನಿ ಪುನಶ್ಚೇತನ ಯೋಜನೆ: ಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಯೋಜನೆಗೆ ಅನುಮತಿ ನೀಡುವಂತೆ ಅಜೀಂ ಪ್ರೇಮ್‌ಜೀ ಫೌಂಡೇಷನ್‌, ಟಾಟಾ ಟ್ರಸ್ಟ್‌, ಇನ್ಫೊಸಿಸ್‌, ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರಸ್ತಾವನೆ ಸಲ್ಲಿಸಿದ್ದು, ಇದರ ಪರಿಶೀಲನೆಗೆ ಒಪ್ಪಿಗೆ ನೀಡಲಾಗಿದೆ. ₹2,600 ಕೋಟಿ ವೆಚ್ಚದಲ್ಲಿ ನದಿ ಪುನಶ್ಚೇತನ ಯೋಜನೆಯನ್ನು ಕೈಗೊಳ್ಳಲಿವೆ ಇದಕ್ಕೆ, ಕಂಪನಿಗಳು ಸಿಎಸ್‌ಆರ್‌ ನಿಧಿಯಡಿ ₹500ಕೋಟಿ ನೀಡಲಿದ್ದು, ಉಳಿದ ಹಣವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮತ್ತಿತರ ಮೂಲಗಳಿಂದ ಸಾಲ ಪಡೆಯಲಿವೆ. ದಕ್ಷಿಣ ಪಿನಾಕಿನಿ ಪುನಶ್ಚೇತನ ಟ್ರಸ್ಟ್‌ ಅಡಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT