ಬುಧವಾರ, ಏಪ್ರಿಲ್ 14, 2021
24 °C
ಕೆಂಪೇಗೌಡ ಬಡಾವಣೆ: ಬಿಡಿಎ ಆಯುಕ್ತರಿಂದ ಕಾಮಗಾರಿ ಪರಿಶೀಲನೆ

ರೈತರಿಗೆ ಒಟ್ಟಿಗೆ ನಿವೇಶನ ಹಂಚಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾದ ಎನ್‌.ಮಂಜುಳಾ ಬುಧವಾರ ಪರಿಶೀಲಿಸಿದರು.

ಬಡಾವಣೆಗೆ ಭೂಮಿ ಬಿಟ್ಟುಕೊಟ್ಟಿರುವ ರೈತರ ಮುಖಂಡರು ಹಾಗೂ ನಿವೇಶನದಾರರು ಈ ಸಂದರ್ಭದಲ್ಲಿ ಆಯುಕ್ತರಿಗೆ ಅಹವಾಲು ಸಲ್ಲಿಸಿದರು.

ಅಭಿವೃದ್ಧಿಪಡಿಸಿದ ನಿವೇಶನಗಳನ್ನು ರೈತರಿಗೆ ಬಿಟ್ಟುಕೊಡಲು ಮೀನಮೇಷ ಎಣಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

‘ನಿವೇಶನ ನೀಡುವಾಗಲೂ ತಾರತಮ್ಯ ನಡೆಸಲಾಗುತ್ತಿದೆ. ಕೆಲವರಿಗೆ ಉತ್ತಮ ಜಾಗದಲ್ಲಿರುವ ನಿವೇಶನವನ್ನು ನೀಡಲಾಗುತ್ತಿದೆ’ ಎಂದು ರೈತರು ದೂರಿದರು.

ನಿವೇಶನ ಹಂಚಿಕೆ ಆಗಬೇಕಾದ ರೈತರ ಪಟ್ಟಿ ತಯಾರಿಸಿ ಸುಮಾರು 25 ಮಂದಿಗೆ ಒಟ್ಟಿಗೆ ನಿವೇಶನ ಹಂಚಿಕೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

‘ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿ ಚುರುಕುಗೊಳಿಸಬೇಕು ಹಾಗೂ ಅವುಗಳ ಗುಣಮಟ್ಟದಲ್ಲಿ ಲೋಪ ಆಗದಂತೆ ಎಚ್ಚರವಹಿಸಬೇಕು’ ಎಂದು ಈ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಪ್ರತಿನಿಧಿಗಳು ಒತ್ತಾಯಿಸಿದರು.

‘ಮುಖ್ಯರಸ್ತೆಗೆ ಕೆಲವೆಡೆ ರೈತರು ಇನ್ನಷ್ಟೇ ಜಮೀನು ಬಿಟ್ಟುಕೊಡಬೇಕಿದೆ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ’ ಎಂದು ಆಯುಕ್ತರು ಭರವಸೆ ನೀಡಿದರು.

‘120 ದಿನದಲ್ಲಿ ದುಡ್ಡಿ ಕಟ್ಟಿದ್ದರೆ ಬಡ್ಡಿ ಇಲ್ಲ’

ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದವರು 120 ದಿನದೊಳಗೆ ಹಣ ಕಟ್ಟಿದರೆ ಬಡ್ಡಿ ವಿಧಿಸುವುದಿಲ್ಲ ಎಂದು ಬಿಡಿಎ ಭರವಸೆ ನೀಡಿತ್ತು. ಆದರೆ, ಉಪಕಾರ್ಯದರ್ಶಿ ಕಚೇರಿ ಸಿಬ್ಬಂದಿ, ‘90 ದಿನಗಳ ಬಳಿಕ ಶುಲ್ಕ ಕಟ್ಟಿದ್ದರೆ ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ನೋಟಿಸ್‌ ಜಾರಿಗೊಳಿಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಬಿಡಿಎ ವತಿಯಿಂದಲೇ ಈ ಬಗ್ಗೆ ಪ್ರಕಟಣೆ ನೀಡಲಾಗಿತ್ತು. ಹಾಗಾಗಿ 120 ದಿನಗಳ ಒಳಗೆ ಶುಲ್ಕ ಪಾವತಿಸಿದವರು ಬಡ್ಡಿ ತೆರಬೇಕಾಗಿಲ್ಲ. ಈ ಬಗ್ಗೆ ಸರ್ಕಾರದ ಆದೇಶ ಆಗದ ಕಾರಣ ಗೊಂದಲ ಸೃಷ್ಟಿಯಾಗಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗೊಂದಲ ಬಗೆಹರಿಸುತ್ತೇವೆ’ ಎಂದರು.

ನಿವೇಶನದಾರರ ಬೇಡಿಕೆಗಳು

* ಪ್ರತಿ ಬ್ಲಾಕ್‌ನಲ್ಲೂ ವಿಶಾಲವಾದ ಉದ್ಯಾನ ನಿರ್ಮಿಸಿ

* ಪಾದಚಾರಿ ಮಾರ್ಗಗಳಿಗೆ ಸಾಕಷ್ಟು ಜಾಗ ಕಾಯ್ದಿರಿಸಿ

* ಹೊಸ ಮುಖ್ಯರಸ್ತೆಯನ್ನು ಸಿಗ್ನಲ್‌ರಹಿತ ಕಾರಿಡಾರ್‌ ಆಗಿ ವಿನ್ಯಾಸಗೊಳಿಸಿ

* ಮುಖ್ಯರಸ್ತೆಯಲ್ಲಿ ಬಸ್‌ ಬೇಗಳನ್ನು ನಿರ್ಮಿಸಿ

* ಬಿಬಿಎಂಪಿ, ಅಂಚೆ ಮತ್ತಿತರ ಸರ್ಕಾರಿ ಕಚೇರಿಗಳಿಗೆ ನಿವೇಶನಗಳನ್ನು ಕಾಯ್ದಿರಿಸಿ

* ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ, ಶಾಲೆಗಳಿಗೆ ಜಾಗ ಕಾಯ್ದಿರಿಸಿ

* ಸಿಸಿಟಿವಿ ಕ್ಯಾಮೆರಾ ಅಳವಡಿಸಿ

* ಸೌರಶಕ್ತಿ ಸದ್ಬಳಕೆಗೆ ಯೋಜನೆ ರೂಪಿಸಿ 

* ವಾಹನಗಳ ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿ

ಅಂಕಿ ಅಂಶ

10.75 ಕಿ.ಮಿ – ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ

4.7 ಕಿ.ಮೀ – ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು

10.75 ಕಿ.ಮಿ – ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ

4.7 ಕಿ.ಮೀ – ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು