ಭಾನುವಾರ, ಜೂಲೈ 5, 2020
22 °C
ಜಿ–ಕೆಟಗರಿ ಕೋಟಾದ ನಿವೇಶನ ಹಂಚಿಕೆ ವಿವಾದ

ಬಿಡಿಎ | ನೋಟಿಸ್‌ ತಲುಪಿಸಲು ಪಡಿಪಾಟಲು, ವಿಚಾರಣೆ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ‘ಜಿ–ಕೆಟಗರಿ’ ಕೋಟಾದಡಿ ಹಂಚಿಕೆ ಮಾಡಿರುವ ನಿವೇಶನಗಳ ಕಾನೂನುಬದ್ಧತೆ ಪರಾಮರ್ಶೆ ಮಾಡಲು ನೇಮಕಗೊಂಡಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ಅಧ್ಯಕ್ಷತೆಯ ಸಮಿತಿ ಸಂಬಂಧಪಟ್ಟವರಿಗೆ ನೋಟಿಸ್‌ ತಲುಪಿಸಲು ಪಡಿಪಾಟಲು ಪಡುತ್ತಿದೆ. ಇದರಿಂದಾಗಿ ಸಮಿತಿಯ ವಿಚಾರಣೆಯೂ ವಿಳಂಬವಾಗುತ್ತಿದೆ.

ಜೂನ್‌ 24ರಂದು ನಡೆಯಬೇಕಿದ್ದ ವಿಚಾರಣೆಗೆ 37 ಮಂದಿಗೆ ನೋಟಿಸ್‌ ಕಳುಹಿಸಲಾಗಿತ್ತು. ಅದರಲ್ಲಿ 18 ಮಂದಿಗೆ ನೋಟಿಸ್‌ ತಲುಪಿಸಲು ಸಾಧ್ಯವಾಗಿರಲಿಲ್ಲ. ‘ಈ ಹೆಸರಿನ ವ್ಯಕ್ತಿಯು ನಮೂದಿಸಿದ ವಿಳಾಸದಲ್ಲಿಲ್ಲ’ ಎಂಬ ಷರಾದೊಂದಿಗೆ 10 ನೋಟಿಸ್‌ಗಳು ವಾಪಸ್ಸಾಗಿದ್ದವು. ವಿಳಾಸದಾರರು ಮನೆ ತೊರೆದ ಕಾರಣಕ್ಕೆ ಹಾಗೂ ಮೃತಪಟ್ಟ ಕಾರಣಕ್ಕೆ ತಲಾ ಮೂರು ನೋಟಿಸ್‌ಗಳು ಹಿಂದಕ್ಕೆ ಬಂದಿದ್ದವು. ವಿಳಾಸ ಅಪೂರ್ಣ ಎಂಬ ಕಾರಣಕ್ಕೆ 2 ನೋಟಿಸ್‌ ಜಾರಿ ಆಗಿರಲಿಲ್ಲ. 

ಜೂನ್‌ 26ರಂದು ನಡೆಯಬೇಕಿದ್ದ ವಿಚಾರಣೆಗೆ ಸಮಿತಿ 32 ಮಂದಿಗೆ ನೋಟಿಸ್‌ ಕಳುಹಿಸಿತ್ತು. ಅದರಲ್ಲಿ 14 ಮಂದಿಗೆ ನೋಟಿಸ್‌ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಪೈಕಿ ನಾಲ್ವರು ವಿಳಾಸದಾರರ ಮನೆಗೆ ಬೀಗ ಹಾಕಲಾಗಿತ್ತು. ನಾಲ್ವರು ಮನೆ ಖಾಲಿ ಮಾಡಿದ್ದರಿಂದ ನೋಟಿಸ್‌ ನೀಡಲು ಸಾಧ್ಯವಾಗಿರಲಿಲ್ಲ. ಇಂತಹ ಹೆಸರಿನವರು ವಿಳಾಸದಲ್ಲಿಲ್ಲ ಎಂಬ ಕಾರಣಕ್ಕೆ ಮೂರು ನೋಟಿಸ್‌ಗಳು ಹಿಂದಕ್ಕೆ ಬಂದಿದ್ದವು. ಒಂದು ನೋಟಿಸ್‌ ಅಪೂರ್ಣ ವಿಳಾಸದ ಕಾರಣದಿಂದಾಗಿ ವಾಪಸ್‌ ಬಂದಿತ್ತು. ಎರಡು ನೋಟಿಸ್‌ಗಳು ಯಾವುದೇ ಷರಾ ಇಲ್ಲದೆಯೇ ಹಿಂದಕ್ಕೆ ಬಂದಿವೆ.

ಜೂನ್‌ 29ರಂದು ನಡೆಯುವ ವಿಚಾರಣೆಗೆ 28 ಮಂದಿಗೆ ನೋಟಿಸ್‌ ಕಳುಹಿಸಲಾಗಿತ್ತು. ವಿಳಾಸದಲ್ಲಿ ಇಂತಹ ಹೆಸರಿನವರಿಲ್ಲ ಎಂಬ ಕಾರಣಕ್ಕೆ ಐದು ನೋಟಿಸ್‌ಗಳು  ಹಿಂದಕ್ಕೆ ಬಂದಿದ್ದರೆ, ಮನೆಗೆ ಬಾಗಿಲು ಹಾಕಿದ ಕಾರಣಕ್ಕೆ, ನಿವೇಶನದಾರ ಮೃತಪಟ್ಟ ಕಾರಣಕ್ಕೆ ಹಾಗೂ ನಿವೇಶನದಾರ ಮನೆಯನ್ನು ತೊರೆದ ಕಾರಣಕ್ಕೆ  ಹಾಗೂ ವಿಳಾಸ ಅಪೂರ್ಣ ಎಂಬ ಕಾರಣಕ್ಕೆ ತಲಾ ನಾಲ್ಕು ನೋಟಿಸ್‌ಗಳು ಜಾರಿಯಾಗಿರಲಿಲ್ಲ. 

2015ರಿಂದಲೂ ವಿಚಾರಣೆ
ವಕೀಲ ಎಸ್‌. ವಾಸುದೇವ ಅವರು, ‘2004ರಿಂದ ಒಟ್ಟು 308 ಜನಪ್ರತಿನಿಧಿಗಳು ಅಕ್ರಮವಾಗಿ ಬಿಡಿಎ ನಿವೇಶನ ಪಡೆದಿದ್ದಾರೆ’ ಎಂದು ದೂರಿ ಹೈಕೋರ್ಟ್‌ನಲ್ಲಿ 2010ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

2012ರ ಆಗಸ್ಟ್‌ನಲ್ಲಿ ಈ ಅರ್ಜಿ ವಿಲೇವಾರಿ ಮಾಡಿದ್ದ ವಿಭಾಗೀಯ ಪೀಠವು, ‘ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. 2013ರಲ್ಲಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ ನೇತೃತ್ವದಲ್ಲಿ ಮೂವರ ಸಮಿತಿಯೊಂದನ್ನು ನೇಮಕ ಮಾಡಿತ್ತು. 313 ಅನರ್ಹರಿಗೆ ನಿವೇಶನ ನೀಡಿದ್ದು ಸಮಿತಿಯ ವಿಚಾರಣೆ ವೇಳೆ ಪತ್ತೆ ಆಯಿತು. 140 ಶಾಸಕರು, 4 ಸಂಸದರು, 12 ಗೃಹಿಣಿಯರು, ಸಚಿವರ ಸಂಬಂಧಿಗಳು, ಚಾಲಕರು ಹಾಗೂ ಪರಿಚಾರಕರೂ ನಿವೇಶನ ಪಡೆದಿದ್ದರು. ಇಂತಹ ಹಂಚಿಕೆ ರದ್ದುಗೊಳಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಸಮಿತಿಯು ಕಾರ್ಯವ್ಯಾಪ್ತಿ ಮೀರಿ ವಿಚಾರಣೆ ನಡೆಸಿದೆ ಎಂದು ಆಕ್ಷೇಪಿಸಿದ್ದ ಸರ್ಕಾರ ಸಮಿತಿಯ ವರದಿಯನ್ನು ತಿರಸ್ಕರಿಸಿತ್ತು.

ನಂತರ 2015ರ ಫೆಬ್ರುವರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್‌ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ಸರ್ಕಾರ ನೇಮಕ ಮಾಡಿತು. ಫಾರೂಕ್‌ ಅವರು ನಿಧನರಾಗಿದ್ದರಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು 2019ರ ಜೂನ್‌ನಲ್ಲಿ ರಚಿಸಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು