ಶನಿವಾರ, ಮೇ 28, 2022
27 °C
ಗೌರವ ಕೊಡುವುದಿಲ್ಲ– ಅಧ್ಯಕ್ಷರ ಅಳಲು ಅಗೌರವ ತೋರಿಲ್ಲ– ಆಯುಕ್ತರ ಸ್ಪಷ್ಟನೆ * ಸಗಟು ಹಂಚಿಕೆ ಆರೋಪ ಪ್ರತ್ಯಾರೋಪ

ಬಿಡಿಎ ಅಧ್ಯಕ್ಷ– ಆಯುಕ್ತರ ನಡುವಿನ ಶೀತಲ ಸಮರ ತಾರಕಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಆಯುಕ್ತ ಎಚ್‌.ಆರ್‌.ಮಹದೇವ್ ಅವರ ನಡುವಿನ ಶೀತಲ ಸಮರ ತಾರಕಕ್ಕೇರಿದೆ.

ಇದನ್ನೂ ಓದಿ: ಬಿಡಿಎ ಅಧ್ಯಕ್ಷ– ಆಯುಕ್ತರ ನಡುವೆ ಶೀತಲ ಸಮರ

ವಿಶ್ವನಾಥ್‌ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಯುಕ್ತರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದರು. ‘ಆಯುಕ್ತರು ನನ್ನನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ’ ಎಂಬುದು ವಿಶ್ವನಾಥ್‌ ಅಳಲು.  ಮಹದೇವ್‌ ಈ ಎಲ್ಲ ಆರೋಪಗಳನ್ನು ಅಲ್ಲಗಳೆದರು. ‘ನಾನು ಆರೀತಿ ವರ್ತಿಸಿಲ್ಲ. ಬಿಡಿಎ ಕಾಯ್ದೆಗೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

‘ಆಯುಕ್ತರು ನಾನು ಕೇಳಿದ ಯಾವ ಕಡತಗಳನ್ನೂ ಒದಗಿಸುವುದಿಲ್ಲ. ನನ್ನ ಪ‍ತ್ರಗಳಿಗೂ ಉತ್ತರಿಸುವುದಿಲ್ಲ. ನಿವೇಶನಗಳ ಸಗಟು ಹಂಚಿಕೆ ಕುರಿತು 11 ಪತ್ರಗಳು ಸೇರಿ 40 ಪತ್ರಗಳನ್ನು ಬರೆದಿದ್ದು, ಒಂದಕ್ಕೂ ಉತ್ತರಿಸಿಲ್ಲ’ ಎಂದು ವಿಶ್ವನಾಥ್‌ ಸುದ್ದಿಗೋಷ್ಠಿಯಲ್ಲಿ ದೂರಿದರು. 

‘ಆಯುಕ್ತರು ನನ್ನ ಕೊಠಡಿಗೆ ಬರುವುದಿಲ್ಲ. ಬಿಗುಮಾನ ಬದಿಗಿಟ್ಟು ಖುದ್ದು ನಾನೇ ಅವರ ಕೊಠಡಿಗೆ ಹೋದಾಗಲೂ ಮಾತನಾಡಿಸಲು 10 ನಿಮಿಷ ಕಾಯಿಸಿದರು. ಬಿಡಿಎ ಅಧಿಕಾರಿಗಳನ್ನು ನನ್ನ ಕೊಠಡಿಗೆ ಕರೆಸಿಕೊಂಡರೂ, ಅವರನ್ನೂ ಆಯುಕ್ತರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದು ಅಧ್ಯಕ್ಷರನ್ನು ನಡೆಸಿಕೊಳ್ಳುವ ರೀತಿಯೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹದೇವ್‌, ‘ಎಲ್ಲ ಕಡತಗಳೂ ತನ್ನ ಮೂಲಕವೇ ಹೋಗಬೇಕೆಂದು ಅಧ್ಯಕ್ಷರು ಹೇಳುತ್ತಾರೆ. ಬಿಡಿಎ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇಲ್ಲ. ಕಾಯ್ದೆ ಪ್ರಕಾರ ಆಯುಕ್ತರೇ ಪ್ರಾಧಿಕಾರ ಮುಖ್ಯ ಕಾರ್ಯನಿರ್ಹವಣಾಧಿಕಾರಿ. ಅಂತಿಮ ತೀರ್ಮಾನ ಕೈಗೊಳ್ಳುವ ಪರಮಾಧಿಕಾರ ಅವರಿಗೆ ಮಾತ್ರ. ಆಡಳಿತ ಮಂಡಳಿ ಸಭೆಗೆ ಸಂಬಂಧಿಸಿದ ಕಡತಗಳನ್ನು ಮಾತ್ರ ಅಧ್ಯಕ್ಷರು ಕೇಳಬಹುದು. ಆಯುಕ್ತನಾಗಿ ಕಾಯ್ದೆಗೆ ವಿರುದ್ಧವಾಗಿ ಧಿಕಾರ ಬಳಸಲು ಸಾಧ್ಯವಿಲ್ಲ. ಎಲ್ಲ ಕಡತಗಳನ್ನು ಅವರಿಗೆ ಕಳುಹಿಸಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. 

‘ವೃಥಾ ನನ್ನ ವಿರುದ್ಧವೇ ಆರೋಪ ಮಾಡಿದರೆ ಉತ್ತರಿಸುವುದರಲ್ಲಿ ಅರ್ಥವಿಲ್ಲ. ಅವರು ನನ್ನನ್ನು ಒಮ್ಮೆ ಮಾತ್ರ ಕೊಠಡಿಗೆ ಕರೆದಿದ್ದು, ಹೋಗಿದ್ದೇನೆ. ನನ್ನ ಕಚೇರಿಗೆ ಅವರು ಬಂದಾಗ ಗೌರವ ತೋರಿಲ್ಲ ಎನ್ನುವುದೂ ಸುಳ್ಳು. ಆಯುಕ್ತರ ಕೊಠಡಿಗೆ ಹೋದ ಯಾವ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿಲ್ಲ. ಏಕೆ ಹೀಗೆ ಆರೋಪ ಮಾಡುತ್ತಿದ್ದಾರೊ ತಿಳಿಯದು’ ಎಂದರು.

ಎಸ್‌ಐಟಿ ರಚನೆಗೆ ಅಸಹಕಾರ

‘ನಿವೇಶನಗಳ ಸಗಟು ಹಂಚಿಕೆ ಸೇರಿದಂತೆ ಬಿಡಿಎಯಲ್ಲಿ ನಡೆದಿರುವ ವಿವಿಧ ಹಗರಣಗಳ ತನಿಖೆಗೆ ವಿಶೇಷ ತನಿಖಾ ಪಡೆ (ಎಸ್ಐಟಿ) ರಚಿಸುವ ಬಗ್ಗೆ ಮುಖ್ಯಮಂತ್ರಿಯವರು ಸೂಚಿಸಿದರೂ ಆಯುಕ್ತರು ಇನ್ನೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ’  ಎಂದೂ ವಿಶ್ವನಾಥ್‌ ಆರೋಪಿಸಿದರು.

‘ನಾನು ಎಸ್‌ಐಟಿ ರಚನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಮೂಲೆ ನಿವೇಶನಗಳ ತುಂಡರಿಸುವ ಹಗರಣದ ತನಿಖೆಯನ್ನು ಎಸಿಬಿ ನಡೆಸುತ್ತಿದ್ದು, ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಶಶಿಧರ ಸಮಿತಿ ವರದಿ ಅನುಷ್ಠಾನಕ್ಕೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಎಸ್‌ಐಟಿ ರಚನೆ ಬಗ್ಗೆ ಪರಿಶೀಲಿಸುವಾಗಲೇ ಇವೆಲ್ಲ ತಿಳಿಯಿತು. ತಡೆಯಾಜ್ಞೆಗಳನ್ನು ತೆರವುಗೊಳಿಸಿದ ಬಳಿವೇ ಎಸ್‌ಐಟಿ ರಚಿಸಬಹುದು. ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.

‘ಸಗಟು ಹಂಚಿಕೆ ಹಗರಣದ ಬಗ್ಗೆ ಡಿಸಿಪಿ ಅನುಚೇತ್‌ ಅವರ ನೇತೃತ್ವದಲ್ಲಿ ಶೇಷಾದ್ರಿಪುರ ಪೊಲೀಸರು ದೊಡ್ಡ ಮಟ್ಟದಲ್ಲಿ ತನಿಖೆ ನಡೆಸುತ್ತಿದ್ದಾರೆ. ಅನೇಕ ಅಧಿಕಾರಿಗಳು ಬಂಧನಕ್ಕೊ ಒಳಗಾಗಿದ್ದಾರೆ. ಈ ಹಂತದಲ್ಲಿ ತನಿಖೆ ಬದಲಾಯಿಸುವುದು ಸೂಕ್ತವೇ ಎಂಬ ಗೊಂದಲವಿದೆ. ಎಸ್‌ಐಟಿಗೆ ಯಾವೆಲ್ಲ ಪ್ರಕರಣಗಳ ತನಿಖೆಯನ್ನು ವಹಿಸಬೇಕು ಎಂಬುದನ್ನು ತೀರ್ಮಾನಿಸುವುದು ಸರ್ಕಾರ. ಹಾಗಾಗಿ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಮುಂದುವರಿಯುತ್ತೇವೆ’ ಎಂದರು.

‘ಗೃಹನಿರ್ಮಾಣ ಸಂಘಕ್ಕೆ ನಿವೇಶನ ₹ 500 ಕೋಟಿ ಹಗರಣ’

‘ಭವಾನಿ ಗೃಹನಿರ್ಮಾಣ ಸಂಘಕ್ಕೆ ಸಗಟು ನಿವೇಶನ ಹಂಚಿಕೆ ಮಾಡುವ ವಿಚಾರದಲ್ಲಿ ₹ 500 ಕೋಟಿಗಳಷ್ಟು ಹಗರಣ ನಡೆಸಲು ಸಿದ್ಧತೆ ನಡೆದಿದೆ. ಜಾಗ ನೀಡಬಾರದು ಎಂದು ನಾನು ಪತ್ರ ಬರೆದರೂ ಆಯುಕ್ತರು ಕಿಮ್ಮತ್ತು ನೀಡಿಲ್ಲ’ ಎಂದು ವಿಶ್ವನಾಥ್‌ ಗಂಭೀರ ಆರೋಪ ಮಾಡಿದರು.

‘ಈ ಟ್ರಸ್ಟ್‌ ಜಾಘ ಪಡೆದದ್ದ 30 ವರ್ಷಗಳ ಹಿಂದೆ. 1988ರಲ್ಲಿ ಅವರಿಗೆ 20 ಎಕರೆ ಜಾಗ ನೀಡಿ ಆಗಿದೆ. ಆ ಟ್ರಸ್ಟ್‌ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ, ಇದರ ಸದಸ್ಯರು ಇದ್ದಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಇವೆಲ್ಲವನ್ನು ಪರಿಶೀಲಿಸದೆಯೇ 12 ಎಕರೆ ಜಾಗ ನೀಡುವುದು ಶಂಕೆಗೆ ಕಾರಣವಾಗಿದೆ. ಹಾಗಾಗಿ ಈ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದೆ. ನನ್ನ ಸೂಚನೆ ಮೀರಿ ಆಯುಕ್ತರು ಜಾಗ ಹಸ್ತಾಂತರ ಮಾಡಿದರೆ ಅವರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ’ ಎಂದರು.

ರಾತೋರಾತ್ರಿ ಸಿ.ಡಿ ತಯಾರಿ

‘ಕಾಚರಕನಹಳ್ಳಿ ಹೆಣ್ಣೂರು ಪ್ರದೇಶದಲ್ಲಿ ಚದರ ಅಡಿ ಜಾಗಕ್ಕೆ 15ಸಾವಿರ ದರ ಇದೆ. ಇಲ್ಲಿ ಆರು ಎಕರೆ ಜಾಗವನ್ನು 30 ವರ್ಷ ಹಿಂದಿನ ದರದಲ್ಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ 10.45ರ ವರೆಗೂ ಎಂಜಿನಿಯರ್‌ ಕೂರಿಸಿ  ನಿವೇಶನಗಳ ಸಗಟು ಹಂಚಿಗೆ ಖಚಿತ ಅಳತೆ ವರದಿ ತಯಾರಿಸಿದ್ದಾರೆ’ ಎಂದೂ ವಿಶ್ವನಾಥ್‌ ಆರೋಪ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ, ‘ಈ ಸೊಸೈಟಿಗೆ ಸಗಟು ನಿವೇಶನ ಹಂಚಿಕೆ ಮಾಡುತ್ತಿಲ್ಲ. ಮೊದಲ ಸಲ ಸೊಸೈಟಿಗೆ ಜಾಗ ಹಂಚಿಕೆ ಮಾಡಿದರೆ ಅದನ್ನು ಸಗಟು ಹಂಚಿಕೆ ಎನ್ನಬಹುದು. ಟ್ರಸ್ಟ್‌ನಿಂದ ಬಲವಂತವಾಗಿ ಪಡೆದ 32 ಎಕರೆ ಜಾಗಕ್ಕೆ ಪ್ರತಿಯಾಗಿ ನೀಡುತ್ತಿರುವ ಜಾಗ ನೀಡಲಾಗುತ್ತಿದೆ. ಈ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಆದೇಶವಾಗಿದೆ.  ಸೊಸೈಟಿಯವರು ಎರಡು ಸಲ ನ್ಯಾಯಾಲಯದಿಂದ ಆದೇಶ ಪಡೆದ ಬಳಿಕವೇ ಬಿಡಿಎ ಆಡಳಿತ ಮಂಡಳಿ ಅವರಿಗೆ ಜಾಗ ನೀಡಲು 2019ರ ಫೆಬ್ರುವರಿಯಲ್ಲೇ ತೀರ್ಮಾನಿಸಿತ್ತು. ನ್ಯಾಯಾಲಯದ ಆದೇಶ, ಪ್ರಾಧಿಕಾರದ ನಿರ್ಣಯ ಹಾಗೂ ಸರ್ಕಾರ ಹೇಳಿದ ಬಳಿಕ ಕೈಗೊಂಡ ಕ್ರಮ ಇದು.’ ಎಂದು ಸ್ಪಷ್ಪನೆ ನೀಡಿದರು. ‘ಈ ಸೊಸೈಟಿಗೆ ಜಾಗ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಮಂಗಳವಾರ ವರದಿ ಕೇಳಿದೆ. ವರದಿ ನೀಡಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ’ ಎಂದರು.

‘ನಾನು ಸೋಮವಾರ ರಾತ್ರಿ 10 ಗಂಟೆವರೆಗೆ ಕಚೇರಿಯಲ್ಲೇ ಇರಲಿಲ್ಲ. ರಾತ್ರೋರಾತ್ರಿ ಸಿ.ಸಿ ತಯಾರಿಸಲಾಗಿದೆ ಎಂಬುದು ಸುಳ್ಳು ಆರೋಪ’ ಎಂದರು. 

‘ನಂದಿನಿ ಬಡಾವಣೆ 1 ಎಕರೆ ಜಾಗ ಸ್ವಾಧೀನದ ಬಗ್ಗೆ ವಿಶ್ವನಾಥ್‌ ಪ್ರಭಾವ ಬೀರಿದ್ದರೇ’ ಎಂಬ ಪ್ರಶ್ನೆಗೆ, ‘ನಂದಿನಿ ಬಡಾವಣೆಯಲ್ಲಿ 1 ಎಕರೆ ಬಿಡಿಎ ಜಾಗವನ್ನು ಒತ್ತುವರಿ ಮಾಡಿದರೆ ಸುಮ್ಮನೆ ಬಿಡಬೇಕಾ. ಅದನ್ನು ಸ್ವಾಧೀನಕ್ಕೆ ಪಡೆದಿದ್ದು ನಿಜ’ ಎಂದರು.

‘ಸಿ.ಡಿ. ತಯಾರಿ ಕಂಪನಿಗೆ ದಿಗಿಲು’

‘ಬಿಡಿಎನಲ್ಲಿ ಅಕ್ರಮವಾಗಿ ಖಚಿತ ಅಳತೆ (ಸಿ.ಡಿ) ವರದಿ ತಯಾರಿಸುವ ಕಂಪನಿ ಒಂದಿದೆ. ಪ್ರಮುಖ ಸಮಸ್ಯೆ ಇರವುದೇ ಅವರದ್ದು. ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯೇ ಮಾಡದ 180 ನಿವೇಶನಗಳಿಗೆ ಅವರು ಸಿ.ಡಿ.. ತಯಾರಿಸಿ ಕೊಟ್ಟಿದ್ದಾರೆ. ಅದು ಬೆಳಕಿಗೆ ಬರುತ್ತದೆ ಎಂದು ಕೆಲವರಿಗೆ ಹೊಟ್ಟೆಯಲ್ಲಿ ತಳಮಳ ಸೃಷ್ಟಿಯಾಗಿದೆ. ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಮಹದೇವ್‌ ಯಾರ ಹೆಸರೂ ಉಲ್ಲೇಖಿಸದೆಯೇ ಹೇಳಿದರು. 

‘ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ₹ 20 ಸಾವಿರ ಕೋಟಿಯಿಂದ ₹ 30ಸಾವಿರ ಕೋಟಿಗಳಷ್ಟು ಆಸ್ತಿ ಬಿಡಿಎಗೆ ವಾಪಾಸ್‌ ಬರಲಿದೆ. ಅದನ್ನೆಲ್ಲ ಕೆದಕುತ್ತಾ ಹೋದರೆ ಬಹಳ ಜನರಿಗೆ ಸಮಸ್ಯೆ ಆಗಲಿದೆ. ಈ ವಿಚಾರ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆಯೋ ತಿಳಿಯದೆ ಹೆದರಿಕೆಯಿಂದ ಈ ರೀತಿ ಪಿತೂರಿ ಮಾಡಿದ್ದಾರೆ’ ಎಂದರು. 

ಎಸ್‌.ಟಿ.ಸೋಮಶೇಖರ್ ವಿರುದ್ಧವೂ ಆರೋಪ

‘ಬಿಡಿಎ ಕಾಯ್ದೆ ಸೆಕ್ಷನ್‌ 65ರ ಪ್ರಕಾರ ಸಗಟು ಹಂಚಿಕೆಗೆ ಅವಕಾಶ ಇಲ್ಲ. ಇದುವವರೆಗೆ ಬಿಡಿಎ ಸಗಟು ಹಂಚಿಕೆ ಮಾಡಿರುವುದೆಲ್ಲ ಅಕ್ರಮ. ಎಸ್‌.ಟಿ.ಸೋಮಶೇಖರ್‌ ಅವರು ಅಧ್ಯಕ್ಷರಾಗಿದ್ದಾಗ ಭವಾನಿ ಗೃಹನಿರ್ಮಾಣ ಸೊಸೈಟಿಗೆ ಜಾಗ ನೀಡಲು ತೀರ್ಮಾನಿಸಿದ್ದೂ ಅಕ್ರಮ. ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ. ಬಿಡಿಎ ಏಳು ಸಂಸ್ಥೆಗಳಿಗೆ ಸಗಟು ನಿವೇಶನ ಹಂಚಿಕೆ ಮಾಡಿದೆ. ಎಲ್ಲವನ್ನೂ ರದ್ದುಪಡಿಸುತ್ತೇವೆ. ಎಲ್ಲ ಪ್ರಕರಣಗಳನ್ನೂ ಎಸ್‌ಐಟಿಯಿಂದ ತನಿಖೆಗೆ ಒಳಪಡಿಸುತ್ತೇವೆ’ ಎಂದು ವಿಶ್ವನಾಥ್‌ ತಿಳಿಸಿದರು.

‘ಹೈಕೋರ್ಟ್‌ ನಿರ್ದೇಶನ ಇದ್ದುದರಿಂದ ಭವಾನಿ ಗೃಹನಿರ್ಮಾಣ ಸೊಸೈಟಿಗೆ ಜಾಗ ನೀಡುವ ತೀರ್ಮಾನ ಕೈಗೊಂಡಿದ್ದೆವು. ನನ್ನ ಅವಧಿಯಲ್ಲಿ ಕೈಗೊಂಡ ಈ ತೀರ್ಮಾನ ತಪ್ಪು ಆಗಿದ್ದರೆ, ಅ‌ದನ್ನು ರದ್ದುಪಡಿಸಲಿ. ಬಿಡಿಎ ಆಡಳಿತ ಮಂಡಳಿ ತೀರ್ಮಾನ ಜಾರಿ ಆಗುವುದು ಸರ್ಕಾರ ಅನುಮೋದನೆ ನೀಡಿದ ಬಳಿಕ. ವಿಶ್ವನಾಥ್‌ ಹೇಗಿದ್ದರೂ ಮುಖ್ಯಮಂತ್ರಿ ಅವರಿಗೆ ಪರಮಾಪ್ತರು. ಎಸ್‌ಐಟಿ ತನಿಖೆ ನಡೆಸುವುದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿತ್ಯ ಒಂದಲ್ಲ ಒಂದು ಹಗರಣ ಪತ್ತೆ ಹಚ್ಚಿ ತಾರ್ಕಿಕ ಅಂತ್ಯ ಕಾಣಿಸಲು ಶತಪ್ರಯತ್ನ ಮಾಡುತ್ತಿದ್ದೇನೆ. ನನ್ನ ವಿರುದ್ಧವೇ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ. ಬೆದರಿಕೆಗಳ ಬಗ್ಗೆ ತಲೆ ಕೆಡಿಸುವುದಿಲ್ಲ. ನಾನು ತೆರೆದ ಪುಸ್ತಕದಂತೆ. ಯಾರೂ ಬೇಕಾದ್ರೂ ಪರಿಶೀಲಿಸಬಹುದು.

- ಎಚ್‌.ಆರ್‌.ಮಹದೇವ್‌, ಬಿಡಿಎ ಆಯುಕ್ತ

ಬಿಡಿಎಯ ಯಾವುದೇ ಕಡತ ತರಿಸಿ ನೋಡುವ ಅಧಿಕಾರ ನನಗೆ ಇದೆ. ಮಹದೇವ್‌ ಅವರೂ ದಕ್ಷ ಅಧಿಕಾರಿಯೇ. ಆದರೆ, ನನ್ನ ಗಮನಕ್ಕೆ ತಾರದೆ ಎಲ್ಲವನ್ನೂ ಅವರೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ

- ಎಸ್‌.ಆರ್‌.ವಿಶ್ವನಾಥ್‌, ಬಿಡಿಎ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು