ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಕೆ.ಶಿವರಾಮ ಕಾರಂತ ಬಡಾವಣೆಯ 300 ಕಟ್ಟಡಗಳು ಸಕ್ರಮ: ‘ಸುಪ್ರೀಂ’ ತೀರ್ಪು

ಡಾ.ಕೆ.ಶಿವರಾಮ ಕಾರಂತ ಬಡಾವಣೆ: 4 ವಾರಗಳಲ್ಲಿ ಸಕ್ರಮಗೊಳಿಸುವಂತೆ ನ್ಯಾಯಾಲಯ ಸೂಚನೆ
Last Updated 2 ಡಿಸೆಂಬರ್ 2021, 21:04 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆಗೆ ಅಧಿಸೂಚನೆ ಹೊರಡಿಸಿರುವ ಜಾಗದಲ್ಲಿ ನಿರ್ಮಾಣವಾಗಿರುವ 300 ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ‍್ರೀಂಕೋರ್ಟ್‌ ನಿರ್ದೇಶನ ನೀಡಿದೆ

ನ್ಯಾಯಾಲಯವು ನವೆಂಬರ್‌ 25ರಂದು ಈ ಕುರಿತು ನಿರ್ದೇಶನ ನೀಡಿದೆ. ಸಕ್ರಮದ ದೃಢೀಕರಣದ ಪತ್ರಗಳನ್ನು ನಾಲ್ಕು ವಾರಗಳಲ್ಲಿ ನೀಡುವಂತೆಯೂ ಆದೇಶ ನೀಡಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್
ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್

‘ಶಿವರಾಮ ಕಾರಂತ ಬಡಾವಣೆಯ ವ್ಯಾಪ್ತಿಯಲ್ಲಿ 2018ರ ಆಗಸ್ಟ್‌ 3ರ ಮುಂಚಿತವಾಗಿ ನಿರ್ಮಿಸಿರುವ 300 ಕಟ್ಟಡಗಳಿಗೆ ಈ ಆದೇಶ ಅನ್ವಯವಾಗಲಿದೆ. ಕಟ್ಟಡ ಸಕ್ರಮಕ್ಕೆ ಸಂಬಂಧಿಸಿ ಸಮಿತಿಗೆ ಇದುವರೆಗೆ 6,278 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 300 ಅರ್ಜಿಗಳನ್ನು ಮಾನ್ಯ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ಈ ಸಕ್ರಮ ಪ್ರಕ್ರಿಯೆ ಮೊದಲನೇ ಹಂತದ್ದು. ಮನೆ ನಿರ್ಮಿಸಿದವರಿಗೆ ಪರಿಹಾರ ದೊರೆತಂತಾಗಿದ್ದು, ನಿರಾಳರಾಗಿದ್ದಾರೆ ಎಂದು ವಿವರಿಸಿದರು.

‘ಸುಪ್ರೀಂ ಕೋರ್ಟ್‌ ಬಡವರು ಮತ್ತು ಮಧ್ಯಮ ವರ್ಗದ ಜನತೆಯ ಆಶೋತ್ತರಗಳನ್ನು ಪರಿಗಣಿಸಿ ಈ ಆದೇಶ ನೀಡಿದೆ. ಪ್ರತಿಯೊಬ್ಬರಿಗೂ ಸೂರು ಇರಬೇಕು ಎನ್ನುವ ಆಶಯದೊಂದಿಗೆ 142ನೇ ವಿಧಿ ಅನ್ವಯ ವಿಶೇಷ ಅಧಿಕಾರ ಬಳಸಿಸುಪ್ರೀಂಕೋರ್ಟ್‌ಸಮಾಜಮುಖಿಯಾಗಿ ಈ ತೀರ್ಪು ನೀಡಿದೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಸುಪ್ರೀಂಕೋರ್ಟ್‌ ಇಂತಹ ಮಹತ್ವದ ತೀರ್ಪು ನೀಡುತ್ತದೆ. ಸುಪ್ರೀಂಕೊರ್ಟ್‌ಗೆ ಮಾತ್ರ ಇಂತಹ ಅಧಿಕಾರ ಇದೆ. ಮುಂದೆಯೂ ಇದೇ ರೀತಿ ಆದೇಶ ನೀಡಬಹುದು’ ಎಂದು ತಿಳಿಸಿದರು.

ಸಕ್ರಮಗೊಳಿಸಿರುವ ಈ 300 ಕಟ್ಟಡಗಳ ಮಾಲೀಕರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಸಹ ತಮ್ಮ ನೇತೃತ್ವದ
ಸಮಿತಿಯ ಮಾರ್ಗದರ್ಶನದಲ್ಲಿ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈಗ ಸಕ್ರಮಗೊಳ್ಳಲಿರುವ 300 ಕಟ್ಟಡಗಳನ್ನು ಹೊಂದಿರುವವರು ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗಿದೆ. ಈ ಬಗ್ಗೆ ಬಿಡಿಎ ನಿರ್ಧರಿಸುತ್ತದೆ ಎಂದು ತಿಳಿಸಿದರು.

ಇನ್ನೂ 5,700ಕ್ಕೂ ಹೆಚ್ಚು ಅರ್ಜಿಗಳ ಪರಿಶೀಲನೆ ನಡೆಸಬೇಕಾಗಿದೆ. ಡಿಸೆಂಬರ್‌ 15ರಒಳಗೆ ಮತ್ತೊಂದುವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 2022ರ ಮಾರ್ಚ್‌ 31ರ ಒಳಗೆ ಎಲ್ಲ ಅರ್ಜಿಗಳ ಬಗ್ಗೆ ವರದಿ ನೀಡುವ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಒಟ್ಟು ಮೂರು ವಿಧಗಳಲ್ಲಿ ವಿಭಜಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು, ಸಕ್ಷಮವಲ್ಲದ ಸ್ಥಳೀಯ ಪ್ರಾಧಿಕಾರದಿಂದ(ಗ್ರಾಮ ಪಂಚಾಯಿತಿಗಳು) ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು ಹಾಗೂ ಯಾವುದೇ ಅನುಮತಿಯನ್ನು ಪಡೆಯದೇ ನಿರ್ಮಿಸಿರುವ ಕಟ್ಟಡಗಳೆಂದು ಗುರುತಿಸಲಾಗಿದೆ. ಇವುಗಳ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ಸಾರ್ವಜನಿಕರು ಸಮಿತಿಯ ಮಾಹಿತಿಗಾಗಿ https://jcc-skl.in/ ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದರು.

2018ರ ಆಗಸ್ಟ್‌ 3ರ ನಂತರ ನಿರ್ಮಿಸಿದ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಒಡೆದು ಹಾಕುವಂತೆ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ ಎಂದರು. ಸಮಿತಿ ಸದಸ್ಯರಾದ ಜೈಕರ್ ಜೆರೋಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT