ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಯಪ್ಪನಹಳ್ಳಿ ಟರ್ಮಿನಲ್ ಸಿದ್ಧ

ಬೆಂಗಳೂರು ರೈಲು ಮಾರ್ಗಗಳ ಜಾಲ ಹಿಗ್ಗಿಸಲಿದೆ ಹೊಸ ನಿಲ್ದಾಣ
Last Updated 18 ಅಕ್ಟೋಬರ್ 2020, 21:19 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯನ್ನೇ ಹೋಲುವ ವಿನ್ಯಾಸದೊಂದಿಗೆ ನಿರ್ಮಾಣವಾಗಿರುವ ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್ ನೈರುತ್ಯ ರೈಲ್ವೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ.

ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಬೃಹತ್ ರೈಲು ನಿಲ್ದಾಣ ತಲೆ ಎತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ರೂಪ ನೀಡುವ ಕೆಲಸವಷ್ಟೇ ಪ್ರಗತಿಯಲ್ಲಿದೆ. ಜಾಗತಿಕ ದರ್ಜೆಯ ಈ ನಿಲ್ದಾಣ ಬೆಂಗಳೂರಿನ ರೈಲ್ವೆ ಇತಿಹಾಸಕ್ಕೆ ಅತಿದೊಡ್ಡ ಮೈಲಿಗಲ್ಲಾಗಿ ನಿಲ್ಲಲಿದೆಯಲ್ಲದೇ, ರೈಲು ಮಾರ್ಗಗಳ ನರನಾಡಿಗಳಲ್ಲಿ ಹೊಸ ಚೈತನ್ಯವನ್ನೇ ತುಂಬಲಿದೆ ಎಂಬುದು ರೈಲ್ವೆ ಅಧಿಕಾರಿಗಳ ವ್ಯಾಖ್ಯಾನ.

ನೈರುತ್ಯ ರೈಲ್ವೆ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ದಾಖಲಿಸುತ್ತಿರುವ ಈ ಟರ್ಮಿನಲ್ ಚಿಟ್ಟೆಯಾಕಾರದಲ್ಲಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣವನ್ನು ಹೋಲುವಂತೆ ವಿನ್ಯಾಸಗೊಳಿಸಿದ ಮೊದಲ ರೈಲು ನಿಲ್ದಾಣ ಇದಾಗಿದೆ.

ಒಳಾಂಗಣದಲ್ಲಿ ನೆಲಹಾಸು, ಗೋಡೆಗಳಿಗೆ ಸುಣ್ಣಬಣ್ಣ, ಎಸ್ಕಲೇಟರ್ ಅಳವಡಿಕೆ, ಪ್ಲಾಟ್‌ಫಾರಂಗಳಿಗೆ ಚಾವಣಿ ಹೊದಿಕೆ, ಎರಡೂ ಬದಿಯಲ್ಲಿರುವ ವಿಶಾಲ ಜಾಗದಲ್ಲಿ ವಾಹನ ನಿಲುಗಡೆ ತಾಣ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ.

ಎಲ್ಲ ಏಳು ಪ್ಲಾಟ್‌ಫಾರಂಗಳು, ರೈಲುಗಳ ನಿರ್ವಹಣೆ, ರೈಲು ಸ್ವಚ್ಛತೆಗೆ ಬೇಕಿರುವ ಟ್ರ್ಯಾಕ್‌ಗಳು, ಅವುಗಳಿಗೆ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ. ಮಳೆಯಲ್ಲಿ ಸೋರದಂತೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರತಿ ಪ್ಲಾಟ್‌ಫಾರಂಗಳು 15 ಮೀಟರ್ ಅಗಲ ಮತ್ತು 600 ಮೀಟರ್ ಉದ್ದ ಇವೆ. ಇಡೀ ಪ್ಲಾಟ್‌ಫಾರಂನಲ್ಲಿ ಎಲ್‌ಇಡಿ ದೀಪಗಳು ಬೆಳಗಲಿವೆ. ಎಲ್ಲ ಪ್ಲಾಟ್‌ಫಾರಂಗೂ ತಲುಪಲು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಸುರಂಗ ಮಾರ್ಗಕ್ಕೆ ಇಳಿಯಲು ಪ್ರತಿ ಪ್ಲಾಟ್‌ಫಾರಂನಲ್ಲಿ ಎರಡು ಕಡೆಯಿಂದ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ. ಆರಂಭದಲ್ಲಿ ಮೊದಲ ಪ್ಲಾಟ್‌ಫಾರಂಗೆ ಮಾತ್ರ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಪ್ಲಾಟ್‌ಫಾರಂನಲ್ಲೂ ಈ ಸೌಲಭ್ಯ ವಿಸ್ತರಿಸುವ ಯೋಜನೆಯನ್ನು ಇಲಾಖೆ ಹೊಂದಿದೆ.

ಒಳಾಂಗಣ (ಕಾನ್‌ಕೋರ್ಸ್‌) ಸಂಪೂರ್ಣ ಹವಾನಿಯಂತ್ರಿತ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒಳಗೊಂಡಿದೆ. ಅಂಗವಿಕಲರು ಇಳಿಯಲು ಮತ್ತು ಹತ್ತಲು ಇಳಿಜಾರು ವ್ಯವಸ್ಥೆ ನಿರ್ಮಾಣವಾಗುತ್ತಿದೆ.

‘ಲಾಕ್‌ಡೌನ್ ಸಂದರ್ಭದಲ್ಲೂ ಭರದಿಂದ ಕಾಮಗಾರಿ ನಿರ್ವಹಿಸಿರುವ ಕಾರಣ ಅಂತಿಮ ಹಂತಕ್ಕೆ ಬಂದು ತಲುಪಿದ್ದೇವೆ. ಕೋವಿಡ್ ಕಾರಣ ರೈಲುಗಳ ಸಂಚಾರ ಪರಿಪೂರ್ಣವಾಗಿ ಆರಂಭಗೊಂಡಿಲ್ಲ. ಕಾರ್ಯಾಚರಣೆ ಆರಂಭವಾದರೆ ಇಲ್ಲಿಂದಲೇ ರೈಲುಗಳ ಸಂಚಾರ ಆರಂಭವಾಗಲಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ಕಡಿಮೆಯಾಗಲಿದೆ ಕೆಎಸ್‌ಆರ್‌, ಯಶವಂತಪುರ ನಿಲ್ದಾಣದ ಒತ್ತಡ

ಕೆಎಸ್‌ಆರ್‌ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣದ ನಂತರ ಅತೀ ಹೆಚ್ಚು ರೈಲುಗಳು ಕಾರ್ಯಾಚರಣೆಗೊಳ್ಳುವ ನಗರದ ಮೂರನೇ ನಿಲ್ದಾಣ ಇದಾಗಲಿದೆ.

ಈ ಎರಡೂ ರೈಲು ನಿಲ್ದಾಣಗಳಲ್ಲಿ ಸದ್ಯ (ಕೋವಿಡ್‌ ಪೂರ್ವ) ಒಂದೇ ಒಂದು ಹೆಚ್ಚುವರಿ ರೈಲು ಸಂಚಾರಕ್ಕೂ ಅವಕಾಶ ಇಲ್ಲ. ಎರಡೂ ನಿಲ್ದಾಣಗಳು ಅತ್ಯಂತ ಒತ್ತಡದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಮೂರನೇ ನಿಲ್ದಾಣವಾದ ಬೈಯಪ್ಪನಹಳ್ಳಿ ಟರ್ಮಿನಲ್ ಆರಂಭವಾದರೆ ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಹುಬ್ಬಳ್ಳಿ ಕಡೆಗೆ ಇದೇ ನಿಲ್ದಾಣದಿಂದ ನೇರವಾಗಿ ರೈಲುಗಳ ಕಾರ್ಯಾಚರಣೆ ಆರಂಭಿಸಲು ಸಾಧ್ಯವಿದೆ. ಆಗ ಎರಡೂ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂಬುದು ರೈಲ್ವೆ ಇಲಾಖೆಯ ಲೆಕ್ಕಾಚಾರ.

ಹೊಸ ನಿಲ್ದಾಣದಿಂದ ಹೊಸದಾಗಿ ರೈಲು ಮಾರ್ಗಗಳಲ್ಲೂ ಕಾರ್ಯಾಚರಣೆ ಮಾಡಬಹುದು. ಈಗಾಗಲೇ ಕೆಎಸ್‌ಆರ್ ಮತ್ತು ಯಶವಂತಪುರದಿಂದ ಕಾರ್ಯಾಚರಣೆಗೊಳ್ಳುತ್ತಿರುವ ರೈಲುಗಳನ್ನೂ ಅಲ್ಲಿಗೆ ಸ್ಥಳಾಂತರಿಸಬಹುದು. ಆಗ ಎರಡೂ ನಿಲ್ದಾಣಗಳಿಂದ ಹೊಸ ಮಾರ್ಗದ ರೈಲು ಕಾರ್ಯಾಚರಣೆಗೆ ಅವಕಾಶ ಸಿಗಲಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣವರ್.

ಯಶವಂತಪುರ ಅಥವಾ ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿನ ಟ್ರ್ಯಾಕ್ ನಿರ್ವಹಣೆ ಸಂದರ್ಭ ಎದುರಾದರೆ ಸದ್ಯ ಕೆಲ ರೈಲುಗಳ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಇದೆ. ಹೊಸ ನಿಲ್ದಾಣ ಆರಂಭವಾದರೆ ತಾತ್ಕಾಲಿಕವಾಗಿ ಕೆಲ ದಿನಗಳ ಮಟ್ಟಿಗೆ ಅಲ್ಲಿಗೆ ಸ್ಥಳಾಂತರ ಮಾಡಬಹುದಾಗಿದೆ. ಉಪನಗರ ರೈಲುಗಳ ಕಾರ್ಯಾಚರಣೆಗೂ ಅನುಕೂಲ ಆಗಲಿದೆ ಎಂದರು.

ತಡೆ ರಹಿತ ಗೂಡ್ಸ್‌ ಸಂಚಾರ

ಸರಕು ಸಾಗಣೆ(ಗೂಡ್ಸ್‌) ರೈಲುಗಳು ತಡೆ ರಹಿತವಾಗಿ ಸಂಚರಿಸಲು ಈ ನಿಲ್ದಾಣದಲ್ಲಿ ವ್ಯವಸ್ಥೆ ಇದೆ. ಕೆಎಸ್ಆರ್‌ ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇಲ್ಲ.

ಈ ಎರಡೂ ನಿಲ್ದಾಣಗಳನ್ನು ಗೂಡ್ಸ್ ರೈಲುಗಳು ಹಾದು ಹೋಗಬೇಕಿದ್ದರೆ ಪ್ರಯಾಣಿಕರ ರೈಲುಗಳು ನಿಲ್ಲುವ ಪ್ಲಾಟ್‌ಫಾರಂ ಖಾಲಿ ಮಾಡಿಕೊಡಬೇಕಿದೆ.

ಬೈಯಪ್ಪನಹಳ್ಳಿ ಟರ್ಮಿನಲ್‌ನಲ್ಲಿ ಗೂಡ್ಸ್ ರೈಲುಗಳ ಓಡಾಟಕ್ಕೇ ಪ್ರತ್ಯೇಕ(ಬೈಪಾಸ್‌) ನಾಲ್ಕು ಪಥಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರ ರೈಲುಗಳ ನಿಲುಗಡೆ ತಾಣಕ್ಕೆ ಬಾರದೆಯೇ ತಮ್ಮ ಪಾಡಿಗೆ ಸಂಚರಿಸಬಹುದಾಗಿದೆ.

ಎಲ್ಲವೂ ಸ್ವಯಂ ಚಾಲಿತ

ಹೊಸ ನಿಲ್ದಾಣದಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲವೂ ಸ್ವಯಂ ಚಾಲಿತವಾಗಿ ನಿರ್ವಹಣೆಯಾಗಲಿದೆ.

ಇಡೀ ರೈಲು ನಿಲ್ದಾಣದ ಕಾರ್ಯಾಚರಣೆಯನ್ನು ಕಂಪ್ಯೂಟರ್ ಮೌಸ್ ತುದಿಯಲ್ಲೇ ಸ್ಟೇಷನ್ ಮಾಸ್ಟರ್ ನಿರ್ವಹಿಸಬಹುದು. ಪ್ಲಾಟ್‌ಫಾರಂಗಾಗಿ ರೈಲುಗಾಡಿಗಳು ಕಾದು ನಿಲ್ಲಬೇಕಾದ ಸಮಯ ಇದರಿಂದ ಉಳಿಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೈರುತ್ಯ ರೈಲ್ವೆ ವಿಭಾಗದಲ್ಲೇ ‌ಈ ರೀತಿ ಸಮಗ್ರವಾಗಿ ಸ್ವಯಂ ಚಾಲಿತ ವ್ಯವಸ್ಥೆ ಹೊಂದಿರುವ ದೊಡ್ಡ ನಿಲ್ದಾಣ ಇದಾಗಲಿದೆ. ಸದ್ಯ ಹೊಸಪೇಟೆ ನಿಲ್ದಾಣ ಈ ರೀತಿ ಸೌಲಭ್ಯವನ್ನು ಹೊಂದಿದೆ. ಬೈಯಪ್ಪನಹಳ್ಳಿ ಹೊಸ ನಿಲ್ದಾಣಕ್ಕೆ ಹೋಲಿಸಿದರೆ ಹೊಸಪೇಟೆ ನಿಲ್ದಾಣ ಚಿಕ್ಕದು ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ಮಾಹಿತಿ ನೀಡಿದರು.

ಈ ನಿಲ್ದಾಣದಲ್ಲಿ 70 ಪಾಯಿಂಟ್‌ಗಳು, 137 ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಮಳೆನೀರು ಸಂಗ್ರಹ, ಆಹಾರ ಮಳಿಗೆ

ಹಲವು ಮೊದಲುಗಳನ್ನು ದಾಖಲಿಸಿರುವ ಈ ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದೆ. 4 ಲಕ್ಷ ಲೀಟರ್‌ ನೀರಿನ ಸಮರ್ಥದ ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸಹ ಇಲ್ಲಿದೆ.

ಟರ್ಮಿನಲ್ ಒಳಗಿನ ಮೊದಲ ಮಹಡಿಯಲ್ಲಿ ಆಹಾರ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿಗೆ ಹೋಗಲು ಎಸ್ಕಲೇಟರ್‌ಗಳನ್ನೂ ಅಳವಡಿಸಲಾಗುತ್ತಿದೆ. ನೆಲಮಹಡಿಯಲ್ಲಿ ಪ್ರಯಾಣಿಕರ ವಿಶ್ರಾಂತಿಗೆ ಸ್ಥಳ, ರೈಲುಗಾಡಿಗಳ ಬರುವ ಮತ್ತು ಹೋಗುವ ಮಾಹಿತಿ ಒದಗಿಸುವ ಡಿಜಿಟಲ್ ಫಲಕಗಳು, ಮೊಬೈಲ್ ಫೋನ್‌ ಚಾರ್ಜಿಂಗ್ ಕೇಂದ್ರಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಅಳವಡಿಸಲಾಗುತ್ತಿದೆ ಎಂದು ಇ.ವಿಜಯಾ ವಿವರಿಸಿದರು.

ರಸ್ತೆ ಸಂಪರ್ಕವೇ ಪ್ರಯಾಸ

ಸುಸಜ್ಜಿತವಾಗಿ ನಿರ್ಮಾಣವಾಗುತ್ತಿರುವ ರೈಲು ನಿಲ್ದಾಣಕ್ಕೆ ಸಂಪರ್ಕವೇ ಪ್ರಯಾಸವಾಗುವ ಸಾಧ್ಯತೆ ಇದೆ.

ಈ ನಿಲ್ದಾಣದಿಂದಲೇ ರೈಲುಗಾಡಿಗಳ ಕಾರ್ಯಾಚರಣೆ ಆರಂಭವಾದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ವಾಹನಗಳು ಬಂದು ಹೋಗುವ ಅವಕಾಶ ಇಲ್ಲ ಎನ್ನುತ್ತಾರೆ ರೈಲ್ವೆ ಹೋರಾಟಗಾರ ರಾಜ್‌ಕುಮಾರ್ ದುಗಾರ್.

ಬಾಣಸವಾಡಿ ಮುಖ್ಯ ರಸ್ತೆ ಮತ್ತು ವಿವೇಕಾನಂದ ಮೆಟ್ರೊ ನಿಲ್ದಾಣದ ಕಡೆಯಿಂದ ಹೋಗಬಹುದಾದ ಎರಡು ರಸ್ತೆಗಳಿವೆ. ಆದರೆ, ಅವರೆಡೂ ಕಿರಿದಾದ ರಸ್ತೆಗಳು. ಬಾಣಸವಾಡಿ ಮುಖ್ಯ ರಸ್ತೆಯಿಂದ ರೈಲು ನಿಲ್ದಾಣಕ್ಕೆ ಇಳಿಯಲು ಮಾರ್ಗವೇ ಇಲ್ಲ. ಇರುವ ರಸ್ತೆಯಲ್ಲಿ ಕಾರುಗಳನ್ನು ಹೊರತುಪಡಿಸಿ ಬಸ್ ರೀತಿಯ ದೊಡ್ಡ ವಾಹನಗಳು ಸಂಚರಿಸಲು ಆಗುವುದೇ ಇಲ್ಲ ಎಂದು ಸಂಜೀವ್ ದ್ಯಾಮಣ್ಣನವರ್ ಹೇಳಿದರು.

ಪ್ರಯಾಣಿಕರ ವಾಹನ ಮತ್ತು ಸರಕು ಸಾಗಣೆ ವಾಹನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ರಸ್ತೆ ಸಂಪರ್ಕದ ವ್ಯವಸ್ಥೆಯನ್ನು ನಿಲ್ದಾಣದ ಸಮಗ್ರ ಯೋಜನೆಯಲ್ಲೇ ಅಳವಡಿಸಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರಯೋಜನಗಳೇನು

* ವೈಟ್‌ಫೀಲ್ಡ್, ಕೆ.ಆರ್‌.ಪುರ, ಮಹದೇವಪುರ, ಬೈಯಪ್ಪನಹಳ್ಳಿ ಪ್ರಯಾಣಿಕರಿಗೆ ಸಮೀಪದ ನಿಲ್ದಾಣ

* ಯಶವಂತಪುರ–ಕೆಎಸ್‌ಆರ್‌ ರೈಲು ನಿಲ್ದಾಣದ ಮೇಲಿನ ಒತ್ತಡ ನಿವಾರಣೆ

* ಹೊಸ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಲು ಅವಕಾಶ

* ಉಪನಗರ ಸಂಪರ್ಕಿಸುವ ಮೆಮು ರೈಲುಗಳ ಸಂಖ್ಯೆ ಹೆಚ್ಚಿಸಲು ಅವಕಾಶ

* ಟ್ರ್ಯಾಕ್‌ ದುರಸ್ತಿ ಸಂದರ್ಭದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸದೆ ನಿರ್ವಹಣೆ ಮಾಡಬಹುದು

* ತಡೆ ರಹಿತವಾಗಿ ಗೂಡ್ಸ್ ರೈಲುಗಳ ಕಾರ್ಯಾಚರಣೆ

ಅಂಕಿ–ಅಂಶ

₹240 ಕೋಟಿ

ಟರ್ಮಿನಲ್ ನಿರ್ಮಾಣ ವೆಚ್ಚ

7

ಪ್ಲಾಟ್‌ಫಾರಂ ಸಂಖ್ಯೆ

600 ಮೀಟರ್

ಪ್ಲಾಟ್‌ಫಾರಂ ಉದ್ದ

137

ಸಿಗ್ನಲ್‌ಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT