ಭಾನುವಾರ, ಜುಲೈ 3, 2022
26 °C
ಪರಿಷ್ಕೃತ ನಗರ ಮಹಾಯೋಜನೆ ಇಂಗ್ಲಿಷ್‌ನಲ್ಲಿ ತಯಾರಿಸುವಂತೆ ಷರತ್ತು

ರಾಜಧಾನಿಯ ಭವಿಷ್ಯ ನಿರ್ಧರಿಸುವ ಯೋಜನೆಯೇ ಕನ್ನಡದಲ್ಲಿ ಇರುವುದಿಲ್ಲ!

ಪ್ರವೀಣ್‌ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದೆಡೆ ಸರ್ಕಾರ ಆಡಳಿತದಲ್ಲಿ ಕನ್ನಡ ಕಡ್ಡಾಯ, ಕನ್ನಡ ಕಾಯಕ ವರ್ಷ ಎಂದು ಘೋಷಣೆ ಮಾಡುತ್ತಿದೆ. ಇನ್ನೊಂದೆಡೆ ರಾಜ್ಯದ ರಾಜಧಾನಿಯ ಭವಿಷ್ಯದ ಬೆಳವಣಿಗೆಯನ್ನು ನಿರ್ಧರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತಯಾರಿಸುತ್ತಿರುವ ‘ಪರಿಷ್ಕೃತ ನಗರ ಮಹಾ ಯೋಜನೆ’ಯ (ಆರ್‌ಎಂಪಿ) ಕರಡಿನಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ!

2041ರ ವರೆಗೆ ನಗರದ ಬೆಳವಣಿಗೆ ಯಾವ ದಿಸೆಯಲ್ಲಿ ಸಾಗಬೇಕು ಎಂಬ ರೂಪರೇಷೆಗಳನ್ನು ನಿರ್ಧರಿಸಲು ಬಿಡಿಎ ಆರ್‌ಎಂಪಿಯನ್ನು ಸಿದ್ಧಪಡಿಸುವ ಸಲಹಾ ಸಂಸ್ಥೆಯ ಆಯ್ಕೆಗೆ ಟೆಂಡರ್‌ ಆಹ್ವಾನಿಸಿದೆ. ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಅನ್ವಯವಾಗುವ ಈ ಆರ್‌ಎಂಪಿಯ ಕರಡು ಪ್ರಸ್ತಾವವು ಇಂಗ್ಲಿಷ್‌ನಲ್ಲೇ ಇರಬೇಕು ಎಂದು ಬಿಡಿಎ ಷರತ್ತು ವಿಧಿಸಿದೆ.

ಪ್ರಸ್ತಾವ ಸಿದ್ಧಪಡಿಸಲು ಆಯ್ಕೆಯಾಗುವ ಸಂಸ್ಥೆಯು 18 ಮಂದಿಯ ತಂಡವನ್ನು ರಚಿಸಬೇಕು. ಅದರಲ್ಲಿ ಒಬ್ಬ ಮುಖ್ಯಸ್ಥ, ನಾಲ್ವರು ನಗರ ಯೋಜನಾ ತಜ್ಞರು, ಇಬ್ಬರು ಸಂಚಾರ ಯೋಜನಾ ತಜ್ಞರು ಇರಬೇಕು. ಮೂಲಸೌಕರ್ಯ ತಜ್ಞ, ನಗರ ಯೋಜಕ, ಜಿಐಎಸ್‌ ತಜ್ಞರು, ಸಿವಿಲ್ ಎಂಜಿನಿಯರ್‌, ಸಾಮಾಜಿಕ– ಆರ್ಥಿಕ ತಜ್ಞ, ಪರಿಸರ ಎಂಜಿನಿಯರ್‌, ಆರ್ಥಿಕ ವಿಶ್ಲೇಷಕ, ವಾಸ್ತುಶಿಲ್ಪಿ, ಸರ್ವೆ ವ್ಯವಸ್ಥಾಪಕ, ಅಂಕಿ– ಅಂಶ ವಿಶ್ಲೇಷಕರನ್ನು ತಂಡವು ಒಳಗೊಂಡಿರಬೇಕು. ಈ 18 ಮಂದಿಯಲ್ಲಿ ಕನಿಷ್ಠ ಪಕ್ಷ ಇಬ್ಬರಾದರೂ ಕನ್ನಡ ಭಾಷೆ ಬಲ್ಲವರಾಗಿರಬೇಕು ಎಂದೂ ಟೆಂಡರ್‌ ಷರತ್ತುಗಳಲ್ಲಿ ವಿವರಿಸಲಾಗಿದೆ. ನಗರ ಯೋಜನೆ ಕರಡನ್ನು  ಇಂಗ್ಲೀಷ್‌ನಲ್ಲೇ  ಸಿದ್ಧಪಡಿಸಬೇಕು ಎಂದು ಷರತ್ತು ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ಸರ್ಕಾರ ಹೇಳುವುದು ಒಂದು ಮಾಡುವುದು ಮತ್ತೊಂದು. ರಾಜ್ಯದ ರಾಜಧಾನಿಯ ಮಟ್ಟಿಗೆ ಪರಿಷ್ಕೃತ ನಗರ ಮಹಾ ಯೋಜನೆ ಮಹತ್ವದ ದಾಖಲೆ. ಅದನ್ನೇ ಕನ್ನಡದಲ್ಲಿ ಸಿದ್ಧಪಡಿಸುವುದಿಲ್ಲ ಎಂದರೆ ಏನರ್ಥ. 18 ಮಂದಿ ತಂಡದಲ್ಲಿ ಇಬ್ಬರಿಗೆ ಮಾತ್ರ ಕನ್ನಡ ತಿಳಿದಿದ್ದರೆ ಸಾಕೇ. ಕನ್ನಡವೇ ಬಾರದವರು ತಯಾರಿಸುವ ಯೋಜನೆಯು ನಗರದ ಪಾಲಿಗೆ ಎಷ್ಟರಮಟ್ಟಿಗೆ ಜನಸ್ನೇಹಿ ಆಗಿರಬಹುದು’ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ಪ್ರಶ್ನಿಸಿದರು.

ನಗರ ಮಹಾ ಯೋಜನೆಯ ನಗರದ ನೀತಿ ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕನ್ನಡದಲ್ಲೇ ನೀಡದಿದ್ದರೆ ಬಹುಪಾಲು ಜನರಿಗೆ ಅರ್ಥವಾಗುವುದಿಲ್ಲ. ಇದನ್ನೇ ಇಂಗ್ಲಿಷ್‌ನಲ್ಲೇ ತಯಾರಿಸಬೇಕು ಎಂದು ಬಿಡಿಎ ಷರತ್ತು ವಿಧಿಸುತ್ತದೆ ಎಂದರೆ, ಅದು ಜನರಿಂದ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದರ್ಥ. ಇನ್ನೂ ಸಮಯ ಮಿಂಚಿಲ್ಲ. ಇನ್ನಾದರೂ ಈ ಪ್ರಸ್ತಾವನೆಯನ್ನು ಮೊದಲು ಕನ್ನಡದಲ್ಲೇ ತಯಾರಿಸಲು ಪ್ರಾಧಿಕಾರ ಕ್ರಮ ಕೈಗೊಳ್ಳಲಿ. ಬಳಿಕ ಬೇಕಾದರೆ ಇಂಗ್ಲಿಷ್‌ಗೆ ಭಾಷಾಂತರ ಮಾಡಲಿ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಸೂರ್ಯಕಿರಣ್ ಒತ್ತಾಯಿಸಿದರು.‌

ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಡಿಎ ನಗರ ಯೋಜನಾ ಸದ‌ಸ್ಯರು ಕರೆಗೆ ಲಭ್ಯವಾಗಲಿಲ್ಲ.

‘ಅವಧಿ 2041ರವರೆಗೆ ವಿಸ್ತರಣೆ’
ಬಿಡಿಎ ಈ ಹಿಂದೆ 2031ರವರೆಗೆ ಪರಿಷ್ಕೃತ ನಗರ ಮಹಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಂಪಿಯನ್ನು ಹೊಸತಾಗಿ ತಯಾರಿಸಲು ನಿರ್ಧರಿಸಿತು. 2020ರ ನ.2ರಂದು ಬಿಡಿಎ ಈ ಬಗ್ಗೆ ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಈಗ ಪರಿಷ್ಕೃತ ನಗರ ಮಹಾ ಯೋಜನೆ ಅವಧಿಯನ್ನು 2031ರ ಬದಲು 2041ರವರೆಗೆ ವಿಸ್ತರಿಸಲಾಗಿದೆ.

‘ಈ ಹಿಂದೆ  ಸಿದ್ಧಪಡಿಸಿದ ಆರ್‌ಎಂಪಿಯನ್ನು ಸಂಪೂರ್ಣ ತಿರಸ್ಕರಿಸಿ ಹೊಸತಾಗಿ ಆರ್‌ಎಂಪಿ ತಯಾರಿಸುವುದರಲ್ಲಿ ಅರ್ಥವಿಲ್ಲ. ಹಳೆಯ ಯೋಜನೆಗೆ ಅತ್ಯವಶ್ಯಕವಾಗಿರುವ ಕೆಲವು  ಅಂಶಗಳನ್ನು ಸೇರಿಸಿದ್ದರೆ ಸಾಕಿತ್ತು. ಈ ಬಾರಿಯಾದರೂ ಬಿಡಿಎ ಪ್ರಜಾಸತ್ತಾತ್ಮಕವಾಗಿ ಯೋಜನೆ ಸಿದ್ಧಪಡಿಸಬೇಕು. ಮೂಲಸೌಕರ್ಯದ ಜೊತೆಗೆ ಜನರ ಆರ್ಥಿಕ– ಸಮಾಜಿಕ ಅಭಿವೃದ್ಧಿಯ ಬಗ್ಗೆಯೂ ಕಾಳಜಿವಹಿಸಬೇಕು’ ಎಂದು ಜನಾಗ್ರಹ ಸಂಸ್ಥೆಯ ಶ್ರೀನಿವಾಸ ಅಲವಿಲ್ಲಿ ಅಭಿಪ್ರಾಯಪಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು