ಸೋಮವಾರ, ಏಪ್ರಿಲ್ 19, 2021
24 °C
ಪರದಾಡಿದ ಮಹಿಳೆಯರು–ವೃದ್ಧರು; ಪೊಲೀಸ್ ಭದ್ರತೆ ನಡುವೆ ಕೆಲ ಬಸ್‌ಗಳ ಸಂಚಾರ

ಸಾರಿಗೆ ಮುಷ್ಕರ: ಖಾಸಗಿ ವಾಹನಗಳ ದರ್ಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳ ದರ್ಬಾರ್, ಎಲ್ಲ ಮಾರ್ಗಗಳಿಗೂ ಬಸ್‌ಗಳಿಲ್ಲದ ಪರದಾಡಿದ ಮಹಿಳೆಯರು–ವೃದ್ಧರು, ಪ್ರಯಾಣಿಕರಿಗಾಗಿ ಕಾದ ಖಾಸಗಿ ಬಸ್‌ಗಳು, ಪೊಲೀಸ್ ಭದ್ರತೆಯಲ್ಲಿ ಸಂಚರಿಸಿದ ಕೆಲವೇ ಬಸ್‌ಗಳು...

ಇದು ಸಾರಿಗೆ ನೌಕರರ ಮುಷ್ಕರದಿಂದ ಬುಧವಾರ ನಗರದಲ್ಲಿ ಕಂಡುಬಂದ ದೃಶ್ಯ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬುಧವಾರ ಖಾಸಗಿ ಬಸ್‌ಗಳು ದಾಂಗುಡಿ ಇಟ್ಟಿದ್ದವು. ಸರ್ಕಾರಿ ಬಸ್‌ಗಳು ನಿಲ್ಲಬೇಕಿದ್ದ ಜಾಗದಲ್ಲಿ ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು.

ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಕಲಾಸಿಪಾಳ್ಯ ನಿಲ್ದಾಣಗಳಲ್ಲಿಯೂ ಖಾಸಗಿ ಬಸ್‌ಗಳು ನಿಂತಿದ್ದವು. ಬಸ್ ದರವನ್ನೂ ನಿಗಮಗಳೇ ನಿಗದಿ ಮಾಡಿ ಅದರ ಪಟ್ಟಿಯನ್ನು ನೀಡಿದ್ದವು. ಆದರೆ, ನಿಗದಿಗಿಂತ ಹೆಚ್ಚು ದರ ಪಡೆಯಲಾಗುತ್ತಿದೆ. ಹೊರ ಊರುಗಳಿಗೆ ತೆರಳುವ ಬಸ್‌ಗಳಲ್ಲಿ ದುಪ್ಪಟ್ಟು ದರ ಪಡೆದು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ ಎಂಬ ದೂರುಗಳು ಕೇಳಿ ಬಂದವು.

’ಸರ್ಕಾರಿ ಬಸ್‌ಗಳಿಗೆ ಡೀಸೆಲ್‌ ದರದಲ್ಲಿ ರಿಯಾಯಿತಿ ಸಿಗುತ್ತದೆ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ಇರುವುದಿಲ್ಲ. ಹೀಗಾಗಿ, ₹10ರಿಂದ ₹20 ಹೆಚ್ಚಿನ ದರ ಪಡೆಯಬೇಕಿರುವುದು ಅನಿವಾರ್ಯ‘ ಎಂದು ಕಲಾಸಿಪಾಳ್ಯದಲ್ಲಿ ಬಸ್‌ ಚಾಲಕರು ಮತ್ತು ಮಾಲೀಕರು ಹೇಳಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಖಾಸಗಿ ಬಸ್‌ ಚಾಲಕರ ನಡುವೆ ಜಟಾಪಟಿಯೂ ನಡೆಯಿತು.

ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮುಷ್ಕರ ನಡೆಯಲಿರುವ ಮಾಹಿತಿ ಇದ್ದ ಕಾರಣ ಪ್ರಯಾಣಿಕರು ನಿಲ್ದಾಣಗಳತ್ತ ಬರಲಿಲ್ಲ. ಆದರೆ, ಅಲ್ಲಲ್ಲಿ ಇರುವ ಪಿಕ್‌ಅಪ್ ಪಾಯಿಂಟ್‌ಗಳ ಬಳಿ ಬಸ್‌ಗಳಿಗಾಗಿ ಪ್ರಯಾಣಿಕರು ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳೊಂದಿಗೆ ಮಹಿಳೆಯರು, ವೃದ್ಧರು ಬಸ್‌ಗಾಗಿ ಕಾಯುತ್ತಿದ್ದರು.

ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮುಷ್ಕರದ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು. ಮೀಟರ್ ಹಾಕದೆ ಕೇಳಿದಷ್ಟು ಹಣಕ್ಕೆ ಬೇಡಿಕೆ ಇಟ್ಟು ಪ್ರಯಾಣಿಕರನ್ನು ಕರೆದೊಯ್ಯುವುದೂ ಸಾಮಾನ್ಯವಾಗಿತ್ತು.


ಕಲಾಸಿಪಾಳ್ಯದಲ್ಲಿ ಖಾಸಗಿ ಬಸ್‌ಗಳಿಗೆ ಹತ್ತುತ್ತಿರುವ ಪ್ರಯಾಣಿಕರು

145 ಬಸ್‌ ಕಾರ್ಯಾಚರಣೆ
ಮುಷ್ಕರದ ನಡುವೆಯೂ 145 ಬಸ್‌ಗಳು ನಗರದಲ್ಲಿ ಕಾರ್ಯಾಚರಣೆ ನಡೆಸಿದವು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ನಗರದಲ್ಲಿ 1124 ಖಾಸಗಿ ಬಸ್ ಮತ್ತು 2 ಸಾವಿರ ಮ್ಯಾಕ್ಸಿಕ್ಯಾಬ್‌ಗಳು ಸಂಚರಿಸಿದ್ದು, ಪ್ರಯಾಣಿಕರಿಗೆ ತೊಂದರೆ ಆಗಿಲ್ಲ ಎಂದು ತಿಳಿಸಿದೆ.

ಪ್ರಯಾಣಿಕ ಸಾವು
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚನ್ನಪ್ಪ ಎಂಬ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟರು.

ಜಿಗಣಿಯಿಂದ ಬಂದಿದ್ದ ಅವರು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ಅಸುನೀಗಿದರು.

ಸನ್ಮಾನ
ಮುಷ್ಕರ ಇದ್ದರೂ ಉತ್ತರಹಳ್ಳಿ ಡಿಪೋ–33ರ ಚಾಲಕ ತ್ಯಾಗರಾಜು ಬಸ್‌ ಚಾಲನೆ ಮಾಡಿದರು. ಇದಕ್ಕಾಗಿ ಹೋಟೆಲ್ ಮಾಲೀಕ ಶ್ರೀಧರ ಭಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವೀರಣ್ಣ ಸನ್ಮಾನ ಮಾಡಿದರು.

ರೈತ ಸಂಘ ಬೆಂಬಲ

ಸಾರಿಗೆ ನೌಕರರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಕೂಡ ಬೆಂಬಲ ಸೂಚಿಸಿದೆ. ಆದರೆ, ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿ ಚಳವಳಿ ಮುಂದುವರಿಸಬೇಕು ಎಂದು ಸಲಹೆ ನೀಡಿದೆ.

ಬಡವರು ಮತ್ತು ರೈತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ನೌಕರರಿದ್ದಾರೆ. ಬಿಸಿಲು, ಮಳೆ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.

ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಸೂಕ್ತ ಅಲ್ಲ. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಅವಕಾಶ ಆಗಬಾರದು ಎಂದು ತಿಳಿಸಿದ್ದಾರೆ.


ಯಶವಂತಪುರ ಡಿಪೋನಲ್ಲಿ ಸಾಲುಗಟ್ಟಿ ನಿಂತಿರುವ ಬಿಎಂಟಿಸಿ ಬಸ್‌ಗಳು

ಮೆಟ್ರೊ ರೈಲು ಪ್ರಯಾಣಕ್ಕೆ ನಿರಾಸಕ್ತಿ
ನೌಕರರ ಮುಷ್ಕರ ಇದ್ದರೂ ಮೆಟ್ರೊ ರೈಲು ಪ್ರಯಾಣಕ್ಕೆ ಜನ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೂ, 10 ನಿಮಿಷಕ್ಕೆ ಬದಲಾಗಿ ನಾಲ್ಕೂವರೆಯಿಂದ ಐದು ನಿಮಿಷಕ್ಕೆ ರೈಲುಗಳು ಬುಧವಾರ ಸಂಚರಿಸಿದವು.

ಪ್ರತಿನಿತ್ಯ 247 ಟ್ರಿಪ್‌ ಸಂಚರಿಸುತ್ತಿದ್ದ ರೈಲುಗಳು, ಬುಧವಾರ 289 ಟ್ರಿಪ್‌ ಸಂಚರಿಸಿದವು. ಪ್ರಯಾಣಿಕರ ಸಂಖ್ಯೆ ಸಾಮಾನ್ಯ ದಿನಗಳಿಗಿಂತ ಕಡಿಮೆ ಇತ್ತು. 1.27 ಲಕ್ಷ ಜನ ಪ್ರಯಾಣಿಸಿದರು. ಬೇರೆ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ 1.60 ಲಕ್ಷ ಪ್ರಯಾಣಿಸುತ್ತಿದ್ದರು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು