ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗುತ್ತಿದೆ ದೇಸಿ ಭಾಷೆಗಳ ಪದಕೋಶ: ಪಂಜು ಗಂಗೊಳ್ಳಿ ಕಳವಳ

‘ಕುಂದಾಪ್ರ ಕನ್ನಡ’ ಸಂವಾದ
Last Updated 19 ಡಿಸೆಂಬರ್ 2021, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಗ್ಲಿಷ್‌ ನಿಘಂಟುಗಳ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿದ್ದರೆ, ಭಾರತೀಯ ದೇಸಿ ಭಾಷೆಗಳ ಹಲವು ಪದಗಳು ಬಳಕೆಯಾಗದೆ ನಶಿಸುತ್ತಿವೆ’ ಎಂದು ವ್ಯಂಗ್ಯಚಿತ್ರಕಾರ ಹಾಗೂ ಲೇಖಕ ಪಂಜು ಗಂಗೊಳ್ಳಿ ಕಳವಳ ವ್ಯಕ್ತಪಡಿಸಿದರು.

‘ಕುಂದಾಪ್ರ ಕನ್ನಡ’ ಕುರಿತ ಸಂವಾದದಲ್ಲಿ ಭಾನುವಾರ ಅವರು ಮಾತನಾಡಿದರು.

ಕುಂದಾಪ್ರ ಕನ್ನಡದಲ್ಲಿ ಶಬ್ದವನ್ನು ಸಂಕ್ಷಿಪ್ತಗೊಳಿಸುವ ಸಾಧ್ಯತೆ ಹಾಗೂ ನುಡಿಗಟ್ಟುಗಳಿಗೆ ಇರುವ ಶಕ್ತಿಯನ್ನು ಅವರು ವಿವರಿಸಿದ ಅವರು, ‘ಓಡ್ಸುವವ ಸೋತಷ್ಟೇ, ಬೆರ್ಸುವವನೂ ಸೋಲ್ತಾ’ ಎಂಬ ನುಡಿಗಟ್ಟು ಹೇಗೆ ಯುದ್ಧದ ನಿಷ್ಪ್ರಯೋಜಕವನ್ನು, ಅದರ ಅಗಾಧ ಪರಿಣಾಮವನ್ನು ನಾಲ್ಕೇ ಪದಗಳಲ್ಲಿ ಕಟ್ಟಿಕೊಡುತ್ತದೆ ಎಂದು ಉದಾಹರಣೆ ನೀಡಿದರು.

‘ಕುಂದಾಪುರ ಪರಿಸರದ ವ್ಯಾಪ್ತಿಗೆ ಈ ಭಾಷೆ ಸೀಮಿತವಾಗಿದ್ದರೂ, ಇದರ ಆಳ, ವಿಸ್ತಾರ ಅಗಾಧ. ಊರಿಂದ ಊರಿಗೆ, ಸಮುದಾಯದಿಂದ ಸಮುದಾಯಕ್ಕೆ ಶಬ್ದಗಳ ಬಳಕೆಯಲ್ಲಿ ವೈವಿಧ್ಯವಿದೆ. ಸಾಮಾನ್ಯವಾಗಿ ಪ್ರತಿ 20 ಕಿ.ಮೀ ಪ್ರದೇಶಕ್ಕೆ ಬಬ್ದಗಳ ಬಳಕೆ, ಅರ್ಥ ಬದಲಾಗುತ್ತದೆ ಎನ್ನಲಾಗುತ್ತದೆ. ಆದರೆ ಕುಂದಾಪುರ ಕನ್ನಡದಲ್ಲಿ ಪ್ರತಿ 2 ಕಿ.ಮೀ ಪ್ರದೇಶದಲ್ಲೇ ಈ ಬದಲಾವಣೆ ಕಾಣಬಹುದು’ ಎಂದು ನಿದರ್ಶನ ಸಹಿತ ನಿರೂಪಿಸಿದರು.

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ತಾಲ್ಲೂಕು ಹಾಗೂ ಸುತ್ತಮುತ್ತಲಿನ 8 ಲಕ್ಷ ಜನರು ಮಾತನಾಡುವ ಈ ಭಾಷೆಯು, ಪ್ರಾದೇಶಿಕ ರೂಪ ಪಡೆದ ಹಳಗನ್ನಡವೇ ಆಗಿದೆ. ಬೆಂಗಳೂರು, ಮೈಸೂರು ಮೊದಲಾದೆಡೆ, ಇದು ‘ಕೋಟಾ ಕನ್ನಡ’ ಎಂದು ಪರಿಚಿತ. ಕೆಲವರು ಇದನ್ನು ಕುಂದಗನ್ನಡ ಎಂದು ಕರೆಯವುದೂ ಇದೆ. ಆದರೆ ಸ್ಥಳೀಯರು ಕುಂದಾಪ್ರ ಕನ್ನಡ ಎಂದೇ ಕರೆಯುತ್ತಾರೆ ಎಂದು ವಿವರಿಸಿದರು.

ತಾವು ‘ಕುಂದಾಪ್ರ ಕನ್ನಡ ನಿಘಂಟು’ ರಚಿಸಿದ ಪರಿಯನ್ನು ಅವರು ವಿವರಿಸಿದರು. 2001ರ ಜುಲೈನಲ್ಲಿ ಮುಂಬೈನಲ್ಲಿ ಶುರುವಾದ ಪ್ರಯತ್ನ ಮುಂದಿನ 20 ವರ್ಷಗಳಲ್ಲಿ ಕುಂದಾಪ್ರ ಕನ್ನಡದ 10 ಸಾವಿರಕ್ಕೂ ಹೆಚ್ಚು ಶಬ್ದ, 1,700ಕ್ಕೂ ಹೆಚ್ಚು ನುಡಿಗಟ್ಟುಗಳು ಮತ್ತು ಸಾವಿರಾರು ಹಾಡುಗಳ ಸಂಗ್ರಹದವರೆಗೆ ಹೇಗೆ ಸಾಗಿ ಬಂತು ಎಂಬ ಅನುಭವ ಹಂಚಿಕೊಂಡರು.

ಜಾನಪದ ತಜ್ಞ, ಲೇಖಕ ಎಸ್.ಎ. ಕೃಷ್ಣಯ್ಯ ಅವರು ಕುಂದಾಪುರದ ಸಂಸ್ಕೃತಿಯೊಂದಿಗೆ ಬೆರೆತ ನಾಗಮಂಡಲ, ಕಂಬಳ, ಕೋಳಿ ಅಂಕ, ಕದಿರು ಕಟ್ಟುವುದು ಸೇರಿದಂತೆ ಹಲವು ಆಚರಣೆಗಳು ಮತ್ತು ಅವುಗಳ ಜೊತೆಗೆ ಪಾಕೃತಿಕ ಮತ್ತು ಜನಪದ ಮಹತ್ವವನ್ನ ವಿವರಿಸಿದರು.

ಲೇಖಕಿ ಸುಶೀಲಾ ಪುನೀತಾ ಅವರು ಕನ್ನಡ ಪುಸ್ತಕಗಳ ಇಂಗ್ಲಿಷ್‌ ಭಾಷಾಂತರ ಕಾರ್ಯದ ಸವಾಲುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT