ಶನಿವಾರ, ಮಾರ್ಚ್ 25, 2023
23 °C
ನಮ್ಮ ಮೆಟ್ರೊ ಕಬ್ಬಿಣದ ಚೌಕಟ್ಟು ಉರುಳಿಬಿದ್ದಿದ್ದ ಪ್ರಕರಣ l ಪರಿಶೀಲನಾ ವರದಿ ಸಿದ್ಧಪಡಿಸಿದ ಐಐಟಿ ತಜ್ಞರು

12 ಅಡಿ ಪಿಲ್ಲರ್ ನಿರ್ಮಾಣವೇ ಅವೈಜ್ಞಾನಿಕ: ಐಐಟಿ ತಜ್ಞರ ಪರಿಶೀಲನಾ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ–ಮಗು ಮೃತಪಟ್ಟಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಹೈದರಾಬಾದ್‌ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಜ್ಞರು, ‘ಸ್ಥಳದಲ್ಲಿ ನಿರ್ಮಿಸಲಾಗುತ್ತಿದ್ದ 12 ಅಡಿ ಎತ್ತರದ ಮೆಟ್ರೊ ಪಿಲ್ಲರ್ ನಿರ್ಮಾಣವೇ ಅವೈಜ್ಞಾನಿಕ’ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಪೊಲೀಸರ ಕೋರಿಕೆ ಮೇರೆಗೆ ಜ. 13ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಐಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್. ಸುರಿಯಾ ಪ್ರಕಾಶ್ ಹಾಗೂ ಪ್ರಾಧ್ಯಾಪಕ ಡಾ. ಸುಬ್ರಮಣಿಯಂ ನೇತೃತ್ವದ ತಂಡ ಪರಿಶೀಲನೆ ನಡೆಸಿತ್ತು.

ಮಾದರಿಗಳ ಪರೀಕ್ಷೆ ಹಾಗೂ ಎಂಜಿನಿ ಯರ್‌ಗಳ ಹೇಳಿಕೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಿರುವ ತಜ್ಞರು, ‘ಬಿಎಂಆರ್‌ಸಿಎಲ್ ಹಾಗೂ ನಾಗಾರ್ಜುನ್ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಎಂಜಿನಿಯರ್‌ಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂಬ ಅಂಶವನ್ನೂ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.

‘ಕಬ್ಬಿಣ ಆಧರಿಸಿ ಎತ್ತರದ ಪಿಲ್ಲರ್ ನಿರ್ಮಾಣ ಮಾಡುವಾಗ, ಕೆಲ ಹಂತಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಮೆಟ್ರೊ ಪಿಲ್ಲರ್ ನಿರ್ಮಾಣದಲ್ಲಿ ಕೆಲ ಹಂತಗಳನ್ನೇ ಕೈಬಿಡಲಾಗಿದೆ. ಹೀಗಾಗಿ, ಆಸರೆ ಇಲ್ಲದೇ 12 ಅಡಿ ಎತ್ತರದ ಕಬ್ಬಿಣದ ಚೌಕಟ್ಟು ಉರುಳಿಬಿದ್ದಿದೆ’ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

‘ಹಂತ ಹಂತವಾಗಿ ಕಬ್ಬಿಣದ ಜೊತೆ ಕಾಂಕ್ರಿಟ್ ಹಾಕುತ್ತ, ಪಿಲ್ಲರ್ ನಿರ್ಮಿಸಬೇಕು. ಇದಕ್ಕಾಗಿ ಕೆಲ ದಿನಗಳನ್ನು ಮೀಸಲಿಡಬೇಕು. ಆದರೆ, ಕಡಿಮೆ ಸಮಯದಲ್ಲಿ ಪಿಲ್ಲರ್ ನಿರ್ಮಿಸಬೇಕೆಂಬ ಅವಸರ ದಲ್ಲಿ ಎಂಜಿನಿಯರ್‌ಗಳು ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು
ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ತಿಳಿಸಿವೆ. ಗೋವಿಂದಪುರ ಠಾಣೆ ಪೊಲೀಸರಿಗೆ ಸದ್ಯದಲ್ಲೇ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಹೆಣ್ಣೂರು ಕ್ರಾಸ್ ಬಳಿ ಜ. 10ರಂದು ಸಂಭವಿಸಿದ್ದ ಅವಘಡದಲ್ಲಿ ತೇಜಸ್ವಿನಿ ಸುಲಾಖೆ (28) ಹಾಗೂ ಎರಡೂವರೆ ವರ್ಷದ ವಿಹಾನ್ ಮೃತಪಟ್ಟಿದ್ದರು.

ನಿರ್ಮಾಣ ಹಂತದ ಫಿಲ್ಲರ್ ತೆರವು: ವರದಿ ಅಂಶಗಳು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ನಿರ್ಮಾಣ ಹಂತದ ಮೆಟ್ರೊ ಕಾಮಗಾರಿ ಸ್ಥಳದಲ್ಲಿರುವ 12 ಅಡಿ ಹಾಗೂ ಅದಕ್ಕಿಂತ ಎತ್ತರದ ಪಿಲ್ಲರ್‌ಗಳನ್ನು ಗುರುತಿಸುತ್ತಿದ್ದಾರೆ. ಅಂಥ ಪಿಲ್ಲರ್‌ಗಳನ್ನು ಎಂಜಿನಿಯರ್‌ಗಳ ಸಮ್ಮುಖದಲ್ಲಿ ತೆರವು ಸಹ ಮಾಡುತ್ತಿದ್ದಾರೆ.

‘ಲಂಚದ ಆಸೆಗಾಗಿ ಒಪ್ಪಿಗೆ’

‘ನಿರ್ಮಾಣ ಹಂತದ ಪಿಲ್ಲರ್ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಎಂಜಿನಿಯರ್‌ಗಳು, ಅವೈಜ್ಞಾನಿಕ ಕಾಮಗಾರಿ ಎಂಬುದು ಗೊತ್ತಿದ್ದರೂ ಸುಮ್ಮನಾಗಿದ್ದರು. ಲಂಚದ ಆಸೆಗಾಗಿ ಅವರು, ಕಾಮಗಾರಿ ಮುಂದುವರಿಸಲು ಒಪ್ಪಿಗೆ ನೀಡಿದ್ದರೆಂಬ ಮಾಹಿತಿ ಇದೆ. ಈ ಆಯಾಮದಲ್ಲೂ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಗತ್ಯಬಿದ್ದರೆ ಮತ್ತೊಮ್ಮೆ ಮೆಟ್ರೊ ಎಂ.ಡಿ ವಿಚಾರಣೆ’

‘ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ನ ಕಬ್ಬಿಣದ ಚೌಕಟ್ಟು ಉರುಳಿಬೀಳಲು ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಗತ್ಯಬಿದ್ದರೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಅಂಜುಂ ಪರ್ವೇಜ್ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶನಿವಾರ ವಿಚಾರಣೆಗೆ ಹಾಜರಾಗಿದ್ದ ಅಂಜುಂ ಅವರಿಂದ ಕೆಲ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ. ಕಾಮಗಾರಿಗೆ ಸಂಬಂಧಪಟ್ಟಂತೆ ಕೆಲ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು