ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣ ನಡೆದಿದೆ: ಎ.ಮಂಜುನಾಥ್

ಸಿಬಿಐ ತನಿಖೆಗೆ ಆಗ್ರಹ
Last Updated 3 ಸೆಪ್ಟೆಂಬರ್ 2022, 20:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣ ನಡೆದಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್‍ ಶಾಸಕ ಎ.ಮಂಜುನಾಥ್ ಆಗ್ರಹಿಸಿದರು.

ಭೂ ಪರಿಹಾರ ಹಾಗೂ ಹೆದ್ದಾರಿ ಅವ್ಯವಹಾರ ಕುರಿತು ತನಿಖೆಗೆ ಒತ್ತಾಯಿಸಲು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ
ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಇದೇ 7ರಂದು ದೆಹಲಿಗೆ ತೆರಳಿ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಳೆಯಿಂದ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಮಳೆ ನೀರು ತುಂಬಿದೆ. ರೈತರು, ಜನರಿಗೆ ಅನನುಕೂಲವಾಗಿದೆ. ನಾಲ್ಕು ವರ್ಷಗಳ ಹಿಂದೆಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು.ಅವರ ಬೇಜವಾಬ್ದಾರಿ ಈ ಸ್ಥಿತಿಗೆ ಕಾರಣ.ಭೂ ಸ್ವಾಧೀನ ವೇಳೆ ರೈತರನ್ನು ಒಪ್ಪಿಸಿದ್ದೆವು. ಸೂಕ್ತ ಭೂ ಪರಿಹಾರ ನೀಡಲು ಮನವಿ ಮಾಡಿದ್ದೆವು. ಹಾಗಾಗಿ, ಎಲ್ಲ ರೈತರೂ ಸಹಕಾರ ನೀಡಿದ್ದರು. ಅವರಿಗೆ ಭೂ ಪರಿಹಾರ ಕೊಡದೆ ಇದ್ದರೆ ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

‘ಬಿಡದಿ ಪ್ರವೇಶಕ್ಕೆ ರಸ್ತೆಯಲ್ಲಿ ಅವಕಾಶ ನೀಡಿಲ್ಲ. 119 ಕಿ.ಮೀ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಇದರಿಂದ ರೈತರ ಕೃಷಿ ಕೆಲಸಗಳಿಗೆ ಅಡ್ಡಿಯಾಗಿದೆ. ಪ್ರಯಾಣಿಕರಿಗೆ ಚಹಾ ಸೇವನೆಗೆ, ಪೆಟ್ರೋಲ್ ಹಾಕಿಸಿಕೊಳ್ಳಲು ವ್ಯವಸ್ಥೆಯೂ ಇಲ್ಲ. ಅಪಘಾತವಾದರೆ ತುರ್ತುಚಿಕಿತ್ಸಾ ಘಟಕಗಳಿಲ್ಲ. ಇದೇನಾ ನಿಮ್ಮ ರಸ್ತೆ’ ಎಂದು ಪ್ರತಾಪ್‌ ಸಿಂಹ ಅವರನ್ನು ಕೆಣಕಿದರು. ‘ರಾಮದೇವರ ಬೆಟ್ಟದಿಂದ ನೀರು ಬಂದಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಾರೆ. ಬೆಟ್ಟ ಈಗ ಹುಟ್ಟಿದೆಯಾ?ಒಂದು ಕಿ.ಮೀಗೆ ₹ 80 ಕೋಟಿ ರೂ. ಖರ್ಚು ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ರೂಪದಲ್ಲಿ ನೀಡಿದ್ದ ₹1,300 ಕೋಟಿಯನ್ನು ಹೀಗೆ ವ್ಯಯಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಭೂ ಮಾಲೀಕರಲ್ಲದವರಿಗೂ ಪರಿಹಾರ’
‘ಯಾರದೋ ಭೂಮಿ, ಮತ್ಯಾರಿಗೋ ಪರಿಹಾರ ಕೊಟ್ಟಿದ್ದಾರೆ. ಭೂ ಪರಿಹಾರ ಕೇಳಿದರೆ ಜೈಲಿಗೆ ಹಾಕಿಸುವುದಾಗಿ ಬೆದರಿಸುತ್ತಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಪ್ರತಾಪ್ ಸಿಂಹ ಬಿಡದಿಗೆ ಬನ್ನಿ, ನಾವು‌ ನೋಡಿಕೊಳ್ತೇವೆ’ ಎಂದು ಮಂಜುನಾಥ್ ಗುಡುಗಿದರು.

‘ಹೆದ್ದಾರಿ ಯೋಜನೆಯಲ್ಲಿ ₹ 800 ಕೋಟಿ ಲೂಟಿಯಾಗಿದೆ. ಇದರಲ್ಲಿ ಯೋಜನಾ ನಿರ್ದೇಶಕರ ಪಾತ್ರವಿದೆ. ಅವರಿಗೆ ಸಂಸದ ಪ್ರತಾಪ್‌ ಸಿಂಹ ಬೆಂಬಲವಿದೆ.ಹೆದ್ದಾರಿ ನಿರ್ಮಿಸುತ್ತಿರುವ ಸಂಸ್ಥೆಗೆ ಅವರೇ ಬ್ರ್ಯಾಂಡ್‌ ಅಂಬಾಸಿಡರ್‌ ಎಂದು ಲೇವಡಿ ಮಾಡಿದರು.

ಈ ಕುರಿತುವಿಧಾನಸಭೆ ಅಧಿವೇಶನದಲ್ಲಿ ಎರಡು ಬಾರಿ ಪ್ರಶ್ನೆ ಕೇಳಲು ಪ್ರಯತ್ನಪಟ್ಟರೂ, ಅವಕಾಶ ದೊರೆಯದಂತೆ ವಿಧಾನಸಭಾಧ್ಯಕ್ಷರ ಕಚೇರಿಯನ್ನು ಮ್ಯಾನೇಜ್‌ ಮಾಡಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT