ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಲೊಲ್ಲದು ಪಿಆರ್‌ಆರ್‌ ಯೋಜನೆಗೆ ಹಿಡಿದ ಗ್ರಹಣ

ತಾಂತ್ರಿಕ ಸಮಸ್ಯೆಯ ಕಾರಣ ಯೋಜನೆಯ ಟೆಂಡರ್‌ ಮತ್ತೆ ಮುಂದೂಡಿಕೆ
Last Updated 17 ಏಪ್ರಿಲ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ಬಹುನಿರೀಕ್ಷಿತ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಕಾಮಗಾರಿಗೆ ಹಿಡಿದ ಗ್ರಹಣ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಟೆಂಡರ್‌ ಆಹ್ವಾನಿಸಿದಾಗ ಈ ಯೋಜನೆಯ ಅಡ್ಡಿ ಆತಂಕಗಳೆಲ್ಲ ದೂರವಾಗಿ ಯೋಜನೆ ಕೊನೆಗೂ ಕೈಗೂಡುವ ಭರವಸೆ ಮೂಡಿತ್ತು. ಆದರೆ, ತಾಂತ್ರಿಕ ಕಾರಣ ನೀಡಿ ಟೆಂಡರ್‌ ಪ್ರಕ್ರಿಯೆಯನ್ನು ಬಿಡಿಎ ಮತ್ತೆ ಮುಂದೂಡಿದೆ.

ಈ ಯೋಜನೆಗೆ 2022ರ ಮಾರ್ಚ್‌ 31ರಂದು ಬಿಡಿಎ ಟೆಂಡರ್‌ ಆಹ್ವಾನಿಸಿತ್ತು. ಅದರ ಪ್ರಕಾರ ಬಿಡ್‌ ಪೂರ್ವ ಸಭೆ ಇದೇ ಸೋಮವಾರ (ಏ.18ರಂದು) ನಿಗದಿಯಾಗಿತ್ತು. ಬಿಡ್‌ ಸಲ್ಲಿಸುವುದಕ್ಕೆ ಮೇ 18 ಕೊನೆಯ ದಿನವಾಗಿತ್ತು. ಮೇ 20ರಂದು ತಾಂತ್ರಿಕ ಬಿಡ್‌ಗಳನ್ನು ತೆರೆಯಲು ಪ್ರಾಧಿಕಾರವು ನಿರ್ಧರಿಸಿತ್ತು. ಟೆಂಡರ್‌ಗೆ ಅರ್ಜಿ ಸಲ್ಲಿಸುವವರು ₹ 150 ಕೋಟಿ ಮೊತ್ತದ ಭದ್ರತಾ ಠೇವಣಿ ಇಡಬೇಕಿತ್ತು. ಈಗ ಟೆಂಡರ್‌ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ. ಪರಿಷ್ಕೃತ ದಿನಾಂಕಗಳನ್ನು ಇನ್ನೂ ಪ್ರಕಟಿಸಿಲ್ಲ.

ಟೆಂಡರ್ ಮುಂದೂಡಿಕೆ ಕುರಿತು ಪ್ರಕಟಣೆ ನೀಡಿರುವ ಬಿಡಿಎ, ‘ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿ (https://eproc.karnataka.gov.in) ನಿಗದಿತ ಸಮಯದಲ್ಲಿ ಬಿಡ್‌ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ’ ಎಂದಷ್ಟೇ ಮಾಹಿತಿ ನೀಡಿದೆ.

ಸುಮಾರು 74 ಕಿ.ಮೀ ಉದ್ದದ ಹಾಗೂ ಎಂಟು ಪಥಗಳಪಿಆರ್‌ಆರ್‌ ಸರ್ವಿಸ್‌ ರಸ್ತೆಗಳನ್ನೂ ಒಳಗೊಳ್ಳಲಿದೆ. 100 ಮೀ ಅಗಲದ ರಸ್ತೆ ಹಾಗೂ ಕ್ಲೊವರ್‌ ಎಲೆಗಳ ಮಾದರಿಯ ಜಂಕ್ಷನ್‌ಗಳು, ಸೇತುವೆಗಳು, ಮೇಲ್ಸೇತುವೆಗಳು, ರೈಲ್ವೆ ಕೆಳ ಸೇತುವೆಗಳು, ರೈಲ್ವೆ ಮೇಲ್ಸೇತುವೆಗಳುಈ ಯೋಜನೆ ಅಡಿಯಲ್ಲಿ ನಿರ್ಮಾಣವಾಗಲಿವೆ.

ನಗರದ ಹೊರವಲಯದಲ್ಲಿ ಪಿಆರ್‌ಆರ್‌ ನಿರ್ಮಿಸುವ ಪ್ರಸ್ತಾವನೆಯನ್ನು ಬಿಡಿಎ 2006ರ ನ.27ರಂದು ಸಲ್ಲಿಸಿತ್ತು. ಈ ಯೋಜನೆಗೆ ಸಂಬಂಧಿಸಿ ಅನೇಕ ವ್ಯಾಜ್ಯಗಳಿದ್ದವು. 2018ರ ನ.24ರಲ್ಲಿ ರಾಜ್ಯ ಸರ್ಕಾರವು ₹ 5,616.41 ಕೋಟಿ ವೆಚ್ಚದ ಈ ಯೋಜನೆಯನ್ನು ಜಾರಿಗೊಳಿಸಲು ಮಂಜೂರಾತಿ ನೀಡಿತು. ಅದರಲ್ಲಿ ಶೇ 16ರಷ್ಟು ವೆಚ್ಚವನ್ನು (₹ 901.72 ಕೋಟಿ) ರಾಜ್ಯ ಸರ್ಕಾರವು ಭರಿಸಲಿದೆ. ಇನ್ನುಳಿದ ಶೇ 84ರಷ್ಟು ವೆಚ್ಚವನ್ನು ಭರಿಸಲು (₹ 4,714.69 ಕೋಟಿ) ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿಯಿಂದ (ಜೈಕಾ) ಮೂರು ಹಂತಗಳಲ್ಲಿ ಸಾಲ ಪಡೆಯಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಯೋಜನೆಯ ಸ್ವರೂಪವನ್ನು ಮತ್ತೆ ಬದಲಾಯಿಸಲಾಗಿದೆ. ಜೈಕಾದಿಂದ ಸಾಲ ಪಡೆಯುವ ಪ್ರಸ್ತಾವದಿಂದ ಬಿಡಿಎ ಹಿಂದೆ ಸರಿದಿದೆ.

ಮಾರ್ಚ್ 31ರಂದು ಆಹ್ವಾನಿಸಲಾದ ಟೆಂಡರ್‌ ದಾಖಲೆಗಳ ಪ್ರಕಾರ,ಬಿಡಿಎಯು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಗುತ್ತಿಗೆದಾರ ಸಂಸ್ಥೆಯೇ ರಸ್ತೆಯ ವಿನ್ಯಾಸ ರೂಪಿಸಿ, ಬಂಡವಾಳ ಹೂಡಿಕೆ ಮಾಡಿ, ರಸ್ತೆಯನ್ನು ನಿರ್ಮಿಸಿ, 50 ವರ್ಷಗಳ ಕಾಲ ನಿರ್ವಹಿಸಿ ನಂತರ ಬಿಡಿಎಗೆ ಹಸ್ತಾಂತರ ಮಾಡಬೇಕಿದೆ. ಗುತ್ತಿಗೆದಾರ ಸಂಸ್ಥೆಯು ಬಿಡಿಎ ಜೊತೆ 50 ವರ್ಷಗಳ ಕಾಲ ವರಮಾನ ಹಂಚಿಕೊಳ್ಳುವ ಮಾದರಿಯಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ 2,560 ಎಕರೆಗಳಷ್ಟು ಜಮೀನನ್ನು ಸ್ವಾದೀನಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನೂ ಗುತ್ತಿಗೆದಾರ ಸಂಸ್ಥೆಯೇ ಭರಿಸಬೇಕಾಗುತ್ತದೆ.

ಸುಪ್ರೀಂ ಕೋರ್ಟ್‌ ಅಸಮಾಧಾನ:

ಪಿಆರ್‌ಆರ್‌ ಯೋಜನೆ ಅನುಷ್ಠಾನದ ವಿಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಯೋಜನೆಯ ಅನುಷ್ಠಾನದ ವಸ್ತುಸ್ಥಿತಿಯ ವರದಿಗೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ ಪೀಠ, ‘ಪಿಆರ್‌ಆರ್‌ ಯೋಜನೆ ಕುರಿತು 2006ರಲ್ಲೇ ಬಿಡಿಎ ಪ್ರಸ್ತಾವನೆ ಸಲ್ಲಿಸಿದ್ದರೂ, ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದನ್ನು ಹೊರತಾಗಿ ಬೇರೆ ಯಾವುದೇ ಪ್ರಗತಿ ಆಗಿಲ್ಲ ಎಂಬುದು ಸ್ಪಷ್ಟ. ಮೂರು ಎಕರೆ 21 ಗುಂಟೆ ಜಮೀನನ್ನು ಮಾತ್ರ ಸ್ವಾಧೀನಪಡಿಸಲಾಗಿದೆ’ ಎಂದು 2021ರಅಕ್ಟೋಬರ್ 26 ರಂದು ಅಸಮಾಧಾನ ವ್ಯಕ್ತಪಡಿಸಿತ್ತು.

---

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅನುಮೋದನೆ ಬಾಕಿ?

ಪಿಆರ್‌ಆರ್‌ ಯೊಜನೆಯನ್ನು ಅನುಮೋದನೆಗಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಬಿಡಿಎ ವರ್ಷದ ಹಿಂದೆ ಸಲ್ಲಿಸಿತ್ತು. ಆದರೆ, ಅನುಮೋದನೆ ಸಿಕ್ಕಿರಲಿಲ್ಲ. ಈ ಇಲಾಖೆಯ ಅನುಮೋದನೆ ಇಲ್ಲದೆಯೇ ಟೆಂಡರ್‌ ಕರೆದಿದ್ದಕ್ಕೆ ಆಕ್ಷೇಪ
ವ್ಯಕ್ತವಾಗಿದ್ದರಿಂದ ಮಾರ್ಚ್‌ 31ರಂದು ಕರೆದ ಟೆಂಡರ್‌ ಹಿಂಪಡೆಯಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅನುಮೋದನೆ ಸಿಕ್ಕಿದ ಬಳಿಕ ಮತ್ತೆ ಟೆಂಡರ್‌ ಕರೆಯಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
––––

ಪಿಆರ್‌ಆರ್‌ ಉದ್ದ ಹೆಚ್ಚಳ

ಈ ಹಿಂದಿನ ಯೋಜನೆ ಪ್ರಕಾರ ಪಿಆರ್‌ಆರ್‌ನ ಒಟ್ಟು ಉದ್ದ 65 ಕಿ.ಮೀ ಇತ್ತು. ಆದರೆ, ನೈಸ್‌ ರಸ್ತೆ ಹಾಗೂ ಪಿಆರ್‌ಆರ್ ಸೇರುವಲ್ಲಿ ಕ್ಲೊವರ್‌ ಎಲೆಯ ಮಾದರಿಯ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗಾಗಿ ರಸ್ತೆಯ ಉದ್ದ 74 ಕಿ.ಮೀ.ಗೆ ಹೆಚ್ಚಳವಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಯೋಜನೆಯ ಅಂದಾಜು ವೆಚ್ಚವೂ ₹ 21 ಸಾವಿರ ಕೋಟಿಯಿಂದ ₹ 23.5 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ ಈ ಹಿಂದೆ ಅಂದಾಜಿಸಿದಂತೆ ₹ 5,616.41 ಕೋಟಿಯೇ ಇದೆ. ಆದರೆ, ರಸ್ತೆಯ ಉದ್ದ ಹೆಚ್ಚಳವಾಗಿದ್ದರಿಂದ ಸುಮಾರು 750 ಎಕರೆಗಳಷ್ಟು ಹೆಚ್ಚುವರಿ ಭೂಸ್ವಾಧೀನದ ಅಗತ್ಯವಿದೆ. ಹಾಗಾಗಿ ಭೂಸ್ವಾಧೀನಕ್ಕೆ
₹ 18ಸಾವಿರ ಕೋಟಿ ವೆಚ್ಚವಾಗಬಹುದು. ಯೋಜನೆ ವೆಚ್ಚ ಪರಿಷ್ಕರಣೆ ಆಗಲಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಯೊಜನೆಗೆ ಅಗತ್ಯವಿರುವ ಹೆಚ್ಚುವರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಇದಕ್ಕೂ ಮತ್ತಷ್ಟು ಸಮಯ ತಗಲಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT