ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುಃಸ್ಥಿತಿ: ವಲಯವಾರು ಸಭೆಗೆ ಹೈಕೋರ್ಟ್‌ ಆದೇಶ

Last Updated 5 ಏಪ್ರಿಲ್ 2022, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚುವ ಅಥವಾ ದುರಸ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಲಯವಾರು ಸಭೆಗಳನ್ನು ನಡೆಸಿ, ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ.

ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್ ಮೆನನ್ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ‘ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ’ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ನಮ್ಮ ಕಂಪನಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಸಿಬಿಡಿ ಪ್ರದೇಶವಲ್ಲದೆ ಇತರೆ ಪ್ರದೇಶಗಳಲ್ಲೂ ರಸ್ತೆ ಗುಂಡಿಗಳನ್ನು ಮುಚ್ಚಲು ಕಂಪನಿ ಸಿದ್ಧವಿದೆ.ಸಂಸ್ಥೆಗೆ ಸದ್ಯ ಸಿಬಿಡಿ ಪ್ರದೇಶದಲ್ಲಿ ಕೇವಲ 182 ಕಿ.ಮೀ ರಸ್ತೆ ಗುಂಡಿ ಮುಚ್ಚುವುದಕ್ಕೆ ಗುತ್ತಿಗೆ ಕೊಡಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪಾಲಿಕೆ ಪರ ವಕೀಲ ವಿ.ಶ್ರೀನಿಧಿ,‘ಕೇಂದ್ರ ಪ್ರದೇಶದಲ್ಲಿ 215 ಕಿ.ಮೀ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ನಂತರ ವಲಯವಾರು ಟೆಂಡರ್ ನೀಡಿ ಎಲ್ಲೆಡೆ ಆಧುನಿಕ ತಂತ್ರಜ್ಞಾನ ಬಳಸಿ ರಸ್ತೆ ಗುಂಡಿ ಮುಚ್ಚಲಾಗುವುದು ಮತ್ತು ದುರಸ್ತಿ ಮಾಡುವ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪಾಲಿಕೆ ತನ್ನ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ರಸ್ತೆ ಅಗೆಯುವ ಏಜೆನ್ಸಿಗಳನ್ನು ಗುರುತಿಸಿ ಅವುಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಬೇಕು. ರಸ್ತೆಗಳ ಜಂಟಿ ಸರ್ವೆ ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಆದೇಶಿಸಿತು.

‘ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ರಸ್ತೆ ಗುಂಡಿ ಮುಚ್ಚಲು ಆಸಕ್ತಿ ವ್ಯಕ್ತಪಡಿಸಿದೆ. ಆದ್ದರಿಂದ, ಈ ಸಂಸ್ಥೆ ಜೊತೆ ಸೇರಿ ಅಧಿಕಾರಿಗಳು ಯೋಜನೆ ರೂಪಿಸಬೇಕು. ಸಮೀಕ್ಷಾ ಕಾರ್ಯದಲ್ಲಿ ಜಲಮಂಡಳಿ, ಗೇಲ್ ಸೇರಿದಂತೆ ಯಾವ ಸಂಸ್ಥೆಗಳು ಕಾಮಗಾರಿ ಕೈಗೊಂಡಿವೆಯೋ ಅವುಗಳನ್ನೂ ತೊಡಗಿಸಿಕೊಳ್ಳಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT