ಸೋಮವಾರ, ಆಗಸ್ಟ್ 15, 2022
26 °C
ಗೌರವ್‌ ಗುಪ್ತ ಹಂಗಾಮಿ ಸಿಇಒ–ಕಂಪನಿ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ನಿರ್ಧಾರ

ವಸಂತನಗರದಲ್ಲಿ ಕಸ ನಿರ್ವಹಣೆ ಕಂಪನಿ ಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೆಂಗಳೂರು ಕಸ ನಿರ್ವಹಣೆ ನಿಯಮಿತ’ ಕಂಪನಿಯು ವಸಂತನಗರದ ತಿಮ್ಮಯ್ಯ ರಸ್ತೆ ಪಕ್ಕದಲ್ಲಿರುವ ಬಿಬಿಎಂಪಿ ಕಟ್ಟಡದ ಎರಡನೇ ಮಹಡಿಯಲ್ಲಿ ಶೀಘ್ರವೇ ತನ್ನ ಕಚೇರಿಯನ್ನು ಆರಂಭಿಸಲಿದೆ.

ಕಂಪನಿಯ ಆಡಳಿತ ಮಂಡಳಿಯ ಮೊದಲ ಸಭೆಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ ಕಂಪನಿಯು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. 

ಕಂಪನಿಗೆ ಹೊಸ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯನ್ನು (ಸಿಇಒ) ಆಯ್ಕೆ ಮಾಡಲು ಪರಿಶೋಧನಾ ಸಮಿತಿಯನ್ನು ಬುಧವಾರ ರಚಿಸಲಾಗಿದೆ. ನೂತನ ಸಿಇಒ ಆಯ್ಕೆಯಾಗುವವರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರನ್ನೇ ಹಂಗಾಮಿ ಸಿಇಒ ಆಗಿ ನೇಮಿಸಲು ನಿರ್ಧರಿಸಲಾಯಿತು.

ಕಂಪನಿಯು ಕಸ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಜುಲೈ 1ರಿಂದಲೇ ಆರಂಭಿಸುವ ಉದ್ದೇಶ ಹೊಂದಿದೆ. ಸಾರ್ವಜನಿಕ ಶೌಚಾಲಯಗಳ ಕಸ ಹಾಗೂ ಜೈವಿಕ– ವೈದ್ಯಕೀಯ ಕಸವನ್ನು ಹೊರತಾಗಿ ಉಳಿದ ಎಲ್ಲ ರೀತಿಯ ಕಸಗಳನ್ನು ಈ ಕಂಪನಿಯೇ ನಿರ್ವಹಿಸಲಿದೆ. ಕಸ ಸಂಗ್ರಹ, ವಿಂಗಡಣೆ, ರವಾನೆ, ಸಂಸ್ಕರಣೆ, ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ, ಮರುಬಳಕೆ ಹಾಗೂ ವಿಲೇವಾರಿ ಕುರಿತ ಎಲ್ಲ ಹೊಣೆಗಳೂ ಈ ಕಂಪನಿಯದ್ದಾಗಲಿದೆ.

ಕಸ ನಿರ್ವಹಣೆಯ ಕಾರ್ಯವನ್ನು ಆರಂಭಿಸುವ ಸಲುವಾಗಿ ಬಿಬಿಎಂಪಿಯ ಕಸ ನಿರ್ವಹಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳನ್ನು ಕಂಪನಿಯ ಸೇವೆಗೆ ನಿಯೋಜಿಸಿಕೊಳ್ಳುವ ಸಿದ್ಧತೆ ನಡೆದಿದೆ. ಏಳು ನಗರ ಸ್ಥಳೀಯ ಸಂಸ್ಥೆಗಳಿಂದ ಬಿಬಿಎಂಪಿ ತೆಕ್ಕೆಗೆ ಬಂದ ಪರಿಸರ ಎಂಜಿನಿಯರ್‌ಗಳಲ್ಲಿ ಕೆಲವರು ಪ್ರಸ್ತುತ ಬಿಬಿಎಂಪಿ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೆಂಗಳೂರು ಕಸ ನಿರ್ವಹಣೆ ಕಂಪನಿಯಡಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು