ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶಗಳ ಮೂಟೆ ಹೊತ್ತು ತರಲಿದೆ 5ಜಿ

ಹೊಸ ತಂತ್ರಜ್ಞಾನ ಹಾದಿಯಲ್ಲಿರುವ ಸಮಸ್ಯೆ, ಸವಾಲುಗಳ ಬೆಳಕು ಚೆಲ್ಲಿದ ತಜ್ಞರು
Last Updated 21 ನವೆಂಬರ್ 2019, 2:52 IST
ಅಕ್ಷರ ಗಾತ್ರ

ಬೆಂಗಳೂರು: ಅಗಾಧ ಅವಕಾಶಗಳ ಆಗರವನ್ನೇ ಹೊತ್ತು ತರುತ್ತಿರುವ 5ಜಿ ನೆಟ್‌ವರ್ಕ್ ವಿಶ್ವದ ತಂತ್ರಜ್ಞಾನದ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆಯೇ? ಈ ಹೊಸ ದಿಗಂತಕ್ಕೆ ತೆರೆದುಕೊಳ್ಳುವಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳೇನು, ಇದರಿಂದ ಆಗುವ ಪ್ರಯೋಜನಗಳೇನು?

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ‘5ಜಿಯಿಂದ ತಂತ್ರಜ್ಞಾನ ಕ್ಷೇತ್ರದ ಮೇಲಾಗುವ ಪರಿಣಾಮಗಳು’ ಕುರಿತ ಸಂವಾದದಲ್ಲಿ ಈ ತಂತ್ರಜ್ಞಾನದ ವಿವಿಧ ಮಗ್ಗುಲುಗಳನ್ನು ಬಲ್ಲ ತಜ್ಞರು ಬೆಳಕು ಚೆಲ್ಲಿದರು.

ನೋಕಿಯಾ ನೆಟ್‌ವರ್ಕ್ಸ್‌ನ 5ಜಿ ರೇಡಿಯೊ ಸಲ್ಯೂಷನ್ಸ್‌ ವ್ಯವಸ್ಥಾಪಕ ರಾಜೇಶ್‌ ಬಂಡ, ‘ಕೃತಕ ಬುದ್ಧಿಮತ್ತೆ (ಎಐ), ವರ್ಚುವಲ್‌ ರಿಯಾಲಿಟಿ (ವಿಆರ್‌), ಇಂಟರ್‌ನೆಟ್ ಆಫ್‌ ಥಿಂಗ್ಸ್‌ (ಐಒಟಿ), ಮೆಷಿನ್‌ ಲರ್ನಿಂಗ್‌ (ಎಂಎಲ್) ಮುಂತಾದ ತಂತ್ರಜ್ಞಾನಗಳನ್ನು ಹೊಸ ಎತ್ತರಕ್ಕೆ ಒಯ್ಯುವಲ್ಲಿ 5ಜಿ ನೆಟ್‌ವರ್ಕ್ ನೆರವಾಗಲಿದೆ. ಕೃಷಿಯಲ್ಲಿ ಬೀಜ ಬಿತ್ತನೆಯಿಂದ ಹಿಡಿದು ಕೊಯಿಲಿನವರೆಗೆ ನಿಖರತೆ ಸಾಧಿಸಿ ಹೆಚ್ಚು ಇಳುವರಿ ಪಡೆಯಲು ಇದರ ಸಹಾಯವನ್ನು ಬಳಸಬಹುದು. ನಗರದ ತಜ್ಞ ವೈದ್ಯರ ಪರಿಣತಿಯನ್ನು ಬಳಸಿ ಗ್ರಾಮೀಣ ಪ್ರದೇಶದ ಜನರಿಗೂ ಆರೋಗ್ಯ ಸೇವೆ ಒದಗಿಸುವ ಸಾಧ್ಯತೆಯನ್ನು ಇದು ಹೆಚ್ಚಿಸಲಿದೆ’ ಎಂದರು.

ತೇಜಸ್‌ ನೆಟ್‌ವರ್ಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ನಾಯಕ್‌, ‘ಈ ತಂತ್ರಜ್ಞಾನ ಭಾರತದಲ್ಲಿ ಯಶಸ್ವಿಯಾಯಿತೆಂದರೆ ವಿಶ್ವದೆಲ್ಲೆಡೆ ಯಶಸ್ವಿಯಾಯಿತೆಂದೇ ಅರ್ಥ. ಏನಿಲ್ಲವೆಂದರೂ 30 ವರ್ಷಗಳ ಕಾಲ ಇದು ತಂತ್ರಜ್ಞಾನ ಸುಧಾರಣೆ ಹಾಗೂ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಆದರೆ, ನೆಟ್‌ವರ್ಕ್‌ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳಿಗೆ ಇನ್ನಷ್ಟು ಆದ್ಯತೆ ನೀಡುವ ಅಗತ್ಯವಿದೆ’ ಎಂದರು.

‘4ಜಿ ತಂತ್ರಜ್ಞಾನದ ಅಗ್ರ ಮೂರು ಮಾರುಕಟ್ಟೆಗಳಲ್ಲಿ ಭಾರತವೂ ಒಂದು. 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಜಾಗತಿಕಮಟ್ಟದಲ್ಲಿ ಮಾನದಂಡ ರೂಪಿಸುವಾಗ ಇತರ ದೇಶಗಳು ನಮ್ಮ ಮಾತನ್ನು ಕೇಳುವಂತಾಗಬೇಕು. ಗ್ರಾಮೀಣ ಪ್ರದೇಶಗಳಿಗೆ ಸೇವೆ ಒದಗಿಸುವ ಬದ್ಧತೆಗೆ ಮಾನದಂಡ ನಿಗದಿಪಡಿಸುವಾಗ ನಮ್ಮ ಮಾತಿಗೆ ಹೆಚ್ಚು ಬೆಲೆ ಸಿಗಬೇಕು. ಅಮೆರಿಕ ಅಥವಾ ಯೂರೋಪ್‌ನ ಗ್ರಾಮೀಣ ಪ್ರದೇಶಗಳು ನಮಗಿಂತ ಸಂಪೂರ್ಣ ಭಿನ್ನ. ಅವುಗಳನ್ನು ಇಲ್ಲಿಗೆ ಅನ್ವಯ ಮಾಡಲಾಗದು’ ಎಂದರು.

ಎರಿಕ್ಸನ್‌ ಸಂಸ್ಥೆಯ ಸಾಫ್ಟ್‌ವೇರ್‌ ಆ್ಯಂಡ್ ಪರ್ಫಾರ್ಮೆನ್ಸ್ ವಿಭಾಗದ (ಭಾರತ ಮತ್ತು ನೈರುತ್ಯ ಏಷ್ಯಾದಲ್ಲಿ ) ಮುಖ್ಯಸ್ಥ ಉಮಂಗ್‌ ಜಿಂದಾಲ್‌, ‘5ಜಿ ಯಶಸ್ಸಿನ ಬಗ್ಗೆ ಸಂದೇಹ ಬೇಡ. ವಿಡಿಯೊ ಕಾಲಿಂಗ್‌ ಸೌಕರ್ಯ ಪರಿಚಯಿಸುವಾಗ ಅದು ಯಶಸ್ವಿಯಾಗುವುದಿಲ್ಲ ಎಂಬ ಟೀಕೆ ಬಂದಿತ್ತು. ಆದರೆ, ಅದೇ ಈಗ ಜನಪ್ರಿಯವಾಗಿದೆ. 5 ಜಿ ಕೂಡಾ ಹಾಗೆಯೇ’ ಎಂದರು.

‘ವಿಕಿರಣ ಕಡಿಮೆಗೊಳಿಸಲು ಸರ್ವ ಪ್ರಯತ್ನ’

‘5ಜಿ ತಂತ್ರಜ್ಞಾನದಲ್ಲಿ ಮೊಬೈಲ್‌ಗಳು ಹೊರಸೂಸುವ ವಿಕಿರಣ ಪ್ರಮಾಣದ ಬಗ್ಗೆ ಆತಂಕ ವ್ಯಕ್ತವಾಗಿದೆ. ವಿಕಿರಣ ಪ್ರಮಾಣವನ್ನು ಆದಷ್ಟು ಕಡಿಮೆಗೊಳಿಸುವ ಪ್ರಯತ್ನದಲ್ಲಿ ನಾವು ನಿರತರಾಗಿದ್ದೇವೆ’ ಎಂದು 5ಜಿ ಮೊಬೈಲ್‌ಗಳ ಬಿಡಿಭಾಗ ಪೂರೈಸುವ ಮೀಡಿಯಾ ಟೆಕ್‌ ಸಂಸ್ಥೆಯ ನಿರ್ದೇಶಕ ಅಕ್ಷಯ್‌ ಅಗರವಾಲ್‌ ತಿಳಿಸಿದರು.

‘ಅಮೆರಿಕ, ಚೀನಾ, ಜಪಾನ್‌ನಂತಹ ದೇಶಗಳು 5ಜಿ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿವೆ. ಬಿಡಿಭಾಗ ತಯಾರಿಯಲ್ಲಿ ನನ್ನ ಸಂಸ್ಥೆ ತೊಡಗಿಕೊಂಡಿದ್ದು, ಈ ದೇಶಗಳಿಗೆ ನಾವೂ ಬಿಡಿಭಾಗಗಳನ್ನು ಪೂರೈಸುತ್ತಿದ್ದೇವೆ. 5ಜಿ ಮೊಬೈಲ್‌ಗಳ ಉತ್ಪಾದನೆಯಲ್ಲಿ ಭಾರತ ಸಿಂಹಪಾಲು ಪಡೆಯಬೇಕು. ಜನರಿಗೆ ಅಗ್ಗದ ದರದಲ್ಲಿ ಈ ಮೊಬೈಲ್‌ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ’ ಎಂದರು.

‘ಮೂಲಸೌಕರ್ಯದಲ್ಲಿ ಭಾರತ ಹಿಂದೆ’

‘5ಜಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತ ಸಾಕಷ್ಟು ಹಿಂದೆ ಉಳಿದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಆಗಬೇಕಿದೆ’ ಎಂದು ಟವರ್ಸ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್‌ ಪ್ರೊವೈಡರ್ಸ್‌ ಅಸೊಸಿಯೇಷನ್‌ (ಟಿಎಐಪಿಎ) ಪ್ರಧಾನ ನಿರ್ದೇಶಕ ತಿಲಕ್‌ ರಾಜ್‌ ದುವ ಅಭಿಪ್ರಾಯಪಟ್ಟರು.

‘ದೇಶದಾದ್ಯಂತ ಪರಿಣಾಮಕಾರಿ 4ಜಿ ನೆಟ್‌ವರ್ಕ್‌ ಒದಗಿಸುವಷ್ಟು ಮೂಲಸೌಕರ್ಯ ಒದಗಿಸುವಲ್ಲೇ ನಾವು ಯಶಸ್ವಿಯಾಗಿಲ್ಲ. ನಮ್ಮಲ್ಲಿ ಪ್ರಸ್ತುತ ಶೇ 30ರಷ್ಟು ಮೂಲಸೌಕರ್ಯ ಮಾತ್ರ ಇದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ನೀತಿಗಳಲ್ಲಿರುವ ವೈರುಧ್ಯಗಳೂ ಕಾರಣ ಇವುಗಳನ್ನು ಸರಿಪಡಿಸಬೇಕು’ ಎಂದರು.

5ಜಿ– ಹೊಸ ಅವಕಾಶಗಳು

ವಿಡಿಯೊ ಸರ್ವೇಕ್ಷಣೆ

ಯಂತ್ರಗಳನ್ನು ದೂರದಿಂದಲೇ ನಿಯಂತ್ರಿಸುವುದು (ರಿಮೋಟ್‌ ಕಂಟ್ರೋಲ್‌)

ರೊಬೋಟಿಕ್‌, ಸ್ವಯಂಚಾಲನೆ ಕುರಿತ ಕ್ರಮಾವಳಿ (ಅಲ್ಗಾರಿದಂ) ರೂಪಿಸುವುದು

ಕೃಷಿಯಲ್ಲಿ ನಿಖರತೆಗೆ ಕೃತಕ ಬುದ್ಧಿಮತ್ತೆ ಬಳಕೆ

ಟೆಲಿಮೆಡಿಸಿನ್‌ ಮೂಲಕ ಆರೋಗ್ಯ ಸೇವೆ ಸುಧಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT