ಬುಧವಾರ, ಡಿಸೆಂಬರ್ 2, 2020
26 °C

ಮನೆ, ಕಚೇರಿ ಎರಡೂ ಕಡೆ ಉದ್ಯೋಗ ಸಾಧ್ಯ: ಎಚ್‌ಪಿ ಸಂಸ್ಥೆಯ ತಪಸ್ ಪಾಂಡಾ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂಬರುವ ದಿನಗಳಲ್ಲಿ ಮನೆ ಹಾಗೂ ಕಚೇರಿ ಎರಡೂ ಕಡೆ ಕಾರ್ಯನಿರ್ವಹಿಸುವ ಉದ್ಯೋಗ ವ್ಯವಸ್ಥೆ ರೂಪುಗೊಳ್ಳಲಿದೆ’ ಎಂದು ಎಚ್‌ಪಿ ಸಂಸ್ಥೆಯ ತಪಸ್ ಪಾಂಡಾ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ಉದ್ಯೋಗಗಳ ಭವಿಷ್ಯದ ನೋಟ: ಹೊಸ ಸಾಧ್ಯತೆಗಳ ಅನಾವರಣ’ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಕೋವಿಡ್ ತಂದ ಬದಲಾವಣೆಯಿಂದ ‘ಸೈಬರ್’ ಹಾಗೂ ‘ಭೌತಿಕ’ ಪ್ರಪಂಚಗಳು ಒಂದುಗೂಡಿದ ಪರಿಣಾಮ ‘ಸೈಬರ್‌ ಫಿಸಿಕಲ್’ ವ್ಯವಸ್ಥೆಗಳು ರೂಪುಗೊಂಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅದಾಗಲೇ ಪ್ರಾರಂಭವಾಗಿದ್ದ ಬದಲಾವಣೆಗಳ ವೇಗವರ್ಧನೆಗೆ ಕೋವಿಡ್ ಕಾರಣವಾಗಿದೆ. ಉದ್ಯೋಗಿಗಳು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಕಚೇರಿಗಾಗಿ ಸ್ಥಳದ ಅಗತ್ಯ ಕಡಿಮೆಯಾಗಲಿವೆ. ಇರುವ ಕಚೇರಿಗಳಲ್ಲೂ ಸ್ಪರ್ಶ ರಹಿತ ಅನುಭವಕ್ಕಾಗಿ ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮೈಕ್ರೋಲ್ಯಾಂಡ್ ಸಂಸ್ಥಾಪಕ ಪ್ರದೀಪ್ ಕರ್, ‘ಕಂಪನಿಗಳು ಉದ್ಯೋಗಿಗಳ ಪರಿಣತಿಯನ್ನು ಭೌಗೋಳಿಕ ಮಿತಿಗಳಿಲ್ಲದೆ ಬಳಸಿಕೊಳ್ಳಬಹುದು ಎಂಬುದನ್ನು ಕೋವಿಡ್‌ ಮನವರಿಕೆ ಮಾಡಿಕೊಟ್ಟಿದೆ. ಇದರಿಂದ ಮಹಾನಗರಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡಲು ಸಾಧ್ಯ ಎಂಬುದು ಮನವರಿಕೆಯಾಗಿದೆ. ‘ಎಲ್ಲಿಂದ ಬೇಕಾದರೂ ಕೆಲಸ ಮಾಡಿ’ ಪರಿಕಲ್ಪನೆಯು ವಾಸ್ತವದಲ್ಲಿ  ಕಾರ್ಯಗತಗೊಳ್ಳಬಹುದೇ ಎಂಬ ಕುರಿತ ಎಲ್ಲ ಸಂದೇಹಗಳು ದೂರವಾಗಿವೆ’ ಎಂದು ತಿಳಿಸಿದರು.

ಆಲ್‌ಸ್ಟೇಟ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚೇತನ್ ಗರ್ಗ್, ‘ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಎಲ್ಲ ಕ್ಷೇತ್ರಗಳ ಜನರೂ ಮುಂದೆ ಬರುತ್ತಿದ್ದಾರೆ. ಸಂಸ್ಥೆಗಳ ಉದ್ಯೋಗಿಗಳು ಮಾತ್ರವೇ ಅಲ್ಲದೆ, ದೂರಸಂಪರ್ಕ ಸಂಸ್ಥೆಗಳು, ಸರ್ಕಾರದ ಅಧಿಕಾರಿಗಳು ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೋರಿಸಿರುವ ಉತ್ಸಾಹ ಉಲ್ಲೇಖಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು