ಬುಧವಾರ, ಜನವರಿ 19, 2022
18 °C
ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ: ವ್ಯಕ್ತಿತ್ವ, ಹಣಬಲವೇ ಚರ್ಚೆ

ಬೆಂಗಳೂರು ವಿಧಾನಪರಿಷತ್‌ ಚುನಾವಣೆ: ಸಮಬಲದ ಪೈಪೋಟಿಗೆ ಕಾಂಗ್ರೆಸ್‌, ಬಿಜೆಪಿ ಸಜ್ಜು

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಎಚ್‌.ಎಸ್‌. ಗೋಪಿನಾಥ್‌ ಮತ್ತು ಯೂಸುಫ್‌ ಷರೀಫ್‌

ಬೆಂಗಳೂರು: ಮಹಾನಗರದ ಸುತ್ತ ಆವರಿಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರೇ ಪ್ರಮುಖವಾಗಿರುವ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲದ ಪೈಪೋಟಿಗೆ ಸಜ್ಜಾಗಿವೆ.

ಇದುವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಲಗ್ಗೆ ಹಾಕಲು ಹವಣಿಸುತ್ತಿದೆ. ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ‘ಧನ–ಘನ ವ್ಯಕ್ತಿತ್ವ’ದ ಆಧಾರದ ಮೇಲೆ ಮತದಾರರನ್ನು ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ. 

ಸಂಘಟನೆಯ ಸೂತ್ರ ಹಿಡಿದುಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿ ಬೇರೂರುವ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದ್ದರೂ ಕಾಂಗ್ರೆಸ್‌ ತನ್ನ ಮೂಲ ಮತದಾರರನ್ನು ನಂಬಿಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ.

ಚುನಾವಣೆ ನಡೆಯದ ಕಾರಣ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರ ಮತಗಳು ಇಲ್ಲದೆಯೇ ಈ ಮತಕ್ಷೇತ್ರ ಕಿರಿದಾಗಿದೆ.

2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಿ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಅವರನ್ನು ಕೊನೆಯ ಕ್ಷಣದಲ್ಲಿ ಪಕ್ಷವು ಕಣಕ್ಕಿಳಿಸಿದೆ.

ಇದೇ ಮೊದಲ ಬಾರಿ, ಚುನಾವಣಾ ಕಣಕ್ಕಿಳಿದಿರುವ ಯೂಸೂಫ್‌ ಷರೀಫ್‌ ಶ್ರೀಮಂತ ವ್ಯಕ್ತಿ ಎನ್ನುವುದು ಗಮನಸೆಳೆದಿದೆ. 5ನೇ ತರಗತಿ ಓದಿರುವ ಯೂಸುಫ್‌ ಷರೀಫ್‌ ಅವರು ₹1743 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಯೂಸಫ್‌ ಹೊಸಬರು ಎನ್ನುವ ಆರೋಪವನ್ನು ಕಳಚಿಕೊಂಡು ಪಕ್ಷದ ಮುಖಂಡರೊಂದಿಗೆ ಯೂಸುಫ್‌ ಷರೀಪ್‌ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

2009ರಲ್ಲಿ ಸ್ಪರ್ಧಿಸಿ, ಕೇವಲ 9 ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಚ್‌.ಎಸ್. ಗೋಪಿನಾಥ್‌ ಅವರು ಈ ಬಾರಿ ಬಿಜೆಪಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೋಲಿನ ಅನುಕಂಪದ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವ ಯತ್ನವನ್ನು ಗೋಪಿನಾಥ್‌ ಮಾಡುತ್ತಿದ್ದಾರೆ. ಬಿ.ಇ. ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಗೋಪಿನಾಥ್‌ ಅವರು ಸಹ ₹ 47.84 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ. ಗೋಪಿನಾಥ್‌ ಅವರು ಪಕ್ಷ ಸಂಘಟನೆ ಜತೆ ಗುರುತಿಸಿಕೊಂಡಿರುವುದು ಸಕಾರಾತ್ಮಕವಾಗಿ ಅಂಶವಾಗಲಿದೆ.

ಜೆಡಿಎಸ್‌ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಜಿ.ಎಂ. ಶೀನಪ್ಪ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿದೆ. ಒಬ್ಬರು ಸಚಿವರು ಮತ್ತು ಮೂವರು ಬಿಜೆಪಿ ಶಾಸಕರು ಈ ಕ್ಷೇತ್ರದಲ್ಲಿದ್ದಾರೆ. ಇಬ್ಬರು ಮಾತ್ರ ಕಾಂಗ್ರೆಸ್‌ನ ಶಾಸಕರಿದ್ದಾರೆ.

ಹಣ ಬಲದ ವಿಷಯವೂ ಬಹಿರಂಗವಾಗಿಯೇ ಈ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಪಕ್ಷದ ವರ್ಚಸ್ಸು ಕಡೆಗಣಿಸುವಂತಿಲ್ಲ ಎನ್ನುವುದು ಮತದಾರರ ವಿಶ್ಲೇಷಣೆ.

* ಚುನಾವಣೆಯಲ್ಲಿ ಹಣ ಬಲದಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಭಿವೃದ್ಧಿಯೇ ಮೊದಲ ಕಾರ್ಯಸೂಚಿಯಾಗಿದೆ.

-ಎಚ್‌.ಎಸ್‌. ಗೋಪಿನಾಥ್‌, ಬಿಜೆಪಿ ಅಭ್ಯರ್ಥಿ

* ಗ್ರಾ.ಪಂ.ಸದಸ್ಯರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಮಾಡಲಾಗುವುದು. ಗ್ರಾ.ಪಂ. ಸದಸ್ಯರು ಸೂಚಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು

-ಯೂಸುಫ್‌ ಷರೀಫ್‌, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು