ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

152 ಫ್ಲ್ಯಾಟ್‌ಗಳಿಗೆ ಮಳೆನೀರು ಮೂಲ ಆಧಾರ!

ವಾರ್ಷಿಕ 15 ಲಕ್ಷ ಲೀಟರ್‌ ಸಂಗ್ರಹ: ನೀರು ಖರೀದಿ ನಿಲ್ಲಿಸಿದ ನಾಗರಿಕರು
Last Updated 17 ನವೆಂಬರ್ 2021, 22:12 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಇಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ಕಾವೇರಿ ನೀರಿನ ಸಂಪರ್ಕವೂ ಇರಲಿಲ್ಲ. ದಿನನಿತ್ಯ ಟ್ಯಾಂಕರ್‌ ನೀರು ಖರೀದಿಸಬೇಕಾಗಿತ್ತು. ಆಗ ಕಲ್ಪನೆ ಮೂಡಿದ್ದು ಮಳೆ ನೀರು ಸಂಗ್ರಹ. ಮಳೆ ನೀರನ್ನು ಜತನದಿಂದ ಸಂಗ್ರಹಿಸಿ ಮನೆ ಮನೆಗಳಲ್ಲಿ ಬಳಕೆಯಾಗುವಂತೆ ಮಾಡಲಾಯಿತು.

ಐದು ಎಕರೆ ಪ್ರದೇಶದಲ್ಲಿರುವ ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 152 ಫ್ಲ್ಯಾಟ್‌ಗಳಿವೆ. ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ಹತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ಒಂದು ದಿನವೂ ನೀರು ಖರೀದಿಸುವ ಪ್ರಸಂಗ ಬಂದಿಲ್ಲ. ಬದಲಾಗಿ ಹೆಚ್ಚುವರಿ ನೀರು ಸಂಗ್ರಹವಾಗುತ್ತಿದೆ. ಇಲ್ಲಿನ ಜನರಿಗೆ ಮಳೆ ನೀರು ಈಗ ಜೀವನಾಡಿಯಾಗಿದೆ.

ನಗರದ ಹರ್ಲೂರು ರಸ್ತೆಯ ಅಂಬಲಿಪುರದ ‘ಎಸ್‌ಜೆಆರ್‌ ರೆಡ್‌ವೂಡ್ಸ್‌’ ಅಪಾರ್ಟ್‌ಮೆಂಟ್‌ನಲ್ಲಿನ ಯಶೋಗಾಥೆ ಇದು. ಈ ಅಪಾರ್ಟ್‌ಮೆಂಟ್‌ನ 1500 ಚದರ ಮೀಟರ್‌ ಅಡಿ ಚಾವಣಿ ಮೇಲೆ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ವಾರ್ಷಿಕ 15 ಲಕ್ಷ ಲೀಟರ್‌ ನೀರು ಸಂಗ್ರಹಿಸಲಾಗುತ್ತಿದೆ. ದಿನ ನಿತ್ಯದ ಬಳಕೆಗೆ ಇದೇ ಜೀವ ಜಲವಾಗಿದೆ. ಈ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಲು 85 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗಿದೆ. ಸಂಗ್ರಹಿಸಿದ ನೀರನ್ನು ಶುದ್ಧೀಕರಣಗೊಳಿಸಿ ಕುಡಿಯುವುದಕ್ಕೂ ಬಳಸಲಾಗುತ್ತಿದೆ.

‘ಸರ್ಜಾಪುರ ಪ್ರದೇಶದಲ್ಲಿ 2010ರಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿರಲಿಲ್ಲ.ನೀರಿಗಾಗಿ ಪರಿತಪಿಸಬೇಕಾಗುತ್ತಿತ್ತು. ಟ್ಯಾಂಕರ್‌ ಗಳ ಮೂಲಕ ನಾವು ನೀರು ಖರೀದಿಸುತ್ತಿದ್ದೇವು. ಆಗ ನೀರು ಸಂಗ್ರಹ ಕಲ್ಪನೆ ಮೂಡಿತು. ಮಳೆ ನೀರು ಸಂಗ್ರಹ ವ್ಯವಸ್ಥೆ ಕೈಗೊಂಡ ನಂತರ ಸಮಸ್ಯೆ ಬಗೆಹರಿಯಿತು. ಸಂಗ್ರಹವಾಗುವ ಮಳೆ ನೀರನ್ನು ಮೊದಲು ಫೆರೊ ಸಿಮೆಂಟ್‌ ಫಿಲ್ಟರ್‌ಗೆ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪೈಪುಗಳ ಮೂಲಕ ಮನೆಗಳಿಗೆ ಪೂರೈಸಲಾಗುತ್ತಿದೆ’ ಎಂದು ಬಯೋಮ್–‌ ಎನ್ವಿರಾನ್‌ಮೆಂಟಲ್‌ ಸಲ್ಯೂಷನ್ಸ್‌ನ ಶುಭಾ ರಾಮಚಂದ್ರನ್‌ ವಿವರಿಸಿದ್ದಾರೆ.

‘ಈಗ ಕಾವೇರಿ ನೀರು ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಈ ನೀರು ಸಹ ಸಾಕಾಗುವುದಿಲ್ಲ. ಮಳೆ ನೀರು ಸಂಗ್ರಹದ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಇದ್ದರೆ ಮತ್ತೆ ನಾವು ನೀರು ಖರೀದಿಸುವ ಪರಿಸ್ಥಿತಿ ಇರುತ್ತಿತ್ತು. ಈಗ ನಮಗೆ ಹಣವೂ ಉಳಿತಾಯವಾಗಿದೆ ಮತ್ತು ನೀರಿನ ಸಮಸ್ಯೆಯೂ ಬಗೆಹರಿದಿದೆ’ ಎಂದು ಶುಭಾ ವಿವರಿಸುತ್ತಾರೆ.

‘ಅತಿ ಹೆಚ್ಚು ಮಳೆ ನೀರು ಸಂಗ್ರಹಿಸುತ್ತಿರುವ ನಗರಗಳಲ್ಲಿ ಚೆನ್ನೈ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಾಗರಿಕರಲ್ಲಿ ಈಗ ಅರಿವು ಮೂಡುತ್ತಿರುವುದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ಮಳೆ ನೀರು ಸಂಗ್ರಹದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಸರಾಸರಿ 1000 ಮಿಲಿ ಮೀಟರ್‌ ಮಳೆಯಾಗುತ್ತದೆ. ಈ ನೀರನ್ನು ಸಂಗ್ರಹಿಸಿದರೆ ನಗರದಲ್ಲಿ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ’ ಎಂದು ಬಯೋಮ್‌ ಎನ್ವಿರಾನ್‌ಮೆಂಟಲ್‌ ಟ್ರಸ್ಟ್‌ನ ಸಲಹೆಗಾರ ವಿಶ್ವನಾಥ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT