ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಮ್ ಮೂಲಕ ವಂಚನೆ: ₹45.31 ಲಕ್ಷ ಕಳೆದುಕೊಂಡ ಮಹಿಳೆ!

Last Updated 22 ನವೆಂಬರ್ 2021, 2:09 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್‌ಸ್ಟಾಗ್ರಾಮ್‌’ ಆ್ಯಪ್‌ ಮೂಲಕ ನಗರದ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಸೈಬರ್ ವಂಚಕರು, ಉಡುಗೊರೆ ಆಮಿಷವೊಡ್ಡಿ ₹ 45.31 ಲಕ್ಷ ಪಡೆದು ವಂಚಿಸಿದ್ದಾರೆ.

ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ 30 ವರ್ಷದ ಮಹಿಳೆ, ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ಅಲೆಕ್ಸ್ ಎರಿಕ್, ವೀರ್ ಪಾಲ್, ಬೆನ್ ಹಾಗೂ ಮಥುರಾ ಅನಿವರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ವರ್ತೂರು ನಿವಾಸಿಯಾದ ಮಹಿಳೆ ನೀಡಿರುವ ದೂರು ಆಧರಿಸಿ ತನಿಖೆ ಆರಂಭಿಸಲಾಗಿದೆ. ಆರೋಪಿಗಳು, ನಕಲಿ ಹೆಸರು ಹೇಳಿಕೊಂಡು ವಂಚಿಸಿರುವುದು ಗೊತ್ತಾಗಿದೆ. ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳ ವಿಳಾಸ ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಡಗು ಕ್ಯಾಪ್ಟನ್ ಸೋಗಿನಲ್ಲಿ ವಂಚನೆ; ‘ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ಮಹಿಳೆ ಖಾತೆ ಹೊಂದಿದ್ದಾರೆ. ಅದೇ ಖಾತೆಗೆ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ಅಲೆಕ್ಸ್ ಎರಿನ್, ತಾನೊಬ್ಬ ಅಂತರರಾಷ್ಟ್ರೀಯ ಹಡಗಿನ ಕ್ಯಾಪ್ಟನ್ ಎಂಬುದಾಗಿ ಹೇಳಿಕೊಂಡಿದ್ದ. ಅದನ್ನು ನಂಬಿದ್ದ ಮಹಿಳೆ, ರಿಕ್ವೆಸ್ಟ್ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ ಆರೋಪಿ, ಅದನ್ನು ಸ್ವೀಕರಿಸುವಂತೆ ಕೋರಿದ್ದ. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿದ್ದರು. ಸೆ. 30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೊಬ್ಬ ಆರೋಪಿ, ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ. ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದ ಆತ, ಕೆಲ ಶುಲ್ಕ ಪಾವತಿಸುವಂತೆ ಹೇಳಿದ್ದ. ಶುಲ್ಕ ತುಂಬದಿದ್ದರೆ, ಜೈಲು ಶಿಕ್ಷೆಯಾಗುವುದಾಗಿಯೂ ಎಚ್ಚರಿಸಿದ್ದ.’

‘ಆರೋಪಿ ಮಾತು ನಂಬಿದ್ದ ಮಹಿಳೆ, ಆತ ಹೇಳಿದ್ದ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಂತ ಹಂತವಾಗಿ ₹ 45.31 ಲಕ್ಷ ಪಾವತಿಸಿದ್ದರು. ಹಣ ಪಡೆದ ಆರೋಪಿಗಳು ಯಾವುದೇ ಉಡುಗೊರೆ ಕಳುಹಿಸಿರಲಿಲ್ಲ. ಮೊಬೈಲ್ ಸ್ವಿಚ್‌ ಆಫ್ ಮಾಡಿ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT