ಬೆಂಗಳೂರು: ವರನಟ ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ ಚಿತ್ರದೊಂದಿಗೆ 1974ರ ಜನವರಿ 11ರಂದು ರಾಜಧಾನಿಯ ಪ್ಯಾಲೆಸ್ ಗುಟ್ಟಹಳ್ಳಿ ರಸ್ತೆಯಲ್ಲಿದ್ದ ಏಕಪರದೆ ಚಿತ್ರಮಂದಿರವಾದ ‘ಕಾವೇರಿ’ ಮೊದಲ ಹೆಜ್ಜೆ ಇಟ್ಟಿತ್ತು. ಇತ್ತೀಚೆಗಷ್ಟೇ ಐವತ್ತು ವರ್ಷದ ಸಂಭ್ರಮ ಆಚರಿಸಿದ್ದ ಈ ಚಿತ್ರಮಂದಿರ ಇನ್ನು ನೆನಪು ಮಾತ್ರ.
ಏಪ್ರಿಲ್ 19ಕ್ಕೆ ‘ಕಾವೇರಿ’ಯಲ್ಲಿ ಕೊನೆಯ ಪ್ರದರ್ಶನ ನಡೆದಿದ್ದು, ಇದೀಗ ಚಿತ್ರಮಂದಿರವನ್ನು ಕೆಡವಿ, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕೆಲಸ ಆರಂಭವಾಗಿದೆ. ಕಾವೇರಿಯಲ್ಲಿ ಕೊನೆಯದಾಗಿ ಪ್ರದರ್ಶನ ಕಂಡಿದ್ದು ಹಿಂದಿಯ ‘ಬಡೇಮಿಯಾ ಚೋಟೆಮಿಯಾ’ ಹಾಗೂ ‘ಮೈದಾನ್’ ಸಿನಿಮಾಗಳು.
ಬೆಂಗಳೂರಿನಲ್ಲಿ ‘ಕಪಾಲಿ’ ಚಿತ್ರಮಂದಿರದ ಬಳಿಕ ಅತ್ಯಧಿಕ ಆಸನಗಳಿದ್ದ ಥಿಯೇಟರ್ ಎಂಬ ಹೆಗ್ಗಳಿಕೆ ‘ಕಾವೇರಿ’ಗಿತ್ತು. ಚಿತ್ರಮಂದಿರ ಆರಂಭವಾದಾಗ ‘ಕಾವೇರಿ’ಯಲ್ಲಿ 1384 ಸೀಟುಗಳಿದ್ದವು. 1995ರಲ್ಲಿ ಚಿತ್ರಮಂದಿರದ ಪುನರ್‌ನಿರ್ಮಾಣವಾದಾಗ ಈ ಸಂಖ್ಯೆ 1,100ಕ್ಕೆ ಇಳಿಯಿತು. ‘ಕಾವೇರಿ’ ಚಿತ್ರಮಂದಿರದಲ್ಲಿ ಹಿಂದಿ ಸಿನಿಮಾಗಳ ಭರಾಟೆ ಅಧಿಕವಾಗಿತ್ತು. 40 ವಾರ ‘ಶಂಕರಾಭರಣಂ’, ಹಿಂದಿಯ ‘ದಿಲ್‌ವಾಲೆ ದುಲ್ಹನಿಯಾ ಲೇಜಾಯೆಂಗೆ’ 22 ವಾರ ಹಾಗೂ ‘ಇಂಡಿಯನ್’ ಸಿನಿಮಾ ನೂರು ದಿನ ಪೂರೈಸಿತ್ತು.
‘ಚಿತ್ರಮಂದಿರಗಳಿಗೆ ಸೂಕ್ತ ಸಿನಿಮಾಗಳ ಪೂರೈಕೆ ಇಳಿಕೆಯಾಗಿತ್ತು. ಜೊತೆಗೆ ಒಟಿಟಿ ಬಂದ ಬಳಿಕ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಒಟಿಟಿ ಬಳಿಕ ಏಕಪರದೆ ಚಿತ್ರಮಂದಿರಗಳು ಸಂಪೂರ್ಣವಾಗಿ ಮುಚ್ಚಿಹೋಗುವ ಸ್ಥಿತಿ ಬಂದಿದೆ.
ಒಟಿಟಿಯೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ ಏನೂ ಮಾಡಲು ಸಾಧ್ಯವಿಲ್ಲ. ಬೇಸರ ಖಂಡಿತವಾಗಿಯೂ ಇದೆ. ಸಮಯಕ್ಕೆ ಸರಿಯಾಗಿ ಬದಲಾಗಬೇಕಾದ ಸ್ಥಿತಿ ಎದುರಾಗಿದೆ. ಆದಾಯ ಇಲ್ಲದೇ ಇರುವಾಗ ಬದಲಾವಣೆ ಮಾಡಲೇಬೇಕಾದ ಅನಿವಾರ್ಯ. ಸಿನಿಮಾ ಓಡಿಸಿದರೆ ಅದರಿಂದ ಬರುವ ಆದಾಯದಲ್ಲಿ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ನಿರ್ಧಾರ. ಹೀರೊಗಳು ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳು ಮಾಡಿದರೆ ಚಿತ್ರಮಂದಿರಗಳಿಗೆ ಫೀಡಿಂಗ್ ಚೆನ್ನಾಗಿ ಇರುತ್ತದೆ. ಬದಲಾಗಿ, ಅವರು ಎರಡು–ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಹೇಗೆ? ಚಿತ್ರಮಂದಿರಗಳನ್ನು ಖಾಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲವಲ್ಲ. ಅತ್ತ ಮೂರ್ನಾಲ್ಕು ವರ್ಷಗಳಿಂದ ಒಳ್ಳೆಯ ಹಿಂದಿ ಸಿನಿಮಾಗಳು ಬಂದಿಲ್ಲ. ಹಾಗೆ ನೋಡಿದರೆ ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿದವು’ ಎನ್ನುತ್ತಾರೆ ಕಾವೇರಿ ಚಿತ್ರಮಂದಿರದ ಮಾಲೀಕ ಪ್ರಕಾಶ್ ನರಸಿಂಹಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.