ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: 14 ಸಾವಿರ ಮಂದಿಗೆ ನೋಟಿಸ್‌

‘ಹೈ–ಟೆನ್ಷನ್‌’ ತಂತಿ ಬಳಿ ಕಟ್ಟಡ: ನಿಲ್ಲದ ಜೀವಬಲಿ
Last Updated 28 ಮೇ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಹೈ–ಟೆನ್ಷನ್‌ ವಿದ್ಯುತ್‌ ತಂತಿ ಸ್ಪರ್ಶದಿಂದ ನಗರದಲ್ಲಿ ಇತ್ತೀಚೆಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಈ ಅವಘಡಗಳ ಬಳಿಕ ಎಚ್ಚೆತ್ತ ಬೆಸ್ಕಾಂ, ಹೈಟೆನ್ಷನ್‌ ವಿದ್ಯುತ್‌ ಮಾರ್ಗದ ಬಳಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಒಟ್ಟು 14 ಸಾವಿರ ಮಂದಿಗೆ ನೋಟಿಸ್ ಜಾರಿಗೊಳಿಸಿದೆ.

ಹೈ ಟೆನ್ಷನ್‌ ವಿದ್ಯುತ್‌ ಮಾರ್ಗ ಹಾದುಹೋಗಿರುವ ಕಡೆ ಕಟ್ಟಡ ನಿರ್ಮಿಸುವಾಗ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಆದರೆ, ನಗರದಲ್ಲಿ ಬಹುತೇಕ ಕಡೆ ಈ ನಿಯಮ ಪಾಲನೆ ಆಗುತ್ತಲೇ ಇಲ್ಲ. ನಿಯಮ ಉಲ್ಲಂಘನೆ ಕಣ್ಣಿಗೆ ರಾಚುವಂತಿದ್ದರೂ ಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು. ಇತ್ತೀಚೆಗೆ ವಿದ್ಯುತ್‌ ಅವಘಡದಿಂದ ಜೀವಬಲಿಯಾದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

‘ವಿದ್ಯುತ್‌ ಅವಘಡಗಳು ಸಂಭವಿಸಿದ ಕಾರಣದಿಂದಾಗಿ, ನೋಟಿಸ್‌ ನೀಡುವುದನ್ನು ಒಂದು ವಾರದಿಂದ ಅಭಿಯಾನದ ರೀತಿಯಲ್ಲಿ ಮಾಡುತ್ತಿದ್ದೇವೆ. ಈಗಾಗಲೇ 14,000 ನೋಟಿಸ್‌ಗಳನ್ನು ನೀಡಿದ್ದೇವೆ. ಕಟ್ಟಡದ ಮಾಲೀಕರು 15 ದಿನಗಳ ಒಳಗೆ ಸೂಕ್ತ ಉತ್ತರ ನೀಡದಿದ್ದರೆ ವಿದ್ಯುತ್ ಸಂಪರ್ಕ ಕಡಿತದ ಕ್ರಮವನ್ನು ಜರುಗಿಸುತ್ತೇವೆ’ ಎಂದು ಬೆಸ್ಕಾಂ ನಿರ್ದೇಶಕಿ ಸಿ.ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಈ ಹಿಂದೆಯೂ ನೋಟಿಸ್‌ಗಳನ್ನು ನೀಡಿದ್ದೆವು. ಅಪಾಯದ ಬಗ್ಗೆ ಅರಿವು ಮೂಡಿಸಿದ್ದೆವು’ ಎಂದರು.

ಬೆಸ್ಕಾಂ ನೀಡುವ ನೋಟಿಸ್‌ಗೆ ಕಟ್ಟಡದ ಮಾಲೀಕರು ಕ್ಯಾರೇ ಎನ್ನುತ್ತಿಲ್ಲ. ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತೊರೆಯಲು ಸಿದ್ಧರಿಲ್ಲ. ಇನ್ನೊಂದೆಡೆ, ‘ಕಟ್ಟಡ ತೆರವುಗೊಳಿಸುವ ಅಧಿಕಾರ ನಮಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬೆಸ್ಕಾಂ ಅಧಿಕಾರಿಯೊಬ್ಬರು ಅಸಹಾಯಕತೆವ್ಯಕ್ತಪಡಿಸಿದರು.

‘ಸ್ಥಳೀಯ ಜನಪ್ರತಿನಿಧಿಗಳ ಬೆಂಬಲದಿಂದ ವಿದ್ಯುತ್‌ ಮಾರ್ಗಗಳ ಬಳಿಯೇ ಜನ ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ವಿರುದ್ಧ ಕ್ರಮ ಜರುಗಿಸಲು ನಾವು ಅಸಹಾಯಕರಾಗಿದ್ದೇವೆ’ ಎಂದು ಅವರು ತಿಳಿಸಿದರು.

‘ವಿದ್ಯುತ್‌ ಮಾರ್ಗದಲ್ಲಿ ಕಟ್ಟಡಗಳು ನಿರ್ಮಾಣವಾಗುವಾಗ ಕೆಪಿಟಿಸಿಎಲ್‌ ಅಧಿಕಾರಿಗಳು ಸುಮ್ಮನಿರುತ್ತಾರೆ. ನಿರ್ಮಾಣ ಪೂರ್ಣಗೊಂಡ ಬಳಿಕ ಬಂದು ಕಾನೂನು–ನಿಯಮ ಹೇಳಿ ತೊಂದರೆ ಕೊಡುತ್ತಾರೆ. ಕೆಲವು ಕಡೆ ನಿಯಮ ಉಲ್ಲಂಘನೆ ಕಣ್ಣಿಗೆ ರಾಚುವಂತಿದ್ದರೂ ಗಮನಿಸುವುದಿಲ್ಲ’ ಎಂದು ಬಾಣಸವಾಡಿಯ ನಿವಾಸಿಯೊಬ್ಬರು ತಿಳಿಸಿದರು.

ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗುತ್ತದೆ ಎಂದು ಕೆಪಿಟಿಸಿಎಲ್‌ ಮತ್ತು ಬೆಸ್ಕಾಂ ಪ್ರತಿವರ್ಷಹೇಳುತ್ತಲೇ ಬರುತ್ತಿವೆ. ಆದರೆ, ಈ ಕ್ರಮವನ್ನು ಜರುಗಿಸಿದ ಒಂದು ಉದಾಹರಣೆಯೂ ಇಲ್ಲ.

ಹೈ–ಟೆನ್ಷನ್‌ ತಂತಿಗಳ ಬಳಿ ಕಟ್ಟಡಗಳನ್ನು ನಿರ್ಮಿಸುವುದನ್ನು ತಪ್ಪಿಸಲು ಮಹಾನಗರ ಯೋಜನೆಯಲ್ಲೂ ಕೆಲವೊಂದು ನಿಯಮಗಳನ್ನುಸೇರ್ಪಡೆಗೊಳಿಸಲಾಗುತ್ತಿದೆ.

ವಿದ್ಯುತ್‌ ಮಾರ್ಗ ಮತ್ತು ಕಟ್ಟಡದ ನಡುವೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಪರಿಷ್ಕೃತ ನಗರ ಮಹಾಯೋಜನೆ–2031ರ ಕರಡಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಪಷ್ಟಪಡಿಸಿದೆ. ಈ ನಿಯಮ ಇನ್ನಷ್ಟೇ ಜಾರಿಗೆ ಬರಬೇಕಿದೆ.

‘ಕಟ್ಟಡ ನಿರ್ಮಿಸಿದರೆ ಅಧಿಕಾರಿಗಳೇ ಹೊಣೆ’
ಬೆಂಗಳೂರು: ನಗರದಲ್ಲಿ 65 ಕಿಲೋ ವಾಟ್‌ ಹಾಗೂ ಹೈ–ಟೆನ್ಷನ್‌ ವಿದ್ಯುತ್‌ ಮಾರ್ಗಗಳು ಹಾದುಹೋಗಿರುವ ಕಡೆ ವಿದ್ಯುತ್‌ ಅವಘಡದಿಂದ ಪ್ರಾಣ ಹಾನಿ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಬೇಕು ಎಂದು ಮೇಯರ್‌ ಗಂಗಾಂಬಿಕೆ ಸೂಚಿಸಿದ್ದಾರೆ.

‘ನಗರದಲ್ಲಿ ಇಂತಹ ವಿದ್ಯುತ್‌ ಮಾರ್ಗಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳ ಹಾಗೂ ಸ್ವತ್ತುಗಳ ವಿವರ ಒದಗಿಸಬೇಕು. ಇಂತಹ ಕಡೆ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೆ ತಕ್ಷಣವೇ ಸ್ಥಗಿತಗೊಳಿಸಬೇಕು. ವಿದ್ಯುತ್ ಅವಘಡ ತಡೆಯಲು ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಬೇಕು’ ಎಂದು ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಇತ್ತೀಚಿನ ವಿದ್ಯುತ್‌ ಅವಘಡಗಳು
* 2019ರ ಏ.13:
ಜೀವನ್‌ಬಿಮಾನಗರದ ಕೇಂದ್ರೀಯ ವಿದ್ಯಾಲಯ ಕ್ವಾರ್ಟರ್ಸ್ ಆವರಣದಲ್ಲಿ ಹೈಟೆನ್ಶನ್ ವಿದ್ಯುತ್ ತಗುಲಿ ಭರತ್ (13) ಸಾವು
* ಏ.19: ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೊನಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ತಂತಿ ತುಳಿದು ಕೈಮಗ್ಗ ಕಾರ್ಖಾನೆ ನೌಕರ ಬಾಲಕೃಷ್ಣ (38) ಮೃತ್ಯು
* ಏ.26: ಮಹಾಲಕ್ಷ್ಮಿ ಲೇಔಟ್‍ನ 7ನೇ ಅಡ್ಡರಸ್ತೆಯಲ್ಲಿ ವಿದ್ಯುತ್ ತಂತಿ ತಗುಲಿ ಸಾಯಿ ಚರಣ್‌ಗೆ (7) ಗಂಭೀರ ಗಾಯ
* ಮೇ.20:ಮತ್ತಿಕೆರೆಯ ಮನೆಯೊಂದರ ಮೇಲೆ ಬಿದ್ದಿದ್ದ ಚೆಂಡನ್ನು ತರಲು ಹೋಗಿಹೈ–ಟೆನ್ಷನ್‌ ತಂತಿ ತಗುಲಿ ತೀವ್ರವಾಗಿ ಮೇ 16ರಂದು ಗಾಯಗೊಂಡಿದ್ದ ನಿಖಿಲ್ (14) ಮೃತ್ಯು
* ಮೇ 26: ಎ.ನಾರಾಯಣಪುರದಲ್ಲಿ ಹಾದು ಹೋಗಿರುವ 66 ಕೆ.ವಿ. ಮಾರ್ಗದ ತಂತಿ ತಗುಲಿ ಪ್ರಿಯಾ (13) ಗಂಭೀರ ಗಾಯ
* ಮೇ 26: ಮಳೆಗಾಳಿಗೆ ಮನೆಯ ಮೇಲೆ ಬಿದ್ದಿದ್ದ ತೆಂಗಿನ ಗರಿಯನ್ನು ತೆಗೆಯುವಾಗ ವಿದ್ಯುತ್‌ ತಂತಿ ತಗುಲಿ ಕಾಕ್ಸ್‌ಟೌನ್‌ ಸಮೀಪದ ರಾಮಚಂದ್ರಪ್ಪ ಬಡಾವಣೆಯ ಸತೀಶ್‌ (32) ಮೃತ್ಯು

ಅಂಕಿ–ಅಂಕಿ
14,000:ನಿಯಮ ಉಲ್ಲಂಘಿಸಿ ಹೈ–ಟೆನ್ಷನ್‌ ಮಾರ್ಗದ ಬದಿಯಲ್ಲಿ ಕಟ್ಟಡ ಕಟ್ಟಿದವರಿಗೆ ಕಳೆದ ಒಂದು ವಾರದಲ್ಲಿ ನೀಡಲಾದ ನೋಟಿಸ್‌ಗಳು
15 ದಿನಗಳು:ನೋಟಿಸ್‌ಗೆ ಉತ್ತರಿಸಲು ಇರುವ ಕಾಲಾವಕಾಶ

**

ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಗಳನ್ನು ಕೆಡವಲು ಬಿಬಿಎಂಪಿಯ ಸಹಕಾರ ಕೋರಿದ್ದೇವೆ.
–ಎಸ್‌.ಸೆಲ್ವಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT