ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ರೈತರ ರಣಕಹಳೆ, ಬಂದ್‌ಗೆ ಎಎಪಿ, ಕಾಂಗ್ರೆಸ್ ಸಾಥ್

ದಲಿತ, ಕಾರ್ಮಿಕ ಸಂಘಟನೆಗಳ ಬೆಂಬಲ
Last Updated 8 ಡಿಸೆಂಬರ್ 2020, 21:08 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ರೈತ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಿದ್ದ ಭಾರತ್ ಬಂದ್‌ ಬೆಂಬಲಿಸಿ ರಾಜ್ಯದ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ರಣಕಹಳೆ ಮೊಳಗಿಸಿದವು.

ಕುರುಬೂರು ಶಾಂತಕುಮಾರ್‌ ಮತ್ತು ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ವೃತ್ತದಿಂದ ಹೊರಟ ರೈತರು, ಮೈಸೂರು ಬ್ಯಾಂಕ್ ವೃತ್ತದ ತನಕ ಜಾಥಾ ನಡೆಸಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಸಾಥ್ ನೀಡಿದ್ದರು.

ಜಾಥಾ ಮುಂದುವರಿಸದಂತೆ ಪೊಲೀಸರು ತಡೆದ ಕಾರಣ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರೊಬ್ಬರು ಪೊಲೀಸರ ಕಾಲಿಗೆ ಎರಗಿ ಜಾಥಾ ಮುಂದುವರಿಸಲು ಅವಕಾಶ ಕೋರಿದರು. ಕೆಲವರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐಕ್ಯ ಹೋರಾಟ ಸಮಿತಿಯಿಂದ ಮೈಸೂರು ಬ್ಯಾಂಕ್ ಬಳಿ ಮಾನವ ಸರಪಣಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಮತ್ತೊಂದೆಡೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದ ತನಕ ರೈತರು ಮೆರವಣಿಗೆ ನಡೆಸಿದರು. ಮೈಸೂರಿನ ಕಲಾವಿದೆ ಚಾಮುಂಡಮ್ಮ ಅವರು ಮೆರವಣಿಗೆಯುದ್ದಕ್ಕೂ ಮಾಡಿದ ನೃತ್ಯ ಗಮನ ಸೆಳೆಯಿತು. ‘ಕೇಂದ್ರ ಸರ್ಕಾರ ರೈತರನ್ನು ಬೀದಿಯಲ್ಲಿ ನಿಲ್ಲಿಸಲು ಹೊರಟಿದೆ. ಹೀಗಾಗಿ, ರೈತರ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ’ ಎಂದು ಹೇಳಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಪುರಭವನದ ಬಳಿ ಪ್ರತಿಭಟನೆ ನಡೆಸಿದರು. ರೈತರ ಹೋರಾಟ ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿ.ಎಸ್.ಉಗ್ರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ಹೋರಾಟಕ್ಕೆ ಸಮ: ಡಿ.ಕೆ.ಶಿವಕುಮಾರ್

‘ರೈತರು ನಡೆಸುತ್ತಿರುವ ಹೋರಾಟದಲ್ಲಿ ಜಾತಿ, ಧರ್ಮ, ಪಕ್ಷದ ಬೇಧವಿಲ್ಲದೆ ಎಲ್ಲರೂ ಬೆಂಬಲ ಪಾಲ್ಗೊಳ್ಳುತ್ತಿದ್ದು, ಇದು ಸ್ವಾತಂತ್ರ್ಯ ಹೋರಾಟಕ್ಕೆ ಸಮ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಜನಸಂಖ್ಯೆಯಲ್ಲಿ ಶೇ 78ರಷ್ಟು ರೈತರಿದ್ದಾರೆ. ಅವರಿಗೆ ಮರಣಶಾಸನವಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಅನ್ನದಾತರ ಬಾಯಿಗೆ ಮಣ್ಣು ಸುರಿಯುವ ಪ್ರಯತ್ನ ಇದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕರಾಳ ಕಾಯ್ದೆ ರೂಪಿಸುವಾಗ ರೈತ ಮುಖಂಡರು, ಕಾಂಗ್ರೆಸ್ ಅಥವಾ ಇತರೆ ಯಾವ ಪಕ್ಷದವರ ಸಲಹೆಯನ್ನೂ ಪಡೆದಿಲ್ಲ. ಕೃಷಿ ಮಾರುಕಟ್ಟೆಗಳ ಮೇಲೆ ಖಾಸಗಿ ಕಂಪನಿಗಳ ಕಣ್ಣು ಬಿದ್ದಿದ್ದು, ರೈತರ ಮೇಲೆ ಕಾಯ್ದೆಗಳನ್ನು ಹೇರಿ ಆ ಕಂಪನಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ. ರೈತರ ಸ್ವಾವಲಂಬಿ ಬದುಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಇದೆ. ಸದನದ ಒಳಗೂ ಹೋರಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಎಂದಿನಂತೆ ಇದ್ದ ವಹಿವಾಟು

ಬಂದ್ ಬೆಂಬಲಿಸಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದರೆ ನಗರದಲ್ಲಿ ಅಂಗಡಿ–ಮಂಗಟ್ಟು ಎಂದಿನಂತೆ ತೆರೆದಿದ್ದವು. ವ್ಯಾಪಾರ ವಹಿವಾಟು, ವಾಹನ ಸಂಚಾರದಲ್ಲಿ ಅಷ್ಟೇನೂ ವ್ಯತ್ಯಾಸ ಕಾಣಿಸಲಿಲ್ಲ.

ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ ಸೇರಿ ಎಲ್ಲೆಡೆ ವ್ಯಾಪಾರ ವಹಿವಾಟು ಸಾಮಾನ್ಯವಾಗಿತ್ತು. ಬೆಳಿಗ್ಗೆಯೇ ರೈತ ಸಂಘಟನೆಗಳ ಕಾರ್ಯಕರ್ತರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.

ರೈತರು ಜಾಥಾ ನಡೆಸಿದ ರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು, ಕಟ್ಟೆಚ್ಚರ ವಹಿಸಿದ್ದರು.

ಎತ್ತಿನ ಗಾಡಿಯಲ್ಲಿ ವಾಟಾಳ್ ಮೆರವಣಿಗೆ

ಬಂದ್ ಬೆಂಬಲಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ತಮ್ಮ ಕಾರ್ಯಕರ್ತರ ಜತೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದಿಂದ ಹೊರಟು ಗಾಂಧಿನಗರ ಸುತ್ತುವರಿದು ಮತ್ತೆ ಅಲ್ಲಿಗೇ ಬಂದು ರಸ್ತೆ ತಡೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ವಕೀಲರ ಬೆಂಬಲ

ಬಂದ್ ಬೆಂಬಲಿಸಿ ಬೆಂಗಳೂರು ವಕೀಲರ ಸಂಘದಿಂದ ಸಿಟಿ ಸಿವಿಲ್ ಕೋರ್ಟ್ ಎದುರು ಪ್ರತಿಭಟನೆ ನಡೆಸಲಾಯಿತು.ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದಲ್ಲಿ ಹಸಿರು ಶಾಲು ಹೊದ್ದು ಬ್ಯಾನರ್ ಹಿಡಿದಿದ್ದ ವಕೀಲರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜಭವನ ಚಲೋ ಇಂದು

ರೈತರ ಹೋರಾಟ ಬೆಂಬಲಿಸಿ ಟಿ.ಎ. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬುಧವಾರ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಬಿಬಿಎಂಪಿ ಕಚೇರಿ ಬಳಿಯಿಂದ ರಾಜಭವನ ತನಕ ಮೆರವಣಿಗೆ ನಡೆಯಲಿದೆ ಎಂದು ಕರವೇ ತಿಳಿಸಿದೆ.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದಿಂದ ಬುಧವಾರ ಬಾರ್‌ಕೋಲು ಚಳವಳಿ ನಡೆಯಲಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿಯಿಂದ ವಿಧಾನಸೌಧದ ತನಕ ಮೆರವಣಿಗೆ ನಡೆಸಲಾಗುವುದು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ದಾಸನಪುರ ಎಪಿಎಂಸಿಯಲ್ಲಿ ವ್ಯಾಪಾರ ಸ್ಥಗಿತ

ಹೆಸರಘಟ್ಟ: ಮಂಗಳವಾರ ನಡೆದ ಭಾರತ್ ಬಂದ್‍ಗೆ ಹೋಬಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ದಾಸನಪುರ ಎಪಿಎಂಸಿ ವರ್ತಕರ ಸಂಘವು ಪ್ರಾಂಗಣದಲ್ಲಿ ವ್ಯಾಪಾರ ಸ್ಥಗಿತಗೊಳಿಸಿತ್ತು. ವ್ಯಾಪಾರ ಇಲ್ಲದೇ ಇದ್ದಿದ್ದರಿಂದ ಎಪಿಎಂಸಿ ಪ್ರಾಂಗಣ ಬಿಕೋ ಎನ್ನುತ್ತಿತ್ತು.

'ರೈತರು ಇದ್ದರಷ್ಟೇ ಎಪಿಎಂಸಿ ಇರಲು ಸಾಧ್ಯ. ಅವರಿಗೆ ತೊಂದರೆಯಾದರೆ ವ್ಯಾಪಾರ ನಡೆಯಲ್ಲ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ' ಎಂದು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ರೆಡ್ಡಿ ತಿಳಿಸಿದರು.

ಕಸಘಟ್ಟಪುರ, ಹುರುಳಿಚಿಕ್ಕನಹಳ್ಳಿ, ಹೆಸರಘಟ್ಟ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಿ, ಸಾರ್ವಜನಿಕರು ಬಂದ್‍ಗೆ ಬೆಂಬಲ ಸೂಚಿಸಿದರು. ಬಸ್ ಸಂಚಾರಕ್ಕೆ ತೊಡಕಾಗದಿದ್ದರೂ ಮಧ್ಯಾಹ್ನದವರೆಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಬಸ್‍ಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡು ಬಂದರು. ಡಾಬಾ, ಹೋಟೆಲ್‍ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಕಂಡುಬಂತು. ಬಂದ್ ಇದ್ದ ಕಾರಣ, ಹೆಸರಘಟ್ಟ ಕೆರೆಗೆ ನಗರದಿಂದ ಬಂದ ಮೋಜಿನಲ್ಲಿ ದಿನವನ್ನು ಕಳೆದರು.

ದಾಸನಪುರದ ಮಾದನಾಯಕನಹಳ್ಳಿ, ಮಾಚೋಹಳ್ಳಿ, ಕಡಬಗೆರೆ, ಮಾದವಾರ, ಚಿಕ್ಕಬಿದರಕಲ್ಲು ಗ್ರಾಮಗಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಬಹುತೇಕ ಅಂಗಡಿಗಳು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT