ಶನಿವಾರ, ಸೆಪ್ಟೆಂಬರ್ 19, 2020
21 °C
ಹಾಸಿಗೆ ಸಂಖ್ಯೆ 10 ಸಾವಿರ ತಲುಪಲೇ ಇಲ್ಲ.

50 ದಿನದಲ್ಲೇ ಮುಚ್ಚಿದ ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆ೦ಗಳೂರು ಅ೦ತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ಕೋವಿಡ್‌ ಆರೈಕೆ ಕೇಂದ್ರವನ್ನು ಆರಂಭಗೊಂಡ 50 ದಿನಗಳಲ್ಲೇ ಮುಚ್ಚಲಾಗಿದೆ. ನಗರದಲ್ಲಿ ಕೋವಿಡ್‌ ಪರಿಸ್ಥಿತಿ ಹತೋಟಿಗೆ ಬಂದ ಕಾರಣಕ್ಕೆ ಈ ಕೇಂದ್ರವನ್ನು ಮುಚ್ಚಿದ್ದಲ್ಲ! ಇಲ್ಲಿ ಆರೈಕೆಗೆ ಒಳಗಾಗಲು ಕೋವಿಡ್‌ ಸಂತ್ರಸ್ತರೇ ಮುಂದೆ ಬರುತ್ತಿಲ್ಲ. ‌

ರೋಗ ಲಕ್ಷಣ ಇಲ್ಲದ ಕೋವಿಡ್ ಸೋಂಕಿತರ ಆರೈಕೆ ಸಲುವಾಗಿ ಈ ಕೇಂದ್ರವನ್ನು ಸರ್ಕಾರ ಆರಂಭಿಸಿತ್ತು. ಇಲ್ಲಿ 1,100 ಹಾಸಿಗೆ ವ್ಯವಸ್ಥೆ ಕಲ್ಪಿಸಲಿದ್ದು, ಇದು ದೇಶದ ಅತಿದೊಡ್ಡ ಆರೈಕೆ ಕೇಂದ್ರವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಇಲ್ಲಿ ಅಳವಡಿಸಿದ್ದು 6,500 ಹಾಸಿಗೆಗಳನ್ನು ಮಾತ್ರ. ಈ ಕೇಂದ್ರವನ್ನು ಜುಲೈ 27ರಂದು  ಉದ್ಘಾಟಿಸಲಾಗಿತ್ತು. 1500 ಹಾಸಿಗೆಗಳನ್ನು ಕೋವಿಡ್‌ ಸಂತ್ರಸ್ತರಿಗೆ ಹಾಗೂ 1,500 ಹಾಸಿಗೆಗಳನ್ನು ವೈದ್ಯರು ಮತ್ತು ಶೂಶ್ರೂಷಕರ ಪ್ರತ್ಯೇಕ ವಾಸಕ್ಕಾಗಿ ಕಾಯ್ದಿರಿಸಲಾಗಿತ್ತು. ಇತ್ತೀಚೆಗೆ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಆಸಕ್ತಿ ತೋರಿಸುತ್ತಿರುವುದರಿಂದ ಈ ಕೇಂದ್ರದ ಹಾಸಿಗೆಗಳು ಒಮ್ಮೆಯೂ ಭರ್ತಿ ಆಗಿರಲಿಲ್ಲ.

ಈ ಆರೈಕೆ ಕೇಂದ್ರವು ದೇಶದ ಅತಿ ದೊಡ್ಡ ಆರೈಕೆ ಕೇಂದ್ರ ಎಂಬ ಕಾರಣಕ್ಕೆ ಸುದ್ದಿಯಾಗಿದ್ದಕ್ಕಿಂತಲೂ ದುಬಾರಿ ವೆಚ್ಚದ ಕಾರಣಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಇಲ್ಲಿ ಅಳವಡಿಸುವ ಮಂಚ ಹಾಗೂ ಇತರ ಪರಿಕರಗಳಿಗೆ ದಿನಕ್ಕೆ ₹ 800 ಬಾಡಿಗೆ ನೀಡುವ ಪ್ರಸ್ತಾಪಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಈ ಪ್ರಸ್ತಾವ ಕೈಬಿಟ್ಟ ಸರ್ಕಾರ ಮಂಚ, ಹಾಸಿಗೆ ಸೇರಿದಂತೆ ಕೆಲವು ಪರಿಕರಗಳನ್ನು ಖರೀದಿಸಿ, ಕೆಲವನ್ನಷ್ಟೇ ಬಾಡಿಗೆಗೆ ಪಡೆಯಿತು.

‘ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರವನ್ನು ಮಂಗಳವಾರರಿಂದ ಸ್ಥಗಿತಗೊಳಿಸಿದ್ದೇವೆ. ಇಲ್ಲಿ ಈಗ ಕೋವಿಡ್‌ ಸಂತ್ರಸ್ತರು ಯಾರೂ ಆರೈಕೆಗೆ ಒಳಗಾಗುತ್ತಿಲ್ಲ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಸಮೀಪದ ಇತರ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಕೇಂದ್ರದ ಉಕ್ಕಿನ ಮಂಚಗಳು, ಹಾಸಿಗೆಗಳು, ಫ್ಯಾನ್‌ಗಳು ಕಸದ ಬುಟ್ಟಿಗಳು, ಬಕೆಟ್‌ಗಳು, ಮಗ್‌ಗಳು, ನೀರು ಪೂರೈಸುವ ಪರಿಕರಗಳು ಹಾಗೂ ಇತರ ಪೀಠೋಪಕರಣಗಳನ್ನು ಸರ್ಕಾರಿ ಹಾಸ್ಟೆಲ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಉಚಿತವಾಗಿ ನೀಡುತ್ತಿದೆ.  

ಬಾಗಲ ಕೋಟೆಯಲ್ಲಿರುವ ತೋಟಗಾರಿಕಾ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಹಾಗೂ ಜಿಕೆವಿಕೆಯ ಹಾಸ್ಟೆಲ್‌ಗೆ ತಲಾ 1 ಸಾವಿರ ಪೀಠೋಪಕರಣಗಳು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ 2,500 ಪೀಠೋಪಕರಣಗಳನ್ನು ಹಸ್ತಾಂತರಿಸಬೇಕು. ಉಳಿದ ಪೀಠೋಪಕರಣಗಳನ್ನು ಸರ್ಕಾರದ ಆಸ್ಪತ್ರೆಗಳಿಂದ ಹಾಗೂ ಹಾಸ್ಟೆಲ್‌ಗಳಿಂದ ಬರುವ ಕೋರಿಕೆಗಳ ಆಧಾರದಲ್ಲಿ ಹಸ್ತಾಂತರಿಸಲಾಗುತ್ತಿದೆ ಎಂದರು. 

‘ಈ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಸೋಂಕಿತರು ದಾಖಲಾಗುತ್ತಿಲ್ಲ. ಹಾಗಾಗಿ ಇದನ್ನು ಮುಚ್ಚಬಹುದು’ ಎಂದು ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯಪಡೆಯ ಮುಖ್ಯಸ್ಥರು ಇತ್ತೀಚೆಗೆ ಸಲಹೆ ನೀಡಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಆ.31ರಂದು ನಡೆದ ಸಭೆಯಲ್ಲಿ ಈ ಕೇಂದ್ರವನ್ನು ಮುಚ್ಚಲು ತೀರ್ಮಾನಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು