ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ರಕ್ಷಣೆಗೆ ಕಾನೂನಿನ ಬಲ: ಸಿಎಂ ಬೊಮ್ಮಾಯಿ ಭರವಸೆ

3 ದಶಕ ಪೂರೈಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಭಾಷೆಯ ಸಮಗ್ರ ರಕ್ಷಣೆ, ಬೆಳವಣಿಗೆಗೆ ಸಿದ್ಧಪಡಿಸಲಾಗುತ್ತಿರುವ ‘ಸಮಗ್ರ ಭಾಷಾ ಮಸೂದೆ’ಗೆ ಕಾನೂನಿನ ಬಲ ನೀಡಿ, ಸರ್ಕಾರದ ಮಟ್ಟದಲ್ಲಿ ಅನುಮೋದಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕ.ಅ.ಪ್ರಾ–3 ದಶಕ’ ಕಾರ್ಯಕ್ರಮ ಉದ್ಘಾಟಿಸಿ, ಪ್ರಾಧಿಕಾರ ಹೊರತಂದ ‘ಕನ್ನಡ ರಥ–ಕಾಯಕ ಪಥ’ ಪುಸ್ತಕ ಲೋಕಾರ್ಪಣೆ ಮಾಡಿದರು. ‘ಮನುಷ್ಯನ ಬೆಳವಣಿಗೆಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಬದುಕಿನ ಪ್ರತಿ ಆಯಾಮದಲ್ಲಿ ಕನ್ನಡ ಬಳಸಿದಾಗ ಭಾಷೆಯ ಬೆಳವಣಿಗೆ ಸಾಧ್ಯ. ಕನ್ನಡ ವನ್ನು ಉಳಿಸಿ, ಬೆಳೆಸಲು ಭಾಷೆಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರದ ವತಿ ಯಿಂದ ಮಾಡಲಾಗುತ್ತದೆ.ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಎಲ್ಲ ಮಾತೃಭಾಷೆಗಳೂ ರಾಷ್ಟ್ರ ಭಾಷೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

‘ಕನ್ನಡ ಭಾಷೆಗೆ ಆಪತ್ತಿದೆ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ. ಬೇರೆ ಭಾಷೆಗಳ ಆಕ್ರಮಣವೇ ಇದಕ್ಕೆ ಕಾರಣ. ನಾವು ಇನ್ನೊಬ್ಬರನ್ನು ಸಿಟ್ಟಿನಿಂದ ಬೈಯುವಾಗಲೂ ಅತಿ ಸಹಿಷ್ಣುತೆಯ ಸಂಸ್ಕೃತಿ ಪ್ರದರ್ಶಿಸುತ್ತೇವೆ. ಬೇರೆ ಭಾಷಿಕರಲ್ಲಿ ಈ ಸಂಸ್ಕೃತಿಯಿಲ್ಲ. ಇಲ್ಲಿ ಉತ್ತರ ಭಾರತದ ಬಹಳಷ್ಟು ಮಂದಿ ನೆಲೆಸಿದ್ದಾರೆ. ಅವರ ಜತೆಗೆ ಕನ್ನಡದಲ್ಲಿ ಸಂವಾದ ಮಾಡಬೇಕು. ಕನ್ನಡವು ನಿತ್ಯ ನಿರಂತರ ಜಾಗೃತ ಆಗಿರಬೇಕು. ಕನ್ನಡದ ಸಾಹಿತ್ಯ ಭಂಡಾರವನ್ನು ಸರಿಯಾದ ರೀತಿ ಬಳಸಬೇಕು’ ಎಂದರು.

ಸಂಕುಚಿತಗೊಳಿಸುವ ಪ್ರಯತ್ನ: ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಕನ್ನಡವು ಶಕ್ತಿಶಾಲಿಯಾಗಲು ಭಾಷೆ ಯನ್ನು ಅನೇಕ ಆಯಾಮಗಳಲ್ಲಿ ಬಳಸಬೇಕು. ಕಂಪ್ಯೂಟರ್ ಶಿಕ್ಷಣ, ಎಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧೆಡೆ ಕನ್ನಡ ಬಳಕೆಗೆ ಅವಕಾಶಗಳಿದ್ದರೂ ಇಂಗ್ಲಿಷ್ ಅನಿ ವಾರ್ಯ ಎಂದು ಸೃಷ್ಟಿ ಮಾಡಲಾ ಯಿತು. ಈ ಮೂಲಕ ನಮ್ಮ ಭಾಷೆಯನ್ನು ಸಂಕುಚಿತ ಗೊಳಿಸಲಾಯಿತು. ಭಾಷೆ ಬೆಳವಣಿಗೆಗೆ ನಮ್ಮ ಪುಸ್ತಕಗಳನ್ನು ಅನ್ಯ ಭಾಷೆಗಳಿಗೆ ಅನುವಾದ ಮಾಡಬೇಕು. ಈ ಮೂಲಕ ಇಲ್ಲಿನ ಶ್ರೇಷ್ಠ ಸಾಹಿತ್ಯವನ್ನು ಅನ್ಯ ಭಾಷಿಕರಿಗೆ ಪರಿಚಯಿಸಬೇಕು. ಭಾಷೆ ಉಳಿಸಲು ಆಂದೋಲನ ನಡೆಸಬೇಕು’ ಎಂದು ಹೇಳಿದರು.

ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘ಸಮಗ್ರ ಭಾಷಾ ಮಸೂದೆಗೆ ಸಂಬಂಧಿಸಿದಂತೆ ನ್ಯಾ. ಬನ್ನೂರುಮಠ ಅವರು ಅಂತಿಮ ಕರಡು ಸಿದ್ಧಪಡಿಸುತ್ತಿದ್ದಾರೆ. ಶೀಘ್ರವೇ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕನ್ನಡ ಕಟ್ಟುವುದು ಒಬ್ಬ ವ್ಯಕ್ತಿ ಅಥವಾ ಸರ್ಕಾರದ ಕೆಲಸವಲ್ಲ. ಇದು ಇಡೀ ಸಮಾಜದ ಕಾರ್ಯವಾಗಿದೆ. ಪ್ರಾಧಿಕಾರವು ಮೂರು ದಶಕಗಳನ್ನು ಕ್ರಮಿಸಿದೆ. ಮುಂದಿನ ದಿನಗಳಲ್ಲಿ ಕನ್ನಡ ಕಟ್ಟುವ ಬಗ್ಗೆ ಹಲವು ಕಾರ್ಯಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT