ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ಬಯೋಕಾನ್‌ ಪಾಲು

Last Updated 14 ಜುಲೈ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಆರ್‌.ವಿ.ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿನ ಹೆಬ್ಬಗೋಡಿ ನಿಲ್ದಾಣ ನಿರ್ಮಾಣಕ್ಕೆ ಬಯೋಕಾನ್‌ ಸಂಸ್ಥೆ ನೆರವು ನೀಡಲಿದೆ.

ಸಂಸ್ಥೆಯ ಪ್ರಧಾನ ಕಚೇರಿಯ ಸಮೀಪದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದ್ದು, ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೆರವು ನೀಡಲು ಯೋಜಿಸಿದೆ. ‘ಈ ನಿಲ್ದಾಣವನ್ನು ದತ್ತು ‍ಪಡೆಯಲಿದ್ದೇವೆ’ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂಮ್‌ದಾರ್‌ ಷಾ ತಿಳಿಸಿದರು. ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ವೈಟ್‌ಫೀಲ್ಡ್‌ ಭಾಗದಲ್ಲಿ ಮೆಟ್ರೊ ಕಾಮಗಾರಿ ವೇಗವಾಗಿ ಸಾಗುತ್ತಿದೆ. ನಗರದಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳು ಆರಂಭವಾಗಿದ್ದು, ಮೂರು ತಿಂಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುವ ವಿಶ್ವಾಸ ಇದೆ. ಕಸದ ಸಮಸ್ಯೆ ಹಾಗೂ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುವಂತೆ ಕೋರಿದ್ದೇವೆ’ ಎಂದರು.

ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೊ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನ ₹200 ಕೋಟಿ ದೇಣಿಗೆ ನೀಡಲಿದೆ. ಈ ಸಂಬಂಧ ಇದೇ 19ರಂದು ಸಂಸ್ಥೆ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ ಒಪ್ಪಂದ ಮಾಡಿಕೊಳ್ಳಲಿವೆ. ಕಾಡುಬೀಸನಹಳ್ಳಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ₹100 ಕೋಟಿ ನೀಡುವ ಸಂಬಂಧ ಎಂಬೆಸಿ ಟೆಕ್‌ ವಿಲೇಜ್‌ ನಿಗಮದ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಹೊರವರ್ತುಲ ರಸ್ತೆಯಲ್ಲಿ ನಿಲ್ದಾಣಗಳ ನಿರ್ಮಾಣಕ್ಕೆ ಪ್ರೆಸ್ಟೀಜ್‌ ಸಮೂಹ ಹಾಗೂ ಇಂಟೆಲ್‌ ಜತೆಗೆ ಒಪ್ಪಂದ ಮಾಡಿಕೊಡಲು ನಿಗಮ ಯೋಜಿಸಿದೆ.

ಕಾಲಮಿತಿಯಲ್ಲಿ ಯೋಜನೆ ಜಾರಿಗೆ ಸೂಚನೆ: ನಗರ ಅಭಿವೃದ್ಧಿಗಾಗಿ ಜಾರಿಗೊಳಿಸುತ್ತಿರುವ ಯೋಜನೆ, ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು ನಗರ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ, ರಸ್ತೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಮೆಟ್ರೊ ಕಾಮಗಾರಿ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.

ಉಪಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದು ಅವರು ಹೇಳಿದರು.

‘ಮಕ್ಕಳ ಸುರಕ್ಷತೆಗೆ ಆದ್ಯತೆ’

‘ಮಕ್ಕಳ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ಅತ್ಯಂತ ಸೂಕ್ಷ್ಮ ವಿಷಯಗಳಾಗಿದ್ದು, ರಾಜ್ಯ ಸರ್ಕಾರ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧ ಎಂದು ಸತ್ಯಾರ್ಥಿ ತಿಳಿಸಿದರು. ಮಕ್ಕಳ ಹಕ್ಕುಗಳು, ಸುರಕ್ಷತೆ ಕುರಿತು ನೀತಿ ರೂಪಿಸುವ ಮೂಲಕ ರಾಜಕೀಯಕ್ಕೆ ಮಾನವೀಯ ಮುಖ ನೀಡಲು ಸಾಧ್ಯ ಎಂದು ಸತ್ಯಾರ್ಥಿ ಅಭಿಪ್ರಾಯಪಟ್ಟರು.

ಮಕ್ಕಳ ಸುರಕ್ಷತೆಗೆ ಆದ್ಯತೆ, ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳನ್ನು ಬಲಪಡಿಸುವುದು ಹಾಗೂ ಮಕ್ಕಳ ಸುರಕ್ಷತೆ ಕುರಿತು ಕಾರ್ಯಪಡೆ ರಚಿಸುವ ಕುರಿತು ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT