ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್: ಹಣ ವರ್ಗಾವಣೆಗೆ ‘ಹವಾಲಾ’!

ತೆರೆಮರೆಯಲ್ಲಿ ಚುರುಕಿನ ತನಿಖೆ l ‘ಬಿಟಿಸಿ’ ನುಂಗಿದವರಿಗೆ ನೋಟಿಸ್ ಸಾಧ್ಯತೆ
Last Updated 7 ನವೆಂಬರ್ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ (ಬಿಟಿಸಿ) ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ‘ಹವಾಲಾ’ ದಂಧೆ ಮಾರ್ಗವನ್ನು ಅನುಸರಿಸಿದ್ದ ಸಂಗತಿ ಹೊರಬಿದ್ದಿದ್ದು, ಇದರಲ್ಲಿ ಅಧಿಕಾರಸ್ಥ ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿವೆ.

ಅಂತರರಾಷ್ಟ್ರೀಯ ಹ್ಯಾಕರ್ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧನವಾದ ದಿನದಿಂದಲೇ ರಾಜ್ಯದಲ್ಲಿ ‘ಬಿಟ್ ಕಾಯಿನ್’ ಸದ್ದು ಕೇಳಿಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮೌಲ್ಯ ಹೊಂದಿರುವ ‘ಬಿಟ್ ಕಾಯಿನ್ (ಬಿಟಿಸಿ)’ ರೂಪವನ್ನು ಡಾಲರ್‌ ಹಾಗೂ ರೂಪಾಯಿ ಆಗಿ ಪರಿವರ್ತಿಸಲು ಬಹುತೇಕರು, ಹವಾಲಾ ದಂಧೆಕೋರರ ನೆರವು ಪಡೆದಿದ್ದ ಅಂಶಗಳು ಪತ್ತೆಯಾಗಿವೆ.

‘ಶ್ರೀಕೃಷ್ಣನ ಮೂಲಕ ಬಿಟ್ ಕಾಯಿನ್‌ಗಳ ಬಗ್ಗೆ ತಿಳಿದ ಅಧಿಕಾರಸ್ಥ ಪ್ರಭಾವಿಗಳು, ಆತನ ಮೂಲಕವೇ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಇದರಲ್ಲಿ ರಾಜಕಾರಣಿಗಳ ಹಾಗೂ ಪ್ರಭಾವಿಗಳ ಹೆಸರು ಕೇಳಿಬರುತ್ತಿವೆ. ಇದೇ ಕಾರಣಕ್ಕೆ, ವಿದೇಶದ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು, ಬಿಟ್ ಕಾಯಿನ್ ಹಗರಣದ ಹಿಂದೆ ಬಿದ್ದಿವೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಇಲಾಖೆಯ ಗುಪ್ತದಳದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ಪಡೆದಿದ್ದ ಪ್ರಭಾವಿಗಳು, ಅವುಗಳನ್ನು ಮಾರಾಟ ಮಾಡಿಸಿ ಹವಾಲಾ ಏಜೆಂಟರ ಮೂಲಕ ಹಣ ವರ್ಗಾಯಿಸಿಕೊಂಡಿರುವ ಮಾಹಿತಿ ಹೆಚ್ಚು ಹರಿದಾಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುವ ಕೆಲಸವೂ ತೆರೆಮರೆಯಲ್ಲಿ ನಡೆದಿದೆ’ ಎಂದೂ ಹೇಳಿದರು.

‘ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ದೊಡ್ಡವರ ಹೆಸರುಗಳು ಮುಂಚೂಣಿಯಲ್ಲಿವೆ. ಹೀಗಾಗಿಯೇ, ತನಿಖಾ ಸಂಸ್ಥೆಗಳು ಗುಪ್ತವಾಗಿ ತನಿಖೆ ಮುಂದುವರಿಸಿವೆ. ಯಾವಾಗ? ಯಾರನ್ನು? ಹೇಗೆ? ವಿಚಾರಣೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನೆಲ್ಲ ಗೌಪ್ಯವಾಗಿರಿಸಲಾಗಿದೆ’ ಎಂದೂ ತಿಳಿಸಿದರು.

ಎಚ್ಚೆತ್ತಿದ್ದ ಇ.ಡಿ ಅಧಿಕಾರಿಗಳು: ‘ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಸದ್ದು ಮಾಡುತ್ತಿದ್ದಂತೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಹ ಎಚ್ಚೆತ್ತುಕೊಂಡಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹಲವು ಮಾಹಿತಿಯನ್ನೂ ಸಂಗ್ರಹಿಸಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಹವಾಲಾ ದಂಧೆಕೋರರರ ಮೇಲೆ ಇ.ಡಿ ಹೆಚ್ಚಿನ ನಿಗಾ ವಹಿಸಿರುತ್ತದೆ. ಬಿಟ್ ಕಾಯಿನ್ ಹಗರಣದಲ್ಲೂ ಅಕ್ರಮ ಹಣ ವರ್ಗಾವಣೆ ಬಗ್ಗೆ ಈಗಾಗಲೇ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿರುವ ಮಾಹಿತಿಯೂ ಇದೆ’ ಎಂದೂ ತಿಳಿಸಿದರು.

‘2020 ರ ಡಿಸೆಂಬರ್ 1ರಂದು ಸಿಸಿಬಿ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಇ.ಡಿ ಉಪ ನಿರ್ದೇಶಕ ಎ. ಸಾದಿಕ್ ಮೊಹಮ್ಮದ್ ನೈನಾರ್, ಶ್ರೀಕೃಷ್ಣ ಹಾಗೂ ಆತನ ಕೃತ್ಯದ ಬಗ್ಗೆ ಮಾಹಿತಿ ಕೇಳಿದ್ದರು. ಆಗಲೇ ಸಿಸಿಬಿ ಪೊಲೀಸರು, ಇ.ಡಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಹಂಚಿಕೊಂಡ ಮಾಹಿತಿ ಬಗ್ಗೆಯೇ ಇದೀಗ ಅನುಮಾನ ಶುರುವಾಗಿದೆ’ ಎಂದೂ ತಿಳಿಸಿದರು.

ನೋಟಿಸ್‌ ಸಾಧ್ಯತೆ: ‘ಬಿಟ್ ಕಾಯಿನ್ ಪರಿಣಿತ ಶ್ರೀಕೃಷ್ಣ ಹಾಗೂ ಹಲವರನ್ನು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿರುವ ಮಾಹಿತಿ ಸಿಕ್ಕಿದೆ. ಹೇಳಿಕೆ ಹಾಗೂ ಪುರಾವೆಗಳನ್ನು ತನಿಖಾ ಸಂಸ್ಥೆಗಳು, ಪರಿಶೀಲಿಸುತ್ತಿವೆ’ ಎಂದೂ ಅಧಿಕಾರಿ ಹೇಳಿದರು.

‘ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ಯಾರೊಬ್ಬರಿಗೂ ಇದುವರೆಗೂ ನೋಟಿಸ್ ನೀಡಿಲ್ಲ. ಹೀಗಾಗಿ, ಆರೋಪಿಗಳು ಯಾರು ಎಂಬುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ವಿದೇಶದ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಸಹ ಗುಟ್ಟು ಬಿಟ್ಟು ಕೊಡುತ್ತಿಲ್ಲ’ ಎಂದೂ ಅಧಿಕಾರಿ ತಿಳಿಸಿದರು.

ಏನಿದು ಹವಾಲಾ?

ಇತ್ತೀಚಿನ ದಿನಗಳಲ್ಲಿ ‘ಹವಾಲಾ’ ಹೆಚ್ಚು ಚರ್ಚೆಯಾಗುತ್ತಿದೆ. ‘ನಂಬಿಕೆ’ ಮೇಲೆ ಹಣವನ್ನು ಹಲವು ಕೈಗಳ ಮೂಲಕ ವರ್ಗಾವಣೆ ಹಾಗೂ ಸಂದಾಯ ಮಾಡುವುದೇ ಹವಾಲಾ. ತೆರಿಗೆ ವಂಚಕರು ಹೆಚ್ಚಾಗಿ ಈ ದಂಧೆಯಲ್ಲಿ ಸಕ್ರಿಯವಾಗಿರುತ್ತಾರೆ.

‘ಹವಾಲಾ’ದಲ್ಲಿ ಹಣವನ್ನು ಭೌತಿಕವಾಗಿ ವರ್ಗಾವಣೆ ಮಾಡುವುದಿಲ್ಲ. ವ್ಯಕ್ತಿಯೊಬ್ಬನ ಹಣ ನೇರವಾಗಿ ಮತ್ತೊಬ್ಬನಿಗೆ ತಲುಪುವುದಿಲ್ಲ. ಸಂಪರ್ಕ ಜಾಲಗಳ ಮೂಲಕ ಹಣ ವರ್ಗಾವಣೆ ಹಾಗೂ ಸಂದಾಯವಾಗುತ್ತವೆ. ಒಬ್ಬ ವ್ಯಕ್ತಿಯು ತೆರಿಗೆ ಪಾವತಿಸದೇ ಹಾಗೂ ಯಾವುದೇ ದಾಖಲೆಗಳಿಲ್ಲದೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಏಜೆಂಟರ ಮೂಲಕ ಹಣ ವಿನಿಮಯ ಮಾಡಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಏಜೆಂಟರೇ ಹವಾಲಾ ದಂಧೆ ಬೆನ್ನೆಲುಬು. ಅವರಿಗೂ ಕಮಿಷನ್ ಸಹ ಕೊಡಬೇಕಾಗುತ್ತದೆ. ಸಂಕೇತಾಕ್ಷರಗಳು, ಸಂಜ್ಞೆಗಳು ಹಾಗೂ ಹರಿದ ನೋಟುಗಳನ್ನು ದಂಧೆಯ ಸಂವಹನಕ್ಕಾಗಿ ಬಳಸಲಾಗುತ್ತದೆ. ಈ ಕೃತ್ಯ ಆರ್ಥಿಕ ಅಪರಾಧವಾಗಿದ್ದು, ತನಿಖಾ ಸಂಸ್ಥೆಗಳ ನಿಗಾ ಇದ್ದೇ ಇರುತ್ತದೆ’ ಎಂದೂ ತಿಳಿಸಿದರು.

‘ಬಿಟ್ ಕಾಯಿನ್‌ಗಳನ್ನು ಹಣ ವಿನಿಮಯ ಏಜೆನ್ಸಿಗಳ ಮೂಲಕ ಮಾರಾಟ ಹಾಗೂ ಖರೀದಿ ಮಾಡಲಾಗುತ್ತದೆ. ಇದರಿಂದ ಬಂದ ಹಣವೇ ಹವಾಲಾ ಮೂಲಕ ವರ್ಗಾವಣೆ ಆಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT