ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA | ಬಿಜೆಪಿ–ಜೆಡಿಎಸ್‌ ಪಾದಯಾತ್ರೆ: ಮೈಸೂರು ರಸ್ತೆಯಲ್ಲಿ ದಟ್ಟಣೆ ಸಾಧ್ಯತೆ

ತುರ್ತು ಕೆಲಸಕ್ಕೆ ತೆರಳುವವರು ಪರ್ಯಾಯ ಮಾರ್ಗ ಬಳಸಲು ಮನವಿ
Published 2 ಆಗಸ್ಟ್ 2024, 23:34 IST
Last Updated 2 ಆಗಸ್ಟ್ 2024, 23:34 IST
ಅಕ್ಷರ ಗಾತ್ರ

ಬೆಂಗಳೂರು: ಮುಡಾ ನಿವೇಶನ ಹಗರಣ ಖಂಡಿಸಿ ಬಿಜೆಪಿ–ಜೆಡಿಎಸ್‌ ಜಂಟಿಯಾಗಿ ಶನಿವಾರದಿಂದ ಆರಂಭಿಸಲಿರುವ ‍ಪಾದಯಾತ್ರೆಯಿಂದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಪಾದಯಾತ್ರೆ ಆರಂಭವಾಗುವ ಸ್ಥಳದಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗುವ ಸಂಭವವಿದೆ.

ಕೆಂಗೇರಿಯ ನೈಸ್‌ ರಸ್ತೆಯ ಕೆಂಪಮ್ಮ ದೇವಸ್ಥಾನ ಬಳಿ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಅಲ್ಲಿಗೆ ಬೆಂಗಳೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಮತ್ತು ಜೆಡಿಎಸ್‌ ‍ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಬಸ್‌, ಕಾರುಗಳಲ್ಲಿ ಬರಲಿದ್ದಾರೆ. ದೇವಸ್ಥಾನ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಆಗಲಿದೆ.

ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣದ ಕಡೆಗೆ ಬೆಳಿಗ್ಗೆ ತೆರಳುವವರು ಹಾಗೂ ಬೆಂಗಳೂರು ನಗರಕ್ಕೆ ವಾಪಸ್‌ ಬರುವ ಪ್ರಯಾಣಿಕರು ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ. ತುರ್ತು ಕೆಲಸಕ್ಕೆ ತೆರಳುವವರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸ್‌ ವಿಭಾಗದ ಮೂವರು ಇನ್‌ಸ್ಪೆಕ್ಟರ್ ಹಾಗೂ 50 ಸಿಬ್ಬಂದಿ ನಿಯೋಜಿಸಲಾಗಿದೆ. ಬೆಳಿಗ್ಗೆ 8ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯುವ ನಿರೀಕ್ಷೆಯಿದ್ದು, ಅದಕ್ಕೂ ಮೊದಲು ಸ್ಥಳದಲ್ಲಿ ಇರುವಂತೆ ಎಲ್ಲ ಸಿಬ್ಬಂದಿಗೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಸಿಬ್ಬಂದಿ ನಿಯೋಜನೆ:

ಪಾದಯಾತ್ರೆಗೆ ಅನುಮತಿ ನೀಡಿಲ್ಲ. ಆದರೂ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪಾದಯಾತ್ರೆ ತೆರಳುವ ಮಾರ್ಗದುದ್ದಕ್ಕೂ ಆಯಾ ವ್ಯಾಪ್ತಿಯ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಲಿದ್ದಾರೆ ಎಂದು ಪೊಲೀಸರು ಹೇಳಿದರು.

‘ನಗರ ವ್ಯಾಪ್ತಿಯಲ್ಲಿ ಅನುಮತಿ ಇಲ್ಲ’

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ರ್‍ಯಾಲಿ ಹಾಗೂ ಪಾದಯಾತ್ರೆಗೆ ಅವಕಾಶ ಇಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಸ್ಪಷ್ಟಪಡಿಸಿದರು.

ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆಗೆ ಆಗ್ರಹಿಸಿ ಬಿಜೆಪಿ–ಜೆಡಿಎಸ್‌ ಜಂಟಿಯಾಗಿ ಶನಿವಾರ ಮೈಸೂರಿಗೆ ಪಾದಯಾತ್ರೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಇದುವರೆಗೂ ಯಾರೂ ಅನುಮತಿ ಕೇಳಿಲ್ಲ. ಅನುಮತಿ ಕೇಳಿದರೂ ಹೈಕೋರ್ಟ್‌ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ಆದರೂ ಪೊಲೀಸ್‌ ಇಲಾಖೆ ಪೂರಕವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT