ಭಾನುವಾರ, ಜೂನ್ 26, 2022
28 °C

ಬೆಂಗಳೂರು: ವಿಮಾನ ನಿಲ್ದಾಣ ಬಳಿ ಸ್ಫೋಟ, ಆರು ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕೆಲಸಗಾರರು ಗಾಯಗೊಂಡಿದ್ದಾರೆ.

‘ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್‌ಕುಮಾರ್ ಹಾಗೂ ನಾಗೇಶ್ ರಾವ್ ಗಾಯಗೊಂಡವರು. ಸಿರಾಜ್ ಹಾಗೂ ಅವಿನಾಶ್ ಅವರ ದೇಹದ ಶೇ 40ರಷ್ಟು ಭಾಗ ಸುಟ್ಟಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಲ್ದಾಣದ ವಿಸ್ತರಣೆ ಹಾಗೂ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ, ನಿಲ್ದಾಣ ವ್ಯಾಪ್ತಿಯ ಜಾಗದಲ್ಲಿ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು. ಕೆಳ ಸೇತುವೆಯಲ್ಲೇ ಬಣ್ಣ, ರಾಸಾಯನಿಕ ಡಬ್ಬಿ ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು.’

‘ಭಾನುವಾರ ಕೆಲಸಕ್ಕೆ ಹಾಜರಾಗಿದ್ದ ಕೆಲಸಗಾರರು, ಕೆಳ ಸೇತುವೆಯಲ್ಲಿ ಸೇರಿದ್ದರು. ರಸ್ತೆಗೆ ಬಳಿಯಬೇಕಾದ ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಕೆಳ ಸೇತುವೆ ಆವರಿಸಿತ್ತು’ ಎಂದು ಮೂಲಗಳು ಹೇಳಿವೆ.

‘ಬೆಂಕಿ ಹಾಗೂ ಕೆಲಸಗಾರರ ಚೀರಾಟ ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದರು. ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಎರಡನೇ ಟರ್ಮಿನಲ್ ಕಾಮಗಾರಿ ಆರಂಭವಾಗಿ 3–4 ವರ್ಷವಾಗಿದ್ದು, ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿಲ್ದಾಣದ ಆಡಳಿತ ಮಂಡಳಿ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು