ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಶಿಬಿರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ನೀತಿ ಸಂಹಿತೆ, ಶಾಲಾ–ಕಾಲೇಜುಗಳಿಗೆ ರಜೆಯಿಂದಾಗಿ ರಕ್ತ ಸಂಗ್ರಹಕ್ಕೆ ಹಿನ್ನಡೆ
Published 18 ಏಪ್ರಿಲ್ 2024, 20:10 IST
Last Updated 18 ಏಪ್ರಿಲ್ 2024, 20:10 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ಕಾವು, ಬೇಸಿಗೆಯ ತಾಪ ರಕ್ತದಾನ ಶಿಬಿರಗಳಿಗೂ ತಾಕಿದೆ. ಇದರಿಂದಾಗಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದೆ. 

ಏಪ್ರಿಲ್–ಮೇ ತಿಂಗಳಲ್ಲಿ ಶಾಲಾ–ಕಾಲೇಜುಗಳು ರಜೆ ಇರುವುದರಿಂದ ಪ್ರತಿ ವರ್ಷ ಸಾಮಾನ್ಯವಾಗಿ ಈ ಅವಧಿಯಲ್ಲಿ ರಕ್ತದಾನ ಶಿಬಿರಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿ, ರಕ್ತದ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು. ಈ ಬಾರಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಿಂದಾಗಿ ರಾಜಕಾರಣಿಗಳು ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಜನ್ಮದಿನ ಹಾಗೂ ವಿವಿಧ ಸಂದರ್ಭದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುತ್ತಿಲ್ಲ. ಸಂಘ–ಸಂಸ್ಥೆಗಳೂ ರಕ್ತದಾನ ಶಿಬಿರಗಳನ್ನು ನಡೆಸಲು ನಿರಾಸಕ್ತಿ ತೋರಿವೆ. ಇದರಿಂದಾಗಿ ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಶೇ 50ರಷ್ಟು ವ್ಯತ್ಯಾಸ ಉಂಟಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರಕ್ತದ ಕೊರತೆ ಸಮಸ್ಯೆ ಇನ್ನಷ್ಟು ಗಂಭೀರ ಪಡೆಯುವ ಸಾಧ್ಯತೆಯಿದೆ ಎಂದು ರಕ್ತನಿಧಿ ಕೇಂದ್ರದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷವೂ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಸಮಯದಲ್ಲೂ ರಕ್ತದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. 2020 ಮತ್ತು 2021ರಲ್ಲಿ ಕೋವಿಡ್ ಕಾರಣ ರಕ್ತದಾನ ಶಿಬಿರಗಳು ಅಷ್ಟಾಗಿ ನಡೆದಿರಲಿಲ್ಲ. ಈಗಲೂ ಕೆಲ ಕಂಪನಿಗಳ ಐಟಿ–ಬಿಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಐಟಿ–ಬಿಟಿ ಕಂಪನಿಗಳು ರಕ್ತದಾನ ಶಿಬಿರಗಳನ್ನು ನಡೆಸಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ರಕ್ತನಿಧಿ ಕೇಂದ್ರಗಳಿಂದ ಆಸ್ಪತ್ರೆಗಳಿಗೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 

ಲಭ್ಯತೆ ಆಧಾರ ಪೂರೈಕೆ: ಪ್ರಮುಖ ರಕ್ತನಿಧಿ ಸಂಸ್ಥೆಯಾದ ಭಾರತೀಯ ರೆಡ್‌ ಕ್ರಾಸ್‌ ನಗರದ ವಿವಿಧ ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡುತ್ತಿತ್ತು. ಕೆಲ ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗದಿದ್ದರಿಂದ ಆಸ್ಪತ್ರೆಗಳಿಗೆ ಲಭ್ಯತೆಯ ಆಧಾರದಲ್ಲಿ ಕೇಂದ್ರವು ಒದಗಿಸುತ್ತಿದೆ. ಪ್ರತಿ ತಿಂಗಳು 3 ಸಾವಿರ ಯೂನಿಟ್‌ ರಕ್ತವನ್ನು ಸಂಗ್ರಹಿಸುತ್ತಿದ್ದ ಸಂಸ್ಥೆ, ಎರಡು ತಿಂಗಳಿಂದ ಅರ್ಧದಷ್ಟು ರಕ್ತವನ್ನು ಮಾತ್ರ ಸಂಗ್ರಹಿಸುತ್ತಿದೆ. 

‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಕ್ತದಾನ ಶಿಬಿರಗಳು ಅಷ್ಟಾಗಿ ನಡೆಯುತ್ತಿಲ್ಲ. ಪೂರ್ವ ನಿಗದಿಯಾದ ಶಿಬಿರಗಳನ್ನೂ ಆಯೋಜಕರೇ ರದ್ದು ಮಾಡುತ್ತಿದ್ದಾರೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಉತ್ತಮ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗಿತ್ತು. ಸದ್ಯ ಇರುವುದರಲ್ಲೇ ನಿರ್ವಹಣೆ ಮಾಡುತ್ತಿದ್ದೇವೆ. ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಯುವಜನರು ರಕ್ತದಾನದಂತಹ ಸಮಾಜಸೇವೆಗೆ ಹೆಚ್ಚಿನ ಒಲವು ತೋರಬೇಕು. ತಾವು ರಕ್ತದಾನ ಮಾಡುವುದರೊಂದಿಗೆ ಇತರರನ್ನೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯಶಾಖೆಯ ಪ್ರತಿನಿಧಿಯೊಬ್ಬರು ತಿಳಿಸಿದರು. 

‘ಸರ್ಕಾರಿ ಆಸ್ಪತ್ರೆಗಳಲ್ಲಿ ಥಲಸ್ಸೇಮಿಯಾ ರೋಗಿಗಳಿಗೆ ಉಚಿತವಾಗಿ ರಕ್ತವನ್ನು ಒದಗಿಸಲಾಗುತ್ತಿದೆ. ರಕ್ತದ ಕೊರತೆ ನೀಗಿಸಲು ಸಂಚಾರಿ ವಾಹನಗಳ ಮೂಲಕವೂ ರಕ್ತ ಸಂಗ್ರಹಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. 

ಶಾಲಾ–ಕಾಲೇಜುಗಳಿಗೆ ರಜೆ ಇರುವುದರಿಂದ ಸಹಜವಾಗಿ ರಕ್ತದಾನ ಶಿಬಿರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಜನರು ರಕ್ತದಾನದಂತಹ ಸಮಾಜಸೇವೆಗೆ ಹೆಚ್ಚಿನ ಒಲವು ತೋರಬೇಕು

-।ಎಚ್.ಎಸ್. ಬಾಲಸುಬ್ರಮಣ್ಯ ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಪ್ರಧಾನ ಕಾರ್ಯದರ್ಶಿ

ಥಲಸ್ಸೇಮಿಯಾ ರೋಗಿಗಳಿಗೆ ಸಮಸ್ಯೆ

‘ರಕ್ತ ದಾನ ಶಿಬಿರಗಳು ನಡೆಯುತ್ತಿಲ್ಲ. ರಕ್ತ ಸಂಗ್ರಹಿಸಲು ಬಹಳ ಕಷ್ಟ ಪಡುತ್ತಿದ್ದೇವೆ. ನಮ್ಮ ಸಂರಕ್ಷಾ ಥಲಸ್ಸೇಮಿಯಾ ಕೇಂದ್ರದಲ್ಲಿ 416 ಮಕ್ಕಳಿದ್ದಾರೆ. ಅವರಿಗೆ ನಿತ್ಯ 30ರಿಂದ 35 ಯೂನಿಟ್ ರಕ್ತ ಒದಗಿಸಬೇಕಾಗುತ್ತದೆ. ಕಾಯಂ ದಾನಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಅಗತ್ಯ ಪ್ರಮಾಣದ ರಕ್ತವನ್ನು ಸಂಗ್ರಹಿಸಿ ಒದಗಿಸುವುದು ಸವಾಲಾಗಿದೆ’ ಎಂದು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಅಧಿಕಾರಿ ರಾಧಾ ತಿಳಿಸಿದರು. ‘ರಕ್ತದಾನ ಶಿಬಿರಗಳು ನಡೆದರೂ ದಾನಿಗಳು ಬರುತ್ತಿಲ್ಲ. ಈ ಮೊದಲು ಪ್ರತಿನಿತ್ಯ 80ರಿಂದ 100 ಯೂನಿಟ್ ರಕ್ತವನ್ನು ಆಸ್ಪತ್ರೆಗಳಿಗೆ ಒದಗಿಸುತ್ತಿದ್ದೆವು. ಈಗ ನಮ್ಮಲ್ಲಿನ ಮಕ್ಕಳಿಗೆ ರಕ್ತ ಒದಗಿಸುವುದು ಕಷ್ಟವಾಗಿದೆ. ಆಸ್ಪತ್ರೆಗಳಿಗೆ ರಕ್ತವನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ರಕ್ತದಾನದ ಮಹತ್ವ ಅರಿತು ರಕ್ತದಾನಕ್ಕೆ ಮುಂದೆ ಬರಬೇಕು’ ಎಂದು ಹೇಳಿದರು.  ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಂಪರ್ಕ ಸಂಖ್ಯೆ: 080 26608870 ಅಥವಾ 9945299369 ಭಾರತೀಯ ರೆಡ್‌ ಕ್ರಾಸ್‌ ಕರ್ನಾಟಕ ಶಾಖೆಯ ಸಂಪರ್ಕ ಸಂಖ್ಯೆ: 080 22268435 ಅಥವಾ 9902859859

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT