ಶನಿವಾರ, ಮೇ 8, 2021
17 °C
ರೈಲು ಹಳಿ – ಪ್ಲಾಟ್‌ಫಾರಂಗಳ ನಡುವೆ ‘ಸ್ಕ್ರೀನ್‌ ಡೋರ್‌’

318 ಬೋಗಿಗಳ ಖರೀದಿ– ಸಮಾಲೋಚಕ ಸಂಸ್ಥೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆ ಅನುಷ್ಠಾನಕ್ಕೆ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿಯಿಂದ (ಜೈಕಾ) ₹3,717 ಕೋಟಿ ಸಾಲ ಪಡೆಯುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ ಮರುದಿನವೇ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸಮಾಲೋಚಕ ಸಂಸ್ಥೆ (ಜನರಲ್‌ ಕನ್ಸಲ್ಟಂಟ್‌) ನೇಮಕಕ್ಕೆ ಮುಂದಾಗಿದೆ.

ಆಯ್ಕೆಯಾದ ಸಮಾಲೋಚಕ ಸಂಸ್ಥೆಯು ಗುಲಾಬಿ ಮತ್ತು ನೀಲಿ ಮಾರ್ಗಗಳಲ್ಲಿ ಬಳಸುವ 318 ಬೋಗಿಗಳು, ಸಿಬಿಟಿಸಿ ಸಿಗ್ನಲಿಂಗ್‌ ಮತ್ತು ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ವ್ಯವಸ್ಥೆ ಕಲ್ಪಿಸುವ ಕುರಿತ ಖರೀದಿ ಪ್ರಕ್ರಿಯೆ ಮತ್ತಿತರ ಅಂಶಗಳ ಬಗ್ಗೆ ನಿಗಮಕ್ಕೆ ಸಲಹೆಗಳನ್ನು ನೀಡಲಿದೆ.

ಎರಡನೇ ಹಂತದಲ್ಲಿ ನಮ್ಮ ಮೆಟ್ರೊ ಗುಲಾಬಿ ಮಾರ್ಗದ (ನಾಗವಾರದಿಂದ ಗೊಟ್ಟಿಗೆರೆವರೆಗಿನ 22 ಕಿ.ಮೀ ಮಾರ್ಗ), ತೆಳು ನೀಲಿ ಮಾರ್ಗ (ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ 20 ಕಿ.ಮೀ. ಮಾರ್ಗ) ಮತ್ತು ಕೆ.ಆರ್. ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 38 ಕಿ.ಮೀ ಉದ್ದದ ಮಾರ್ಗ ನಿರ್ಮಾಣಕ್ಕೆ ಜೈಕಾ ಸಾಲ ನೀಡಲಿದೆ.

ಮೇ ತಿಂಗಳ ಕೊನೆಯಲ್ಲಿ ಸಮಾಲೋಚಕ ಸಂಸ್ಥೆಯ ನೇಮಕ ಪ್ರಕ್ರಿಯೆಯನ್ನು ನಿಗಮ ಅಂತಿಮಗೊಳಿಸುವ ನಿರೀಕ್ಷೆ ಇದೆ. ಕಾಳೇನ ಅಗ್ರಹಾರ–ಗೊಟ್ಟಿಗೆರೆ ಮಾರ್ಗದಲ್ಲಿ ಸಂಚರಿಸುವ ಆರು ಬೋಗಿಗಳ 16 ರೈಲುಗಳು ( ಒಟ್ಟು 96 ಬೋಗಿಗಳು) ಹಾಗೂ ಸಿಲ್ಕ್‌ ಬೋರ್ಡ್‌–ಕೆ.ಆರ್‌. ಪುರ–ವಿಮಾನ ನಿಲ್ದಾಣದಲ್ಲಿ ಮಾರ್ಗಗಳ ಆರು ಬೋಗಿಗಳ 21 ರೈಲು (126 ಬೋಗಿ) ಗಳನ್ನು ಖರೀದಿಸಲಾಗುತ್ತಿದೆ. 

ಸ್ಕ್ರೀನ್‌ ಡೋರ್‌:

ಈ ಕಾರಿಡಾರ್‌ಗಳಲ್ಲಿ ನೆಲದಡಿ ನಿಲ್ದಾಣಗಳ ಪ್ಲಾಟ್‌ಫಾರಂಗಳಿಗೆ ಸ್ಕ್ರೀನ್‌ ಡೋರ್‌ಗಳನ್ನು (ಪಿಎಸ್‌ಡಿ) ಅಳವಡಿಸಲಾಗುತ್ತದೆ. ಡೇರಿ ವೃತ್ತದಿಂದ ನಾಗವಾರದವರೆಗಿನ 12 ನೆಲದಡಿಯ ನಿಲ್ದಾಣಗಳು ಕೆ.ಆರ್. ಪುರ–ವಿಮಾನ ನಿಲ್ದಾಣ ಮಾರ್ಗದಲ್ಲಿನ ಎರಡು ನೆಲದಡಿಯ ನಿಲ್ದಾಣಗಳಲ್ಲಿ ಈ ಪಿಎಸ್‌ಡಿಗಳನ್ನು ಅಳವಡಿಸಲಾಗುವುದು ಎಂದು ನಿಗಮದ ಮೂಲಗಳು ತಿಳಿಸಿವೆ.

ರೈಲು ಹಳಿ ಮತ್ತು ಪ್ಲಾಟ್‌ಫಾರಂ ನಡುವೆ ಈ ಪಿಎಸ್‌ಡಿಗಳನ್ನು ಅಳವಡಿಸಲಾಗುತ್ತದೆ. ಪ್ರಯಾಣಿಕರು ಹಳಿಗೆ ಬಿದ್ದು ಸಂಭವಿಸುವ ಅಹಿತಕರ ಘಟನೆಗಳನ್ನು ತಡೆಯಲು ಈ ಸ್ಕ್ರೀನ್‌ ಡೋರ್‌ಗಳು ನೆರವಾಗಲಿವೆ. ರೈಲು ನಿಂತ ನಂತರವೇ ಈ ಬಾಗಿಲುಗಳು ತೆರೆದುಕೊಳ್ಳಲಿವೆ. ದೆಹಲಿ ಮತ್ತು ಚೆನ್ನೈನ ಮೆಟ್ರೊ ನಿಲ್ದಾಣಗಳಲ್ಲಿ ಪಿಎಸ್‌ಡಿಗಳನ್ನು ಈಗಾಗಲೇ ಅಳವಡಿಸಲಾಗಿದೆ.

ಸಿಬಿಟಿಸಿ:

ಚಾಲಕ ರಹಿತ ಮೆಟ್ರೊ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ರೂಪಿಸಲು ನಿಗಮ ಸಿದ್ಧತೆ ನಡೆಸಿದೆ. ಈ ಸಲುವಾಗಿ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗುತ್ತದೆ. ಈ ವ್ಯವಸ್ಥೆಯ ಅನುಷ್ಠಾನಕ್ಕೂಸಮಾಲೋಚಕ ಸಂಸ್ಥೆ ನೇಮಕ ನಡೆಯಲಿದೆ ಎಂದು ನಿಗಮದ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು