ಬುಧವಾರ, ಆಗಸ್ಟ್ 4, 2021
23 °C
ಬಿಎಂಶ್ರೀ ಪ್ರತಿಷ್ಠಾನ: ಮುಖ್ಯಮಂತ್ರಿ ಸೂಚನೆಗೂ ಕಿಮ್ಮತ್ತು ನೀಡದ ಬಿಬಿಎಂಪಿ

ಜಾಗದ ಗುತ್ತಿಗೆ ನವೀಕರಣಕ್ಕೆ ಮೀನಮೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನಕ್ಕೆ ಬಿಬಿಎಂಪಿಯಿಂದ ಮಂಜೂರಾದ ಜಾಗದ ಗುತ್ತಿಗೆ ನವೀಕರಣಕ್ಕೆ ಪದಾಧಿಕಾರಿಗಳು ಹತ್ತು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಯಶಸ್ಸು ಮಾತ್ರ ಸಿಕ್ಕಿಲ್ಲ.

ಪ್ರತಿಷ್ಠಾನಕ್ಕೆ ನೀಡಿದ ಜಾಗದ ಗುತ್ತಿಗೆ ನವೀಕರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ನಿರ್ದೇಶನ ನೀಡಿದ್ದರೂ ಪಾಲಿಕೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಪ್ರತಿಷ್ಠಾನವು ಮಾಸಿಕ ₹2.97 ಲಕ್ಷ ನೆಲ ಬಾಡಿಗೆ ಪಾವತಿಸಬೇಕು ಎಂದು ಬಿಬಿಎಂಪಿ ಪಟ್ಟು ಹಿಡಿದಿದೆ. 

ಹೊಸಗನ್ನಡ ಸಾಹಿತ್ಯದ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾಗಿದ್ದ ಬಿ.ಎಂ. ಶ್ರೀಕಂಠಯ್ಯ ಹೆಸರಿನಲ್ಲಿ ಅವರ ಶಿಷ್ಯ‌ ಪ್ರೊ.ಎಂ.ವಿ.ಸೀತಾರಾಮಯ್ಯ ಅವರು 1979ರಲ್ಲಿ ಪ್ರತಿಷ್ಠಾನ ಸ್ಥಾಪಿಸಿದ್ದರು. 1980ರ ಮೇ ತಿಂಗಳಲ್ಲಿ  ‌ಪ್ರತಿಷ್ಠಾನವನ್ನು ಕುವೆಂಪು ಅವರು ಅಧಿಕೃತವಾಗಿ ಉದ್ಘಾಟಿಸಿದ್ದರು.

ನರಸಿಂಹರಾಜ ಕಾಲೊನಿ 3ನೇ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ನೀಡಿರುವ ಗುತ್ತಿಗೆಯ ನಿವೇಶನದಲ್ಲಿ ಸಂಸದರು, ಶಾಸಕರ ಅನುದಾನದ ನೆರವಿನಿಂದ ಕಟ್ಟಡ ನಿರ್ಮಿಸಲಾಗಿದೆ. ಸುಸಜ್ಜಿತ ಗ್ರಂಥಭಂಡಾರ, ಹಸ್ತಪ್ರತಿ ಭಂಡಾರ, ತರಗತಿ ಕೊಠಡಿಗಳು ಹಾಗೂ ಸಭಾಂಗಣಗಳನ್ನು ಒಳಗೊಂಡ ಮೂರು ಮಹಡಿಗಳ ಕಟ್ಟಡ ಇದೆ. ವಿದ್ವತ್‌ ಉಪನ್ಯಾಸಗಳು, ವಿಚಾರಸಂಕಿರಣಗಳು, ಚರ್ಚೆಗಳು, ಸಂಗೀತ-ಗಮಕ ಚಟುವಟಿಕೆಗಳಿಗೆ ಪ್ರತಿಷ್ಠಾನ ಆಶ್ರಯ ಕಲ್ಪಿಸುತ್ತಿದೆ.

ಪಾಲಿಕೆ ನೀಡಿದ್ದ ನಿವೇಶನದ ಗುತ್ತಿಗೆ ಅವಧಿ 2010ಕ್ಕೆ ಮುಗಿದಿದೆ. ಪ್ರತಿಷ್ಠಾನವು 2009ರಿಂದಲೇ ಗುತ್ತಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುತ್ತಲೇ ಬಂದಿದೆ. ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ನೇತೃತ್ವದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು 2019ರ ಡಿಸೆಂಬರ್‌ನಲ್ಲಿ ಭೇಟಿ ಮಾಡಿಸಮಸ್ಯೆ ಹೇಳಿಕೊಂಡಿದ್ದರು. ಕೂಡಲೇ ಗುತ್ತಿಗೆ ನವೀಕರಣ ಮಾಡಿಕೊಡುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು.

‘ಹಿಂದಿನ ಕರಾರು ಪ್ರಕಾರ ಪ್ರತಿಷ್ಠಾನವು ಪಾಲಿಕೆಗೆ ತಿಂಗಳಿಗೆ ₹1,200 ನೆಲ ಬಾಡಿಗೆ ಪಾವತಿಸುತ್ತಿದೆ. ಎನ್‌.ಆರ್‌.ಕಾಲೊನಿಯಲ್ಲಿ ಮಾರ್ಗಸೂಚಿ ದರ ಚದರ ಅಡಿಗೆ ₹6 ಸಾವಿರ ಇದ್ದು, ಅದರ ಪ್ರಕಾರ ವರ್ಷಕ್ಕೆ ನೆಲ ಬಾಡಿಗೆ ₹30 ಲಕ್ಷ ಆಗುತ್ತದೆ ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಸಾಹಿತ್ಯ ಚಟುವಟಿಕೆ ನಡೆಸುವ ಸಂಸ್ಥೆಗೆ ವಾಣಿಜ್ಯ ಕಟ್ಟಡಗಳಂತೆ ದರ ನಿಗದಿ ಮಾಡಿದರೆ ಏನು ಮಾಡಬೇಕು’ ಎಂಬುದು ಪ್ರತಿಷ್ಠಾನದ ಪ್ರಶ್ನೆ.

‘2009ರಿಂದ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ನವೀಕರಣಗೊಂಡಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೆವು. ಅವರು ಸೂಚನೆ ನೀಡಿ ಏಳು ತಿಂಗಳು ಕಳೆದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್‌. ಲಕ್ಷ್ಮೀನಾರಾಯಣ ಬೇಸರ ವ್ಯಕ್ತಪಡಿಸಿದರು.

ಪರಿಶೀಲನೆ ನಡೆಸುವೆ: ಜಂಟಿ ಆಯುಕ್ತ

‘ಬಿಬಿಎಂಪಿ ಆದಾಯ ಸೋರಿಕೆ ಆಗಬಾರದು ಎಂಬ ಕಾರಣಕ್ಕೆ ಮಾರುಕಟ್ಟೆ ದರ ನಿಗದಿ ಮಾಡಿರಬಹುದು. ಈ ವಿಷಯದಲ್ಲಿ ಪಾಲಿಕೆ ಆಡಳಿತ ನಿರ್ಧಾರ ತೆಗೆದುಕೊಳ್ಳಲಿದೆ. ಗುತ್ತಿಗೆ ಅವಧಿ ನವೀಕರಣದ ಅರ್ಜಿ ವಿಲೇವಾರಿ ಬಾಕಿ ಇರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ’ ಎಂದು ಪಾಲಿಕೆಯ ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.