ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮ ಕಥನಕ್ಕೆ ನೆನಪಿನ ನಿಧಿ ಬೇಕು’

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಮತ
Last Updated 1 ಮೇ 2022, 18:35 IST
ಅಕ್ಷರ ಗಾತ್ರ

ಬೆಂಗಳೂರು: ‘ಆತ್ಮಕಥನಕ್ಕೆ ನೆನಪಿನ ನಿಧಿ ಬೇಕು. ಆ ನಿಧಿಯನ್ನು ಎಷ್ಟರ ಮಟ್ಟಿಗೆ ಸಂಯೋಜಿಸಿ ಕೃತಿಯಾಗಿ ರೂಪಿಸುತ್ತೇವೆ ಎಂಬುದು ತುಂಬಾ ಮುಖ್ಯ’ ಎಂದುಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.‌

ಬಿ.ಎಂ.ಶ್ರೀ.ಪ್ರತಿಷ್ಠಾನ ಹಾಗೂ ಎಂ.ವಿ.ಸೀ.ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಥೆಗಾರ ಕೆ.ಸತ್ಯನಾರಾಯಣ ಅವರಿಗೆ ‘ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿ’ ಹಾಗೂ ವಿಮರ್ಶಕಿ ಶಾಂತಾ ಇಮ್ರಾಪುರ ಅವರಿಗೆ ‘ಡಾ.ವಿಜಯಾ ಸುಬ್ಬರಾಜ್‌ ಗಣ್ಯಲೇಖಕಿ’ ಪ್ರಶಸ್ತಿ ಪ್ರದಾನ ಮಾಡಿ ಭಾನುವಾರ ಮಾತನಾಡಿದರು.

‘ಆತ್ಮಕಥನವುಕಥೆ, ಕಾದಂಬರಿ, ನಾಟಕಗಳಿಗಿಂತಲೂ ಭಿನ್ನವಾದ ಪ್ರಕಾರ. ಇದನ್ನು ಶುರುಮಾಡುವ ವಿಧಾನವೇ ಬೇರೆಯದ್ದಾಗಿರುತ್ತದೆ. ಇದನ್ನು ಸಾಹಿತ್ಯದ, ವಿಮರ್ಶೆಯ ಪರಿಧಿಯೊಳಗೆ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೋ ಬೇಡವೊ ಎಂಬ ಯೋಚನೆ ಇದೆ. ಆತ್ಮಕಥನಗಳಲ್ಲಿನ ಸಾಮಾನ್ಯ ಅಂಶವನ್ನು ಶೋಧಿಸಿ, ಅದನ್ನು ಹೇಗೆ ಆರಂಭಿಸುತ್ತಾರೆ, ಏತಕ್ಕಾಗಿ ಬರೆಯುತ್ತಾರೆ ಎಂಬುದನ್ನು ಸೂತ್ರೀಕರಿಸಿ ಅದಕ್ಕೆ ತಾತ್ವಿಕ ಚೌಕಟ್ಟು ಕಟ್ಟಬೇಕು. ಆ ಪ್ರಯತ್ನವನ್ನು ಸತ್ಯನಾರಾಯಣ ‘ಅವರವರ ಭವಕ್ಕೆ ಓದುಗರ ಭಕುತಿಗೆ’ ಕೃತಿಯಲ್ಲಿ ಮಾಡಿದ್ದಾರೆ’ ಎಂದು ಹೇಳಿದರು.

ಕೆ.ಸತ್ಯನಾರಾಯಣ, ‘ಬೇರೆ ಬೇರೆ ಪ್ರಕಾರಕ್ಕೆ ಸಿಕ್ಕಷ್ಟೆ ಮನ್ನಣೆ ವಿಮರ್ಶೆಗೂ ಲಭಿಸಿರುವುದಕ್ಕೆ ಸಂತಸವಾಗಿದೆ. ವಿಮರ್ಶೆ ಎಂಬುದು ನಮ್ಮ ಅನುಭವ ಮತ್ತು ಸಂತಸ ಹಂಚಿಕೊಳ್ಳುವಿಕೆ. ಅದು ಕೇವಲ ಮಾಹಿತಿಯಲ್ಲ’ ಎಂದು ಹೇಳಿದರು.

ಶಾಂತಾ ಇಮ್ರಾಪುರ ಅವರು, ‘ಬಿಎಂಶ್ರೀ ಅವರನ್ನು ನೆನೆಯದ ಕನ್ನಡದ ಮನಸ್ಸುಗಳೇ ಇಲ್ಲ. ಕನ್ನಡ ಭಾಷೆಯನ್ನು‍ಪುನರುಜ್ಜೀವನ
ಗೊಳಿಸುವದಿಸೆಯಲ್ಲಿ ಆಲೋಚಿಸಿದ ಪ್ರಮುಖರಲ್ಲಿ ಅವರೂ ಕೂಡ ಒಬ್ಬರಾಗಿದ್ದರು’ ಎಂದರು.

‘ಮಹಿಳೆಯರು ಉತ್ಕೃಷ್ಟವಾದ ಬರಹಗಳನ್ನು ನೀಡುತ್ತಿದ್ದಾರೆ.ಚರಿತ್ರೆಯ ಹಿನ್ನೆಲೆಯಲ್ಲಿ ಮುಂದೆ ಸಾಗುತ್ತಿದ್ದಾರೆ.ಅವರಿಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಮನ್ನಣೆ ನೀಡುವ ಕೆಲಸ ಆಗಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT