ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ಗಳ ಅನಾಹುತ: 355 ದಿನ, 258 ಅಪಘಾತ, 50 ಸಾವು

2018ರಲ್ಲಿ ಬಿಎಂಟಿಸಿ ಬಸ್‌ಗಳಿಂದ ಅನಾಹುತ
Last Updated 25 ಡಿಸೆಂಬರ್ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿಯ ಬಸ್‌ಗಳ ಅಪಘಾತ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು (ಬಿಎಂಟಿಸಿ) ಕಳವಳಕ್ಕೀಡು ಮಾಡಿದೆ.

ಡಿಸೆಂಬರ್‌ 20ರಂದು ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ ಸಮೀಪದ ಪೆಟ್ರೋಲ್‌ ಬಂಕ್‌ ಮುಂಭಾಗ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದರು.

ಈ ದುರ್ಘಟನೆ ಬಳಿಕ ಎಚ್ಚೆತ್ತ ಬಳಿಕ ಸಂಸ್ಥೆ ಇಂಥ ಘಟನೆಗಳು ಮರುಕಳಿಸಲು ಕಾರಣವೇನು ಎಂಬುದನ್ನು ಹುಡುಕಲು ಹೊರಟಿದೆ. ಅಪಘಾತಗಳನ್ನು ನಿಯಂತ್ರಿಸುವ ಮಾರ್ಗೋಪಾಯ ಕಂಡುಕೊಳ್ಳುವುದಕ್ಕೂ ಸಿದ್ಧತೆ ನಡೆಸಿದೆ.

ತರಬೇತಿಯಲ್ಲೇ ಲೋಪ?

‘ತರಬೇತಿ ಹಂತದಲ್ಲಿಯೇ ಲೋಪವಿದೆ. ಚಾಲಕರಾಗಿ ಒಂದೆರಡು ವರ್ಷಗಳ ಅನುಭವ ಮಾತ್ರ ಇರುವವರನ್ನು ತರಬೇತುದಾರರನ್ನಾಗಿ ನೇಮಿಸಲಾಗಿದೆ. ಇಲ್ಲಿನ ತರಬೇತಿದಾರರು ಅಪಘಾತರಹಿತ ಸೇವೆಗಾಗಿ ಚಿನ್ನ/ ಬೆಳ್ಳಿಯ ಪದಕ ಪಡೆದವರಾಗಿರಬೇಕು. ನಾಮಕ್ಕಲ್‌ನಲ್ಲಿ (ತಮಿಳುನಾಡಿನ ಬಸ್‌ ಚಾಲನೆ ತರಬೇತಿ ಕೇಂದ್ರ) ತರಬೇತಿ ಪಡೆದಿರಬೇಕು. ಅತ್ಯುತ್ತಮ ಇಂಧನ ಮೈಲೇಜ್‌ ನೀಡಿದ ದಾಖಲೆ ಹೊಂದಿರಬೇಕು ಎಂಬ ನಿಬಂಧನೆ ಇದೆ. ಆದರೆ, ಇಲ್ಲಿ ಈ ಅರ್ಹತೆ ಹೊಂದಿರುವ ಒಂದೆರಡು ಮಂದಿ ತರಬೇತುದಾರರು ಮಾತ್ರ ಇದ್ದಾರೆ. ಇತರ ತರಬೇತುದಾರರಿಂದ ಸಿಗುವ ತರಬೇತಿ ಗುಣಮಟ್ಟ ಅಷ್ಟಕ್ಕಷ್ಟೆ’ ಎನ್ನುತ್ತಾರೆ ಬಸ್‌ ಚಾಲಕರು.

ಬಸ್‌ಗಳ ನಿರ್ವಹಣೆಯನ್ನು ಇನ್ನಷ್ಟು ಕಾಳಜಿಯಿಂದ ಮಾಡಬೇಕು. ಬೆಳಿಗ್ಗೆ ವಾಹನವನ್ನು ರಸ್ತೆಗಿಳಿಸುವ ತರಾತುರಿಯಲ್ಲಿ ಅವುಗಳನ್ನು ಸರಿಯಾಗಿ ತಪಾಸಣೆ ಮಾಡುವುದೂ ಇಲ್ಲ. ಬ್ರೇಕ್‌ ವೈಫಲ್ಯ, ಸ್ಟೀರಿಂಗ್‌ ರಾಡ್‌ ತುಂಡಾಗುವುಕ್ಕೆ ವಾಹನದ ಬಗ್ಗೆ ನಿಗಾ ವಹಿಸದಿರುವುದೇ ಕಾರಣ ಎಂದು ಚಾಲಕರು ದೂರಿದರು.

ಆದರೆ, ಈ ಆರೋಪಗಳನ್ನು ಒಪ್ಪಿಕೊಳ್ಳಲು ಬಿಎಂಟಿಸಿ ಸಿದ್ಧವಿಲ್ಲ. ‘ವಾಹನಗಳನ್ನು ಪ್ರತಿದಿನ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ. ಚಾಲಕರೂ ಕಾಳಜಿ ವಹಿಸುತ್ತಾರೆ. ಇಲ್ಲವಾದರೆ ಅವರಿಗೇ ತೊಂದರೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಲ್ಲಿ ಯಾವುದೇ ರಾಜಿ ಇಲ್ಲ. ಇಷ್ಟೆಲ್ಲಾ ಕಾಳಜಿ ವಹಿಸಿದರೂ ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರುತ್ತದೆ. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಅಪಘಾತಕ್ಕೇನು ಕಾರಣ?

* ನಿಗದಿತ ವೇಳೆಯೊಳಗೆ ತಲುಪುವ ಒತ್ತಡ

* ಸ್ವಲ್ಪ ಅವಕಾಶ ಸಿಕ್ಕರೂ ಮುನ್ನುಗ್ಗುವಿಕೆ

* ವಾಹನ ದಟ್ಟಣೆ, ಬೈಕ್‌ ಸವಾರರ ಅಡ್ಡಾದಿಡ್ಡಿ ಸಂಚಾರ

* ತಾಂತ್ರಿಕ ದೋಷ, ನಿರ್ವಹಣೆ ಕೊರತೆ

* ಬಾಗಿಲು ತೆರೆದಿಟ್ಟೇ ಸಂಚಾರ

* ಕೊನೇ ಕ್ಷಣದ ಗಾಬರಿ (ಬ್ರೇಕ್‌ ಬದಲು ಆ್ಯಕ್ಸಿಲರೇಟರ್‌ ಒತ್ತಿಬಿಡುವುದು)

‘ಅಪಘಾತ ನಿಯಂತ್ರಣ– ಹೆಚ್ಚಿನ ನಿಗಾ’

ಅಪಘಾತ, ಮರಣ ಪ್ರಮಾಣಗಳು ಹೆಚ್ಚಿವೆ. ಬಸ್‌ಗಳ ನಿರ್ವಹಣೆ ಮೇಲೆ ಹೆಚ್ಚಿನ ನಿಗಾ ವಹಿಸಿದ್ದೇವೆ. ದೈನಂದಿನ ನಿರ್ವಹಣೆ ಜತೆಗೆ ಪ್ರತಿ 15 ದಿನಗಳಿಗೊಮ್ಮೆ ಇಡೀ ವಾಹನದ ಪರಿಪೂರ್ಣ ನಿರ್ವಹಣೆ ಮಾಡುತ್ತೇವೆ. ಚಾಲಕರ ತರಬೇತಿ ಗುಣಮಟ್ಟ ವರ್ಧನೆಗೂ ಹೆಚ್ಚು ಒತ್ತು ನೀಡುತ್ತೇವೆ.

ತರಬೇತಿದಾರರು ಅಪಘಾತರಹಿತ ಚಾಲನೆಗಾಗಿ ಚಿನ್ನ/ಬೆಳ್ಳಿ ಪದಕ ಪಡೆದಿರಬೇಕು ಎಂಬ ಷರತ್ತೇನೋ ಇದೆ. ಆದರೆ, ಅಂತಹವರು ಸಿಗುವುದು ಕಡಿಮೆ. ಅದಕ್ಕಾಗಿ ಉತ್ತಮ ಸೇವಾನುಭವ, ಪರಿಣತಿ ಹೊಂದಿದವರನ್ನು ತರಬೇತಿಗೆ ನಿಯೋಜಿಸಿದ್ದೇವೆ. ಇತ್ತೀಚೆಗೆ ನಡೆದ ಅಪಘಾತ ಪ್ರಕರಣಗಳಲ್ಲಿ ವಾಹನ ಚಲಾಯಿಸಿದವರಿಗೆ 8 ವರ್ಷಗಳ ಅನುಭವ ಇತ್ತು. ಈ ಹಿಂದೆ ಅವರಿಂದಾಗಿ ಯಾವುದೇ ಅಪಘಾತವೂ ಸಂಭವಿಸಿರಲಿಲ್ಲ. ಹೀಗಾಗಿ ತರಬೇತಿಯಲ್ಲಿ ಲೋಪವಿದೆ ಎನ್ನುವುದನ್ನು ಒಪ್ಪಲಾಗದು.

– ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT