ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಪಾಸ್‌ ಪ‍ಡೆಯಲು ವಿದ್ಯಾರ್ಥಿಗಳ ಹರಸಾಹಸ

Last Updated 22 ಸೆಪ್ಟೆಂಬರ್ 2018, 20:28 IST
ಅಕ್ಷರ ಗಾತ್ರ

ಬೆಂಗಳೂರು: ಆಯಾ ಬಸ್‌ ನಿಲ್ದಾಣಗಳಲ್ಲೇ ಕೊಡುತ್ತಿದ್ದ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಮೆಜೆಸ್ಟಿಕ್‌ನಲ್ಲೇ ವಿತರಿಸಲು ಬಿಎಂಟಿಸಿ ಮುಂದಾಗಿದ್ದರಿಂದ ಅಲ್ಲಿನ ಕೌಂಟರ್‌ಗಳ ಮುಂದೆ ಶನಿವಾರ ನೂಕುನುಗ್ಗಲು ಉಂಟಾಯಿತು.

ಪಾಸ್‌ಗಾಗಿ ಸಾವಿರಾರು ವಿದ್ಯಾರ್ಥಿಗಳು ಸರದಿಯಲ್ಲಿ ಸಂಜೆವರೆಗೂ ಕಾದರು. ವಿದ್ಯಾರ್ಥಿಗಳು ತರಗತಿ ಬಿಟ್ಟು ಕಾಯುವುದು ಒಂದೆಡೆಯಾದರೆ ಬಿಎಂಟಿಸಿ ಸಿಬ್ಬಂದಿಯೂ ವಿಪರೀತ ಒತ್ತಡ ಎದುರಿಸಿದರು. ಮೊದಲೇ ಗಿಜಿಗುಟ್ಟುವ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಸರದಿಯಿಂದಾಗಿ ದಟ್ಟಣೆ ಇನ್ನೂ ಹೆಚ್ಚಾಗಿತ್ತು.

ಬಿಎಂಟಿಸಿಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ತಮ್ಮ ಶಾಲೆ/ಕಾಲೇಜುಗಳಲ್ಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಆ ವಿದ್ಯಾರ್ಥಿಗಳಿಗೆ ನಿಗದಿತ ದಿನದಂದು ಮೆಜೆಸ್ಟಿಕ್‌ ನಿಲ್ದಾಣದ ಪಾಸ್‌ ಕೌಂಟರ್‌ನಲ್ಲಿ ದಾಖಲೆ ಪರಿಶೀಲಿಸಿಕೊಂಡು ಪಾಸ್‌ ಪಡೆಯುವಂತೆ ಮೊಬೈಲ್‌ ಸಂದೇಶ ಬಂದಿತ್ತು.

ಒಂದೇ ಬಾರಿ ಸಾವಿರಾರು ವಿದ್ಯಾರ್ಥಿಗಳು ಕೌಂಟರ್‌ ಮುಂದೆ ನಿಂತಾಗ ಬಿಎಂಟಿಸಿ ಸಿಬ್ಬಂದಿಯೂ ಅಸಹಾಯಕರಾದರು. ಕೊನೆಗೆ ಅವರಿಗೆ ಸರದಿ ಪ್ರಕಾರ ನಿಲ್ಲಲು ಕೂಪನ್‌ ನೀಡಲಾಯಿತು. ದಟ್ಟಣೆ ಏರುತ್ತಿರುವುದನ್ನು ಕಂಡ ಸಿಬ್ಬಂದಿ ಮಧ್ಯಾಹ್ನ 2ರ ವೇಳೆಗೆ ಕೂಪನ್‌ ನೀಡುವುದನ್ನೂ ನಿಲ್ಲಿಸಿದರು. ಕೂಪನ್‌ ಸಿಗದ ವಿದ್ಯಾರ್ಥಿಗಳಿಗೆ ಸೋಮವಾರ ಬರುವಂತೆ ಹೇಳಿದರು.

‘ಶುಕ್ರವಾರ ಮತ್ತು ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಇತ್ತು. ಹಾಗಾಗಿ ಸರದಿಯಲ್ಲಿ ನಿಂತೆವು. ಸೋಮವಾರಕ್ಕೆ ಮುಂದೂಡಿದರೆ ತರಗತಿ ತಪ್ಪಿಸಿಕೊಳ್ಳಬೇಕಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಬಸ್‌ಪಾಸ್‌ ವಿತರಣೆ ಹೆಸರಿನಲ್ಲಿ ಬಿಎಂಟಿಸಿ ತಾನೇ ಗೊಂದಲ ಸೃಷ್ಟಿಸಿಕೊಂಡಿದೆ. ಸೂಕ್ತ ಮೂಲಸೌಲಭ್ಯ ಇಲ್ಲದೆ ಹೊಸ ವ್ಯವಸ್ಥೆ ಅಳವಡಿಸಬಾರದಿತ್ತು. ಮಗಳ ಬಸ್‌ಪಾಸ್‌ಗಾಗಿ ಕಾರ್ಖಾನೆ ಕೆಲಸಕ್ಕೆ ರಜೆ ಹಾಕಿ ಬಂದಿದ್ದೇನೆ’ ಎಂದು ಮಾಗಡಿ ರಸ್ತೆಯ ಹೊಸಳ್ಳಿ ನಿವಾಸಿ ಲೋಕೇಶ್‌ ಹೇಳಿದರು. ‘ಇಂದು ಸುಮಾರು 3,500 ವಿದ್ಯಾರ್ಥಿಗಳು ಬಸ್‌ಪಾಸ್‌ಗಾಗಿ ಸರದಿಯಲ್ಲಿ ನಿಂತಿದ್ದರು’ ಎಂದು ಸಿಬ್ಬಂದಿ ಹೇಳಿದರು.

ಹಿಂದಿನ ವ್ಯವಸ್ಥೆ ಜಾರಿಗೆ ಒತ್ತಾಯ: ಈ ಹಿಂದೆ ಆಯಾ ಬಸ್‌ ನಿಲ್ದಾಣ, ಘಟಕಗಳಲ್ಲೇ ಪಾಸ್‌ ವಿತರಣೆ ನಡೆಯುತ್ತಿತ್ತು. ಈ ಬಾರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಿದರೆ ಅಂಚೆ ಮೂಲಕ ಪಾಸ್‌ ಮನೆಗೇ ಬರುತ್ತದೆ ಎಂದು ಹೇಳಿದ್ದರು. ಈಗ ಎರಡೂ ಇಲ್ಲವಾಗಿದೆ ಎಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಎನ್‌. ಸೌಂದರ್ಯ ಹೇಳಿದರು.

ಆಯಾ ಬಸ್‌ ನಿಲ್ದಾಣದಲ್ಲೇ ಪಾಸ್‌ ವಿತರಿಸಲು ಕ್ರಮ ಕೈಗೊಳ್ಳಬೇಕು. ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌ ಕರೆ ಸ್ವೀಕರಿಸಲಿಲ್ಲ.

ಅಂಧರಿಗೆ ವಜ್ರ ಬಸ್‌ಗಳಲ್ಲಿ ಮಾತ್ರ ಉಚಿತ

ಬೆಂಗಳೂರು: ಪೂರ್ಣಪ್ರಮಾಣದ ಅಂಧರಿಗೆ ಬಿಎಂಟಿಸಿಯ ವಜ್ರ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ವಾಯು– ವಜ್ರ ಬಸ್‌ಗಳಲ್ಲಿ ಈ ಅವಕಾಶ ಇರುವುದಿಲ್ಲ ಎಂದು ಬಿಎಂಟಿಸಿ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT