ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣದ ಟಿ–2ರಿಂದ ಬಸ್‌ಗಳಿಗೆ ಚಾಲನೆ

Published 29 ಡಿಸೆಂಬರ್ 2023, 16:22 IST
Last Updated 29 ಡಿಸೆಂಬರ್ 2023, 16:22 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿತ್ಯ ಬಂದು ಹೋಗುವ ಪ್ರಯಾಣಿಕರ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ. ಅದರಲ್ಲಿ 14,000 ಮಂದಿ ಬಿಎಂಟಿಸಿ ಬಸ್‌ಗಳಲ್ಲೇ ಸಂಚರಿಸುವವರಾಗಿದ್ದಾರೆ. ಟರ್ಮಿನಲ್‌–1ಕ್ಕೆ ಈಗಾಗಲೇ ಬಿಎಂಟಿಸಿ ವಾಯು ವಜ್ರ ಬಸ್‌ಗಳ ಸಂಪರ್ಕ ಇತ್ತು. ಇನ್ನು ಮುಂದೆ ಆ ಎಲ್ಲ ಬಸ್‌ಗಳು ಟರ್ಮಿನಲ್‌–2ಕ್ಕೂ ಬಂದು ತೆರೆಳಲಿವೆ. 137 ವಾಯು ವಜ್ರ ಬಸ್‌ಗಳು 944 ಟ್ರಿಪ್‌ ಮಾಡುತ್ತಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

‘ಮೈಸೂರು, ಮಡಿಕೇರಿ ಹಾಗೂ ಕುಂದಾಪುರ ಮಾರ್ಗದಲ್ಲಿ 13 ಫ್ಲೈಬಸ್‌ಗಳು 42 ಟ್ರಿಪ್‌ ಮಾಡುತ್ತಿವೆ. ಟರ್ಮಿನಲ್‌–2 ಪ್ರಯಾಣಿಕರಿಗೂ ಇನ್ನು ಮುಂದೆ ಉಪಯೋಗವಾಗಲಿದೆ. ದಿನದ 24 ಗಂಟೆಯೂ ಬಸ್ ಸೇವೆ ಇರಲಿದೆ’ ಎಂದು ವಿವರಿಸಿದರು.

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, ಉಳಿದ ವಿಮಾನ ನಿಲ್ದಾಣಗಳಿಗಿಂತ ವಿಭಿನ್ನವಾಗಿದೆ. ನಿರಂತರ ಬಸ್‌ ಸೇವೆ ಇರುವುದರಿಂದ ಇದರ ಉಪಯೋಗವನ್ನು ಪ್ರಯಾಣಿಕರು ಪಡೆಯಬೇಕು’ ಎಂದರು.

ತೂಬಗೆರೆ ಪಂಚಾಯಿತಿಗೆ ಬಸ್‌ ಸಂಪರ್ಕ, ಘಾಟಿ ಸುಬ್ರಮಣ್ಯ ದೇಗುಲಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು.

ಬಿಬಿಎಂಪಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಮುಖ್ಯ ಕಾರ್ಯನಿರ್ವಾಹಕ ಸತ್ಯಕಿ ರಘುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಎನ್., ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶಾಲಿನಿ ರಾವ್, ಮುಖ್ಯ ಮಾರುಕಟ್ಟೆ ಅಧಿಕಾರಿ ಡೊಮಿನಿಕ್‌ ದೇವಸಿಯಾ, ವಿಶಾಲ್‌ ಕೆ., ಸಂಜಯ್‌ ಚಂದ್ರ, ಶಿವಶಂಕರ್‌ ಇದ್ದರು.

ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ವಾಹನಗಳ ಕಾರ್ಯಾಚರಣೆಯ ಸಮಯ, ಡಿಜಿಟಲ್‌ ಫಲಕಗಳು, ಸಾರ್ವಜನಿಕ ಉದ್ಘೋಷಣಾ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ 40 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ.

ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್‌-2ರಿಂದ ವಾಯುವಜ್ರ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಜಿಲ್ಲಾಧಿಕಾರಿ ಶಿವಶಂಕರ್‌ ಎನ್‌. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಹೂ ನೀಡಿ ಸ್ವಾಗತಿಸಿದರು.
ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್‌-2ರಿಂದ ವಾಯುವಜ್ರ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಜಿಲ್ಲಾಧಿಕಾರಿ ಶಿವಶಂಕರ್‌ ಎನ್‌. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಹೂ ನೀಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT