ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಸುಧಾರಣೆ ಕಾಣಲಿದ್ದೀರಿ: ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ

Last Updated 9 ಜನವರಿ 2020, 1:45 IST
ಅಕ್ಷರ ಗಾತ್ರ

ಫೋನ್‌– ಇನ್‌ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಒಂದು ಕರೆಗೆ ಉತ್ತರಿಸಿ ರಿಸೀವರ್‌ ಕೆಳಗಿಡುವಷ್ಟರಲ್ಲಿ ಇನ್ನೊಂದು ಕರೆ ರಿಂಗಣಿಸುತ್ತಿತ್ತು. ಪ್ರಯಾಣಿಕರು ಕೇಳಿದ ಆಯ್ದ ಪ್ರಶ್ನೆಗಳು ಮತ್ತು ನಂದೀಶ್‌ ರೆಡ್ಡಿ ಅವರು ನೀಡಿದ ಉತ್ತರಗಳು ಇಲ್ಲಿವೆ.

*ಉಲ್ಲಾಳ ಉಪನಗರದಲ್ಲಿ ಎಲ್ಲೂ ಬಸ್‌ಗಳ ವೇಳಾಪಟ್ಟಿಯೇ ಇಲ್ಲ. ಬಸ್‌ಗಳು ಎಷ್ಟೊತ್ತಿಗೆ ಬರುತ್ತವೆ, ಎಲ್ಲಿಗೆ ಹೋಗುತ್ತವೆ ಎಂಬ ಮಾಹಿತಿ ಸಿಗುತ್ತಿಲ್ಲ

–ರಂಗಸ್ವಾಮಿ, ಉಲ್ಲಾಳ ಉಪನಗರ

ಉ: ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಗುರುವಾರವೇ ಕಳುಹಿಸುತ್ತೇನೆ. ಪರಿಶೀಲನೆ ನಡೆಸಿ ವೇಳಾಪಟ್ಟಿ ಹಾಕಿಸುತ್ತಾರೆ.

* ಕೆಂಗೇರಿ ಕಡೆಯಿಂದ ಬೆಳಗಿನ ಜಾವ ಹೊರಡುವ ಬಸ್‌ಗಳಲ್ಲಿ ಎಲ್‌ಸಿಡಿಯಲ್ಲಿ ಮಾಹಿತಿ ನಿಡುವ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

–ಸುದರ್ಶನ್, ಕೆಂಗೇರಿ

ಉ: ವಾರದೊಳಗೆ ಬಗೆಹರಿಸುತ್ತೇವೆ.

* ಹೆಬ್ಬಾಳ ಮತ್ತು ಗೊರಗುಂಟೆ ಪಾಳ್ಯದಲ್ಲಿ ಪ್ರಯಾಣಿಕರ ತಂಗುದಾಣಗಳಿಲ್ಲ. ಕಳ್ಳರ ಕಾಟ ಹೆಚ್ಚಾಗಿದೆ. ನಾನೇ ಎರಡು ಮೊಬೈಲ್ ಫೋನ್ ಕಳೆದುಕೊಂಡಿದ್ದೇನೆ

–ಮಹೇಶ್‌, ಕೆಂಗೇರಿ ಉಪನಗರ

ಉ: ಹೆಬ್ಬಾಳದಲ್ಲಿ ರೈಲು ನಿಲ್ದಾಣ, ಮೆಟ್ರೊ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್‌ ಸೇರಿ ಎಲ್ಲಾ ನಿಲ್ದಾಣಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಯುತ್ತಿದೆ.

* ಪ್ರಯಾಣಿಕರ ತಂಗುದಾಣದ ಬಳಿ ಬಸ್‌ ನಿಲ್ಲುತ್ತಿಲ್ಲ. ಹಿಂದೆ–ಮುಂದೆ ಓಡಿ ಹೋಗಿ ಬಸ್ ಹತ್ತಬೇಕು. ವಯಸ್ಸಾದವರಿಗೆ ಸಮಸ್ಯೆಯಾಗುತ್ತಿದೆ

–ಆಂಜನೇಯಗೌಡ, ಕೆ.ಆರ್.ಪುರ

ಉ: ಪ್ರಯಾಣಿಕರ ತಂಗುದಾಣದಲ್ಲೇ ಬಸ್ ನಿಲ್ಲಿಸುವಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನಷ್ಟು ಸುಧಾರಣೆಯನ್ನು ನೀವು ಕಾಣಲಿದ್ದೀರಿ.

*ನೆಲಮಂಗಲದಿಂದ ಯಶವಂತಪುರಕ್ಕೆ ಬೆಳಿಗ್ಗೆ ಮತ್ತು ಸಂಜೆ ಕಿಕ್ಕಿರಿದು ತುಂಬಿದ ಬಸ್‌ನಲ್ಲಿ ಓಡಾಡುವುದೇ

–ಕಷ್ಟ –ಜಗದೀಶ್, ನೆಲಮಂಗಲ

ಉ: ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಬಸ್‌ಗಳ ಸಂಖ್ಯೆ ಹೆಚ್ಚಿಸಲು ಕ್ರಮ
ಕೈಗೊಳ್ಳಲಾಗಿದೆ.

*ಶಿವಾಜಿನಗರದಿಂದ ಬಿಟಿಎಂ ಲೇಔಟ್‌ಗೆ ಬರಬೇಕಿರುವ 164–ಬಿ ಬಸ್‌ ಜಯದೇವ ಜಂಕ್ಷನ್‌ನಲ್ಲೇ ಸಂಚಾರ ಕೊನೆಗೊಳಿಸುತ್ತಿದೆ. ಮೂರು ತಿಂಗಳಿಂದ ನಮ್ಮ ಬಡಾವಣೆಗೆ ಈ ಬಸ್ ಬಂದಿಲ್ಲ

–ರಮೇಶ್, ಬಿಟಿಎಂ ಲೇಔಟ್‌

ಉ: ಬಸ್ ಮಾರ್ಗ ಬದಲಿಸಿರುವ ಬಗ್ಗೆ ಪರಿಶೀಲಿಸಿ ಬಿಟಿಎಂ ಲೇಔಟ್‌ಗೆ ಬಸ್ ಬರುವಂತೆ ನೋಡಿಕೊಳ್ಳಲಾಗುವುದು.

* ಮೂರು ಜನ ಕುಳಿತುಕೊಳ್ಳುವ ಸೀಟ್‌ನಿಂದಾಗಿ ಬಸ್‌ನಲ್ಲಿ ನಿಲ್ಲಲೂ ಜಾಗವಿರುವುದಿಲ್ಲ. ಪ್ರಯಾಣಿಕರು ಪರದಾಡುವಂತಾಗಿದೆ

–ಯೋಗೇಶ್‌, ಕುಮಾರಸ್ವಾಮಿ ಬಡಾವಣೆ

ಉ: ಈ ಮಾದರಿಯ ಬಸ್‌ ನಗರಕ್ಕೆ ಒಗ್ಗುವುದಿಲ್ಲ. ಹೀಗಾಗಿ ನಗರದಲ್ಲಿರುವ ಮೂರು ಸೀಟ್‌ಗಳ ಎಲ್ಲಾ ಬಸ್‌ಗಳನ್ನು ಬದಲಿಸಲು ಸೂಚನೆನೀಡಿದ್ದೇನೆ.

* ನಮ್ಮ ಬಡಾವಣೆಯಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಹೋಗುವ ಬಸ್‌ಗಳು ಬರುತ್ತಿಲ್ಲ

–ನಾರಾಯಣಸ್ವಾಮಿ, ವಡೇರಹಳ್ಳಿ

ಉ: ಮಾರ್ಗ ಬದಲಾವಣೆ ಆಗಿರುವ ಬಗ್ಗೆ ಪರಿಶೀಲಿಸುತ್ತೇನೆ.

* ನಮ್ಮ ಬಡಾವಣೆಗೆ ಒಂದೇ ಒಂದು ಬಸ್‌ ಇದೆ. ಅದು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಇದನ್ನು ದುರ್ಬಳಕೆ ಮಾಡಿಕೊಳ್ಳುವ ಆಟೋರಿಕ್ಷಾದವರು ದುಬಾರಿ ಬಾಡಿಗೆ ವಸೂಲಿ ಮಾಡುತ್ತಾರೆ

–ಸುಗುಣಾ, ದೇವಿನಗರ, ಹೆಬ್ಬಾಳ

ಉ: ರಸ್ತೆ ಸಂಪರ್ಕ ಸರಿ ಇದೆಯೇ ಎಂಬುದನ್ನು ಪರಿಶೀಲಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಸೂಚನೆ ನೀಡುತ್ತೇನೆ

-----

ದೈನಂದಿನ ಪಾಸ್‌– ಮಧ್ಯರಾತ್ರಿಯಲ್ಲಿ ಇಲ್ಲ ಕಿಮ್ಮತ್ತು

‘ಬಿಎಂಟಿಸಿ ದೈನಂದಿನ ಪಾಸುಗಳಲ್ಲಿ ಮಧ್ಯರಾತ್ರಿ ತನಕ ಎಂದು ನಮೂದಿಸಲಾಗಿದೆ. ಹೊಸ ಪಾಸುಗಳನ್ನು ಬೆಳಗಿನ ಜಾವದ ನಂತರವಷ್ಟೇ ನೀಡಲಾಗುತ್ತದೆ. ಬಹಳಷ್ಟು ಬಾರಿ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬೇಕೆಂದೇ 12 ಗಂಟೆಯ ನಂತರ ಕೊನೆಯ ಬಸ್‌ಗಳ ಸಂಚಾರ ಆರಂಭಿಸಲಾಗುತ್ತಿದೆ. ದೈನಂದಿನ ಪಾಸು ಪಡೆದವರೂ ರಾತ್ರಿ ವೇಳೆ ಸಂಚರಿಸುವಾಗ ಒಂದೂವರೆ ಪಟ್ಟು ಹಣ ನೀಡಿ ಟಿಕೆಟ್‌ ಖರೀದಿಸಬೇಕಾಗಿದೆ’ ಎಂದು ಬನ್ನೇರುಘಟ್ಟ ರಸ್ತೆಯ ಬಿ.ಶ್ರೀಪತಿರಾವ್ ಹೇಳಿದರು.

‘12 ಗಂಟೆಯೊಳಗೆ ಬಸ್ ಹತ್ತಿದವರು ಎಷ್ಟೊತ್ತಿಗೆ ಬಸ್‌ನಿಂದ ಇಳಿದರೂ ಪಾಸ್ ಪರಿಗಣಿಸಬೇಕು ಎಂದು ಸೂಚನೆ ನೀಡಲಾಗಿದೆ. ಪಾಸ್ ನಿರಾಕರಿಸುವ ನಿರ್ವಾಹಕರ ವಿರುದ್ಧ ದೂರು ನೀಡಬಹುದು’ ಎಂದು ಅಧಿಕಾರಿಗಳು ತಿಳಿಸಿದರು.

ತಾವರೆಕೆರೆ-ಕೆ.ಆರ್‌.ಮಾರುಕಟ್ಟೆಗೆ ಬಸ್

ತಾವರೆಕೆರೆಯಲ್ಲಿ ತಂಗಿ ಬೆಳಿಗ್ಗೆ ಕೆ.ಆರ್. ಮಾರುಕಟ್ಟೆಗೆ ತೆರಳುವ 221 ಬಿ ಮಾರ್ಗದ ಬಸ್ ಸಂಚಾರವನ್ನು ಮತ್ತೆ ಆರಂಭಿಸಲು ನಂದೀಶ್‌ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

20 ವರ್ಷದಿಂದ ಇದ್ದ ಈ ಮಾರ್ಗವನ್ನು ಬದಲಿಸಲಾಗಿದೆ. ಇದರಿಂದ ರೈತರು, ಶಾಲಾ ಮಕ್ಕಳಿಗೆ ತೊಂದರೆ ಆಗಿರುವ ಬಗ್ಗೆ ‘ಪ್ರಜಾವಾಣಿ’ ಗಮನಕ್ಕೆ ತಂದಿತು.

‘ಬಸ್‌ಗಳನ್ನು ಸ್ವಚ್ಛಗೊಳಿಸಲು, ‌ರಜೆ ಮಂಜೂರು ಮಾಡಲು ಲಂಚ ನೀಡಬೇಕು ಎಂಬ ದೂರುಗಳು ಇವೆ. ಆಗಾಗ ಡಿಪೊಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ನಿರ್ದೇಶಕ ಅನುಪಮ್ ಅಗ್ರವಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT