ಭಾನುವಾರ, ಆಗಸ್ಟ್ 1, 2021
27 °C
ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ: ₹7,500 ಕ್ಕೆ 6 ವಸ್ತುಗಳ ಖರೀದಿ

ಹಾಸಿಗೆ, ಮಂಚ, ಫ್ಯಾನ್‌ ಖರೀದಿ: ದರ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಕೋವಿಡ್‌ ಆರೈಕೆ ಕೇಂದ್ರಕ್ಕೆ ಪ್ರತಿ ಹಾಸಿಗೆಗೆ ಬೇಕಾದ ಮಂಚ, ಹಾಸಿಗೆ,ಫ್ಯಾನ್‌, ಬಕೆಟ್‌, ಮಗ್‌ ಮತ್ತು ಕಸದಬುಟ್ಟಿಗಳನ್ನು ಪ್ರತಿ ಸೆಟ್‌ಗೆ ₹7,500 ರಂತೆ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಬುಧವಾರ ಪೂರೈಕೆದಾರರ ಜತೆ ಸಮಾಲೋಚನೆ ನಡೆಸಿ ದರವನ್ನು ನಿಗದಿ ಮಾಡಿದ್ದಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಹಾಸಿಗೆಗಳಿಗೆ ಬೇಕಾಗಿರುವ ಪೂರಕ ವಸ್ತುಗಳನ್ನು ₹4.87 ಕೋಟಿ ವೆಚ್ಚದಲ್ಲಿ ಖರೀದಿಸಲಾಗುವುದು  ಎಂದು ಅವರು ಹೇಳಿದರು.

ಅಲ್ಲದೆ, ನೆಲದ ಹಾಸು ವಿನೈಲ್‌ ಫ್ಲೋರಿಂಗ್ ಅನ್ನು ಪ್ರತಿ ಚದರ ಅಡಿಗೆ ₹31 ರಂತೆ ಖರೀದಿಸಲು ತೀರ್ಮಾನಿಸಲಾಗಿದೆ. ಇದರಿಂದ 7.9 ಲಕ್ಷ ಚದರ ಅಡಿಗೆ ₹2.45 ಕೋಟಿ ವೆಚ್ಚವಾಗಲಿದೆ ಎಂದರು.

ಪ್ರತಿ ಹಾಸಿಗೆಗೆ ಅಗತ್ಯವಿರುವ ಮತ್ತು ಪುನರ್‌ ಬಳಕೆ ಸಾಧ್ಯವಿಲ್ಲದ 19 ವಸ್ತುಗಳನ್ನು ಪ್ರತಿ ತಿಂಗಳಿಗೆ ₹6,500 ರಂತೆ ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ. ಬಾಡಿಗೆ ಮೊತ್ತ ಒಂದು ತಿಂಗಳಿಗೆ ₹4.23 ಕೋಟಿ ಆಗುತ್ತದೆ ಎಂದು ಹೇಳಿದರು.

‘ಅಗತ್ಯ ವಸ್ತುಗಳನ್ನು ದುಬಾರಿ ಬಾಡಿಗೆಗೆ ಪಡೆಯುವ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಆಗಿರುವ ಲೋಪವನ್ನು ಸರಿಪಡಿಸಲು ಮತ್ತು ತಪ್ಪು ಮಾಡಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ತಕ್ಷಣವೇ ಕ್ರಮ ತೆಗೆದುಕೊಂಡು ಬೊಕ್ಕಸಕ್ಕೆ ಅನಗತ್ಯ ವೆಚ್ಚವಾಗುವುದನ್ನು ತಡೆದಿದ್ದಾರೆ. ಖರೀದಿ ಮಾಡಿರುವ ವಸ್ತುಗಳ ಒಟ್ಟು ಮೊತ್ತ ₹7.32 ಕೋಟಿಯನ್ನು ತಕ್ಷಣವೇ ಪೂರೈಕೆದಾರರಿಗೆ ಪಾವತಿಸಲು ಬಿಬಿಎಂಪಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರದ ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿ ರಾಜೇಂದ್ರಕುಮಾರ್ ಕಟಾರಿಯಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಪೂರೈಕೆದಾರರ ಜತೆಗೆ ಮಂಗಳವಾರ ತಡರಾತ್ರಿಯವರೆಗೆ ಸಭೆ ನಡೆಸಿದರು. ಬುಧವಾರ ಬಿಬಿಎಂಪಿ ಅಧಿಕಾರಿಗಳು ದರವನ್ನು ಅಂತಿಮಗೊಳಿಸಿದರು.

ಬೊಕ್ಕಸಕ್ಕೆ ಹೊರೆಯಾಗುವ ನಿರ್ಧಾರಕ್ಕೆ ತಡೆ
ಬಿಐಇಸಿ 10,100 ಹಾಸಿಗೆಗಳ ಸಾಮರ್ಥ್ಯದ ಬೃಹತ್‌ ಕೋವಿಡ್‌ ಆರೈಕೆ ಕೇಂದ್ರ. ಇಲ್ಲಿಗೆ ಪ್ರತಿ ಹಾಸಿಗೆ ಮತ್ತು ಅದಕ್ಕೆ ಅವಶ್ಯವಿರುವ ವಸ್ತುಗಳನ್ನು ₹800 ರಂತೆ ಬಾಡಿಗೆ ಆಧಾರದಲ್ಲಿ ಪಡೆಯಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದರು. ಇದರಿಂದ ಒಂದು ತಿಂಗಳಿಗೆ ಅಂದಾಜು ₹24 ಕೋಟಿ ವೆಚ್ಚವಾಗುವ ಸಾಧ್ಯತೆ ಇತ್ತು. ಇದು ದುಬಾರಿ ಎಂದು ಮುಖ್ಯಮಂತ್ರಿಯವರು ಬಿಐಇಸಿಗೆ ಭೇಟಿ ನೀಡಿದಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಡಿಗೆ ಬದಲಿಗೆ ವಸ್ತುಗಳನ್ನು ಖರೀದಿಸಿ, ಅವುಗಳ ಬಳಕೆ ಆದ ಬಳಿಕ ವಿದ್ಯಾರ್ಥಿ ನಿಲಯಗಳು ಅಥವಾ ಆಸ್ಪತ್ರೆಗಳಿಗೆ ಹಸ್ತಾಂತರಿಸಲು ಯಡಿಯೂರಪ್ಪ ಸೂಚನೆ ನೀಡಿದರು.

ಹಾಸಿಗೆ, ದಿಂಬನ್ನು ನಾವು ಇನ್ನೂ ಖರೀದಿಯೇ ಮಾಡಿಲ್ಲ:  ಆರ್‌.ಅಶೋಕ 
ಮೈಸೂರು: ‘ಹಾಸಿಗೆ, ದಿಂಬನ್ನು ನಾವು ಇನ್ನೂ ಖರೀದಿಯೇ ಮಾಡಿಲ್ಲ. ನಯಾ ಪೈಸೆ ದುಡ್ಡು ಕೊಟ್ಟಿಲ್ಲ, ಬಾಡಿಗೆಯನ್ನೂ ನೀಡಿಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ ಬುಧವಾರ ಇಲ್ಲಿ ತಿಳಿಸಿದರು.

‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಾಸಿಗೆ, ದಿಂಬು ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸುತ್ತಿದ್ದಾರೆ. ₹ 200 ಕೋಟಿ ವ್ಯಯಿಸಲಾಗಿದೆ ಎಂದು ಕಾಂಗ್ರೆಸ್‌ನ ಇನ್ನಿತರ ಮುಖಂಡರು ದೂರುತ್ತಿದ್ದಾರೆ. ಆದರೆ, ಮೂರು ತಿಂಗಳು ಬಾಡಿಗೆಗೆ ಇಟ್ಟುಕೊಂಡರೂ ₹ 25 ಕೋಟಿ ಖರ್ಚಾಗಲ್ಲ. ಖರೀದಿಸಿದರೆ ₹ 7 ಕೋಟಿ ಕೂಡ ಆಗಲ್ಲ’ ಎಂದರು.

ಮರುಬಳಕೆ ಮಾಡುವಂಥ ಮಂಚ, ಹಾಸಿಗೆ, ದಿಂಬು, ಫ್ಯಾನ್‌, ಮಗ್‌, ಬಕೆಟ್‌ ಅನ್ನು ಖರೀದಿಸುತ್ತೇವೆ. ಕೊರೊನಾ ಸಮಸ್ಯೆ ಮುಗಿದ ಮೇಲೆ ಅವುಗಳನ್ನು ಸ್ಯಾನಿಟೈಸ್‌ ಮಾಡಿ ಹಾಸ್ಟೆಲ್‌, ಶಾಲೆಗಳಿಗೆ ಕೊಡಬಹುದು. ಪುನರ್‌ ಬಳಕೆ ಮಾಡಲಾಗದ ಪರಿಕರಗಳನ್ನು ಬಾಡಿಗೆಗೆ ಪಡೆಯುವುದಾಗಿ ಹೇಳಿದರು.

‘ಕೋವಿಡ್‌ ನಿರ್ವಹಣೆ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೇ ತಲುಪಿಸಲಾಗುವುದು. ಲೆಕ್ಕ ಕೇಳಲು ಅವರು ವಿಧಾನಸೌಧಕ್ಕೆ ಬರುವ ಅಗತ್ಯವೇ ಇಲ್ಲ. ಭ್ರಷ್ಟಾಚಾರ ನಡೆಯಲು ಇದು ಕಾಂಗ್ರೆಸ್‌ ಸರ್ಕಾರ ಅಲ್ಲ. ಕೋವಿಡ್‌ ನಿರ್ವಹಣೆಗಾಗಿ ನಾವು ಇನ್ನೂ ₹ 400 ಕೋಟಿ ಖರ್ಚು ಮಾಡಿಲ್ಲ. ₹ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು