ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬುಕ್ ಬ್ರಹ್ಮ ಸಾಹಿತ್ಯೋತ್ಸವ ಸಂಪನ್ನ

ಭಾಷಾ ಬೆಸುಗೆಗೆ ವೇದಿಕೆ ಒದಗಿಸದ ಗೋಷ್ಠಿಗಳು | ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
Published 11 ಆಗಸ್ಟ್ 2024, 15:21 IST
Last Updated 11 ಆಗಸ್ಟ್ 2024, 15:21 IST
ಅಕ್ಷರ ಗಾತ್ರ

ಬೆಂಗಳೂರು: ಪರಸ್ಪರ ಕೊಡು–ಕೊಳ್ಳುವಿಕೆಯ ಮೂಲಕ ಭಾಷೆ ಮತ್ತು ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಹಾಗೂ ದಕ್ಷಿಣ ಭಾರತದ ಭಾಷೆಗಳ ಸಂಬಂಧವನ್ನು ಸಂಭ್ರಮಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ‘ಬುಕ್‌ ಬ್ರಹ್ಮ ಸಾಹಿತ್ಯೋತ್ಸವ’ ಭಾನುವಾರ ಸಂಪನ್ನವಾಯಿತು. 

ಕೋರಮಂಗಲದ ಸೇಂಟ್‌ ಜಾನ್ಸ್ ಸಭಾಂಗಣದಲ್ಲಿ ನಡೆದ ಈ ಉತ್ಸವಕ್ಕೆ ಸಾವಿರಾರು ಮಂದಿ ಸಾಹಿತ್ಯಾಸಕ್ತರು ಸಾಕ್ಷಿಯಾದದ್ದು ವಿಶೇಷ. ಸಾಹಿತ್ಯ, ಸಿನಿಮಾ, ಭಾಷೆ, ಸಾಮಾಜಿಕ ಮಾಧ್ಯಮ ಸೇರಿ ಹಲವು ವಿಷಯಗಳ ಬಗ್ಗೆ ಒಳನೋಟಗಳಿಂದ ಕೂಡಿದ ಚರ್ಚೆ–ಸಂವಾದಗಳಿಗೆ ಉತ್ಸವ ವೇದಿಕೆ ಕಲ್ಪಿಸಿತು. ‘ಮಂಟಪ’, ‘ಮಥನ’ ಹಾಗೂ ‘ಅಂಗಳ’ ಎಂಬ ಮೂರು ಮುಖ್ಯ ವೇದಿಕೆಗಳಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದ ಆಗುಹೋಗುಗಳ ಬಗ್ಗೆ ಒಂದೆಡೆ ಚಿಂತನ ಮಂಥನ ನಡೆದರೆ, ಇನ್ನೊಂದೆಡೆ ಇತ್ತೀಚಿನ ಕೃತಿಗಳ ಹೂರಣಗಳ ಬಗ್ಗೆ ಅವಲೋಕನ ನಡೆಯಿತು. 

ಹಿಂದೂಸ್ಥಾನಿ ಸಂಗೀತ, ಯಕ್ಷಗಾನ ತಾಳ–ಮದ್ದಳೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ನಗರದ ವಿವಿಧೆಡೆಯಿಂದ ಬಂದ ಸಾಹಿತ್ಯಾಸಕ್ತರು, ಬೆಳಿಗ್ಗೆಯಿಂದ ಸಂಜೆಯವರೆಗೆ ಉತ್ಸಾಹದಿಂದ ಗಹನವಾದ ಚರ್ಚೆಗಳನ್ನು ಆಲಿಸಿದರು. ದೇಶದ ವಿವಿಧೆಡೆಗಳಿಂದ ಬಂದಿದ್ದ ಸುಮಾರು 300 ವಿದ್ವಾಂಸರು, ಲೇಖಕರು ಹಂಚಿಕೊಂಡ ಹೊಳಹುಗಳ ಬೆಳಕಿನೊಂದಿಗೆ ಈ ಉತ್ಸವ ಕಳೆಗಟ್ಟಿತು. ತಮ್ಮಿಷ್ಟದ ಸಾಹಿತಿಗಳ ಮಾತುಗಳನ್ನು ಆಲಿಸಿದ ಅಭಿಮಾನಿ ಬಳಗ, ಪುಸ್ತಕಗಳಿಗೆ ಅವರ ಹಸ್ತಾಕ್ಷರಗಳನ್ನು ಪಡೆದುಕೊಂಡಿತು. 

ಉತ್ಸವದಲ್ಲಿ ಕನ್ನಡ ಭಾಷೆಯ ಜತೆಗೆ ತಮಿಳು, ಮಲಯಾಳ, ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳ ಆಯ್ಕೆ ಸಾಹಿತ್ಯ ಪ್ರೇಮಿಗಳಿಗೆ ಇದ್ದವು. ಪುಸ್ತಕಗಳ ಬಿಡುಗಡೆಗಾಗಿಯೇ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿತ್ತು. ಈ ವೇದಿಕೆಯಲ್ಲಿ ಯುವ ಬರಹಗಾರರೊಂದಿಗೆ ಚರ್ಚೆ, ಸಂವಾದಗಳೂ ನಡೆದವು. ಕಲಾ ಪ್ರದರ್ಶನವೂ ನೋಡುಗರ ಮೆಚ್ಚುಗೆಗೆ ವ್ಯಕ್ತವಾಯಿತು. 

ಚಿಣ್ಣರ ಕಲರವ 

ಮಕ್ಕಳಿಗೆ ಪ್ರತ್ಯೇಕವಾಗಿ ‘ಚಿಣ್ಣರ ಲೋಕ’ ರೂಪಿಸಲಾಗಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು, ಕಥೆಗಳನ್ನು ಹೇಳಿ ರಂಜಿಸಿದರು. ಚಿತ್ರಕಲೆ, ಕಥೆ ಹೇಳುವುದೂ ಸೇರಿ ವಿವಿಧ ಸ್ಪರ್ಧೆಗಳ ಜತೆಗೆ ಮನೋರಂಜನೆಯ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಮೂರು ದಿನಗಳ ಈ ಸಾಹಿತ್ಯ ಉತ್ಸವದ ಮೆರುಗನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿಸಿದವು. ಉತ್ಸವದ ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಂದ ‘ಭಾಷೆ ಬೇರೆಯಾದರೂ, ಭಾವವೊಂದೇ’ ಎಂಬ ಕಾವ್ಯ ಪ್ರಸ್ತುತಿ ನಡೆಯಿತು. ಬಳಿಕ ಮೇಘನಾ ಚಂದ್ರಮೌಳಿ ಅವರಿಂದ ‘ಕಾವ್ಯಾಭಿವ್ಯಕ್ತಿ’ ನೃತ್ಯ ಪ್ರದರ್ಶನ ಹಾಗೂ ಕೆರೆಮನೆ ಯಕ್ಷಗಾನ ಮಂಡಳಿ ಮೇಳದಿಂದ ‘ಪಂಚವಟಿ’ ಯಕ್ಷಗಾನ ಪ್ರದರ್ಶನ ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT