ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಕಾಡನ್ನು ಬೆಳೆಯಲು ಬಿಡಿ’: ಲೇಖಕಿ ವಿನಯಾ ಒಕ್ಕುಂದ

‘ಕನ್ನಡ ಪ್ರಜ್ಞೆಯ ಸುತ್ತಮುತ್ತ’ ಪುಸ್ತಕ ಬಿಡುಗಡೆ
Last Updated 2 ನವೆಂಬರ್ 2021, 6:14 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಪ್ರಜ್ಞೆ ಇಂದು ಬಹುದೊಡ್ಡ ತಲ್ಲಣಕ್ಕೆ ಒಳಗಾಗಿದೆ. ಕನ್ನಡ ಜ್ಞಾನದ ಮೂಲ ಎನ್ನುವ ಮುಖ್ಯ ನೆಲೆಯಿಂದ ನಾವು ದೂರ ಬಂದಿದ್ದೇವೆ.ಕನ್ನಡ ಎಂಬ ಕಾಡನ್ನು ಅದರ ಪಾಡಿಗೆ ಬೆಳೆಯಲು ಬಿಡಬೇಕೇ ಹೊರತು, ಅದನ್ನು ಬಂಧಿಸುವ ಅಥವಾ ನಾಶಪಡಿಸುವ ಕೆಲಸ ಮಾಡಬಾರದು’ ಎಂದುಲೇಖಕಿ ವಿನಯಾ ಒಕ್ಕುಂದ ತಿಳಿಸಿದರು.

ಕ್ರಿಯಾ ಪುಸ್ತಕ ಪ್ರಕಾಶನ ಸಂಸ್ಥೆಯು ಸೋಮವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ಡಿ.ಸಿ.ಗೀತಾ ಹಾಗೂ ನಾಗರೇಖಾ ಗಾಂವಕರ ಅವರ ಸಂಪಾದಕತ್ವದ ‘ಕನ್ನಡ ಪ್ರಜ್ಞೆಯ ಸುತ್ತಮುತ್ತ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಎನ್ನುವುದು ಬದುಕಿಗೆ ಬೇಕಿರುವ ವಿವೇಕದ ಸಂಕಥನ ಎಂಬುದನ್ನು ನಾವೆಲ್ಲ ಮರೆಯುತ್ತಿದ್ದೇವೆ. ಇದು, ಕನ್ನಡಕ್ಕೆ ಆಗುತ್ತಿರುವ ಬಹಳ ದೊಡ್ಡ ಧಕ್ಕೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕನ್ನಡವನ್ನು ವೈಭವೀಕೃತ, ಆದರ್ಶ ಹಾಗೂ ತಾಯಿ ಭುವನೇಶ್ವರಿಯ ನೆಲೆಗಳಲ್ಲಿ ಮಾತ್ರ ನೋಡುತ್ತಿದ್ದು, ಭುವನೇಶ್ವರಿಯ ಚಿತ್ರದಲ್ಲಿ ಆಗಬೇಕಿರುವ ಸರ್ವಧರ್ಮ ಸಹಿಷ್ಣುತೆಯ ಮರುರೂಪಣದ ಬಗ್ಗೆ ಯೋಚಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದು ನಮ್ಮೆದುರು ಇರುವ ದೊಡ್ಡ ಸವಾಲು’ ಎಂದು ಎಚ್ಚರಿಸಿದರು.

‘ರಾಜ್ಯೋತ್ಸವ ಬಂದಾಗ ಕಾರ್ಯಕ್ರಮಗಳು, ಹಾಡುಗಳು ಹಾಗೂ ಮನರಂಜನೆಗೆ ಮಾತ್ರ ಭಾಷೆಯನ್ನು ಉಳಿಸುತ್ತಿದ್ದೇವೆ. ಕನ್ನಡವನ್ನು ಜ್ಞಾನದ, ಅಧಿಕಾರದ ಹಾಗೂ ಅನ್ನದ ಭಾಷೆಯಾಗಿಸರ್ಕಾರದ ಪ್ರತಿನಿಧಿಗಳು ಏಕೆ ಬಿಂಬಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಕನ್ನಡದ ಆದ್ಯತೆ ಹಾಗೂ ಗೊಂದಲಗಳ ಬಗ್ಗೆ ಈ ಪುಸ್ತಕ ಪ್ರಶ್ನೆ ಎತ್ತುವಂತಿದೆ. ಕನ್ನಡ ಪ್ರಸ್ತುತದಲ್ಲಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆಯೂ ಪುಸ್ತಕದಲ್ಲಿನ ಬರಹಗಳು ಬೆಳಕು ಚೆಲ್ಲಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪ್ರಾಧ್ಯಾಪಕ ಮೋಹನ ಚಂದ್ರಗುತ್ತಿ ಅವರು ಪುಸ್ತಕದ ಪರಿಚಯ ಮಾಡಿಕೊಟ್ಟರು. ಪುಸ್ತಕದ ಸಂಪಾದಕರಾದಡಿ.ಸಿ.ಗೀತಾ ಹಾಗೂ ನಾಗರೇಖಾ ಗಾಂವಕರ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿದರು. ಕೆ.ಎಸ್.ವಿಮಲಾ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT