ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು | ವರ್ಷ ಐದು ಕಳೆದರೂ ತಲೆ ಎತ್ತುತ್ತಿಲ್ಲ ಸೂರು

ನಾಡಪ್ರಭು ಕೆಂಪೇಗೌಡ ಬಡಾವಣೆ: ಕಾಮಗಾರಿ ವಿಳಂಬ – ನಿವೇಶನದಾರರ ಕಳವಳ
Last Updated 16 ಆಗಸ್ಟ್ 2021, 2:36 IST
ಅಕ್ಷರ ಗಾತ್ರ

ಬೆಂಗಳೂರು: ಆಳೆತ್ತರ ಬೆಳೆದ ಹುಲ್ಲು, ನಡುವೆ ಮೇವ ದನಗಳು, ತಗ್ಗು ದಿಣ್ಣೆಗಳಿಂದ ಕೂಡಿದ ಈ ದೃಶ್ಯಗಳನ್ನು ನೋಡಿ ಇದೇನಪ್ಪಾ ಯಾವುದೋ ಗದ್ದೆಯಲ್ಲಿ ಇದ್ದೇವಾ ಎಂದು ಭಾವಿಸಬೇಡಿ. ಇದು ಯಾವುದೋ ಗದ್ದೆಯೋ, ಕೆರೆ ಏರಿಯೂ ಅಲ್ಲ! ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ದೃಶ್ಯಗಳಿವು.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವಿನ ಕೆಂಚನಪುರ, ಸೀಗೇಹಳ್ಳಿ, ಕನ್ನಳ್ಳಿ, ಕೊಡಿಗೇಹಳ್ಳಿ, ಮಂಗನಹಳ್ಳಿ, ರಾಮಸಂದ್ರ, ಸೂಲಿಕೆರೆ, ಕೊಮ್ಮಘಟ್ಟ, ಕೆ.ಕೃಷ್ಣಸಾಗರ, ಚಲ್ಲಘಟ್ಟ, ಭೀಮನಕುಪ್ಪೆ, ಅರ್ಚಕರ ಬಡಾವಣೆ ಸೇರಿದಂತೆ 10ಕ್ಕೂ ಅಧಿಕ ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಿಕೊಂಡು ಬಿಡಿಎ ಈ ಬಡಾವಣೆಯನ್ನು ನಿರ್ಮಿಸುತ್ತಿದೆ. ವಿವಿಧ ಅಳತೆಗಳ ಒಟ್ಟು 23,119 ಮಧ್ಯಂತರ ನಿವೇಶನಗಳನ್ನು ಹಂಚಿಕೆ ಮಾಡಿದೆ.

2010ರಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದರೂ ನಿವೇಶನ ರಚಿಸುವ ಕೆಲಸ ಶುರುವಾಗಿದ್ದು 2015ರ ಬಳಿಕ. ಇಲ್ಲಿ ಒಟ್ಟು ಒಂಬತ್ತು ಬ್ಲಾಕ್‌ಗಳಲ್ಲಿ ನಿವೇಶನಗಳನ್ನು ರಚಿಸಿ ಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬಿಡಿಎ ಬಡಾವಣೆಗಳಲ್ಲಿ ನಿವೇಶನ ಪಡೆದವರು ಐದು ವರ್ಷಗಳ ಒಳಗೆ ಮನೆ ನಿರ್ಮಿಸಬೇಕು. ಇಲ್ಲದಿದ್ದರೆ ಬಿಡಿಎ ಅವರಿಗೆ ದಂಡ ವಿಧಿಸಬೇಕು. ಅಚ್ಚರಿಯೆಂದರೆ 2016ರಲ್ಲಿ ಮೊದಲ ಹಂತದಲ್ಲಿ ನಿವೇಶನಗಳು ಹಂಚಿಕೆ ಆಗಿದ್ದರೂ ಇಲ್ಲಿ ಇನ್ನೂ ಸೂರುಗಳು ತಲೆ ಎತ್ತುತ್ತಿಲ್ಲ. ಈ ಬಡಾವಣೆಗೆ ಬಿಡಿಎ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸದಿರುವುದೇ ಇದಕ್ಕೆ ಕಾರಣ.

ಈ ಬಡಾವಣೆಯ 1,2,3,4ನೇಬ್ಲಾಕ್‌ಗಳಿಗೆ ಹಾಗೂ ಬ್ಲಾಕ್‌ 5ರ ‘ಎ’ ವಲಯದ ಕಾಮಗಾರಿಗಳನ್ನು ಎಲ್‌ ಆ್ಯಂಡ್‌ ಟಿ ಕಂಪನಿ ನಿರ್ವಹಿಸುತ್ತದೆ. ಈ ಕಂಪನಿ 2021ರ ಜೂನ್‌ವರೆಗೆ ಶೇ 37.9ರಷ್ಟನ್ನು ಮಾತ್ರ ಅನುಷ್ಠಾನಗೊಳಿಸಿದೆ. ಬಡಾವಣೆಯ 6, 7, 8, 9 ನೇ ಬ್ಲಾಕ್‌ಗಳ ಹಾಗೂ ಐದನೇ ಬ್ಲಾಕ್‌ನ ‘ಬಿ’ ವಲಯದ ಕಾಮಗಾರಿಗಳನ್ನು ಎಸ್‌ಪಿಎಂಎಲ್‌ ಅಮೃತಾ ಕನ್‌ಸ್ಟ್ರಕ್ಷನ್ಸ್‌ ಕಂಪನಿ ನಿರ್ವಹಿಸುತ್ತಿದ್ದು, ಶೇ 26.8ರಷ್ಟನ್ನು ಮಾತ್ರ ಅನುಷ್ಠಾನಗೊಳಿಸಿದೆ.

ಬಹುತೇಕ ಬ್ಲಾಕ್‌ಗಳಲ್ಲಿ ಈಗಲೂ ಕಚ್ಛಾ ರಸ್ತೆಗಳನ್ನು ಮಾತ್ರ ರಚಿಸಲಾಗಿದೆ. ಮೂಲಸೌಕರ್ಯ ಕೊಳವೆಗಳನ್ನು ಅಳವಡಿಸುವ ಕಾರ್ಯ ಕೆಲವೆಡೆ ಮಾತ್ರ ಪೂರ್ಣಗೊಂಡಿದೆ. ಯಾವುದೇ ಬ್ಲಾಕ್‌ಗೂ ವಿದ್ಯುತ್‌ ಸಂ‍ಪರ್ಕ ಕಲ್ಪಿಸಿಲ್ಲ. ನೀರಿನ ತೊಟ್ಟಿಗಳ ಕಾಮಗಾರಿಗಳೂ ಈಗಷ್ಟೇ ನಡೆಯುತ್ತಿವೆ. ನಿರ್ಮಾಣವಾಗಬೇಕಾದ 5 ವಿದ್ಯುತ್‌ ಸರಬರಾಜು ಉಪಕೇಂದ್ರಗಳಲ್ಲಿ ಒಂದೂ ಪೂರ್ಣಗೊಂಡಿಲ್ಲ. ಕೊಮ್ಮಘಟ್ಟದಲ್ಲಿ ಒಂದು ಉಪಕೇಂದ್ರದ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ. 1ರಿಂದ 8ನೇ ಬ್ಲಾಕ್‌ವರೆಗೆ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿ‍ಪಿ) ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ 9ನೇ ಬ್ಲಾಕ್‌ನಲ್ಲಿ ಎಸ್‌ಟಿಪಿ ಕಾಮಗಾರಿಯೇ ಆರಂಭವಾಗಿಲ್ಲ,

ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ, ‘ಕೋವಿಡ್‌ ಬಂದಿದ್ದರಿಂದ ಕಾಮಗಾರಿಗೆ ಸ್ವಲ್ಪ ಹಿನ್ನಡೆ ಆಗಿದೆ. ಕುಡಿಯುವ ನೀರು ಪೂರೈಕೆ, ವಿದ್ಯುದೀಕರಣ ಕಾಮಗಾರಿಗಳು ನಡೆಯುತ್ತಿವೆ. ನೀರಿನ ಕೊಳವೆ ಹಾಗೂ ಒಳಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕವೇ ರಸ್ತೆಗಳಿಗೆ ಡಾಂಬರ್‌ ಹಾಕಲು ಸಾಧ್ಯ. ರಸ್ತೆಗಳ ನಿರ್ಮಾಣವೂ ಪ್ರಗತಿಯಲ್ಲಿದೆ. 7 ಸಾವಿರ ಮನೆಗಳಾಗುವವರೆಗೆ ಒಂದು ವಿದ್ಯುತ್‌ ಉಪಕೇಂದ್ರ ಸಾಕು. ಇದಕ್ಕೆ ಟೆಂಡರ್‌ ಕರೆದಿದ್ದೇವೆ. ಹಂತ ಹಂತವಾಗಿ ವಿದ್ಯುತ್‌ ಉಪಕೇಂದ್ರಗಳ ಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಈ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳು ವಿಳಂಬವಾಗು ತ್ತಿರುವ ಬಗ್ಗೆ ಎನ್‌ಪಿಕೆಎಲ್ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ) ದೂರು ನೀಡಿದೆ. 2021ರ ಡಿಸೆಂಬರ್‌ ಒಳಗೆ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ರೇರಾಕ್ಕೆ ಬಿಡಿಎ ವಾಗ್ದಾನ ನೀಡಿದೆ. ಆದರೆ, ಇಲ್ಲಿನ ಪ್ರತಿಯೊಂದು ಬ್ಲಾಕ್‌ಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಖುದ್ದಾಗಿ ಅವಲೋಕಿಸಿದಾಗ ಅವು ಗಡುವಿನೊಳಗೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಕನಿಷ್ಠ ಪಕ್ಷ ಇಲ್ಲಿ ಮನೆ ಕಟ್ಟುವುದಕ್ಕೆ ಅಗತ್ಯವಿರುವಷ್ಟು ಸೌಕರ್ಯಗಳು ಸಿಗುವ ಭರವಸೆಯೂ ಉಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸುತ್ತಾರೆ ನಿವೇಶನದಾರರು.

ವಸ್ಥುಸ್ಥಿತಿ ಹೀಗಿದ್ದರೂ, ‘ಗುತ್ತಿಗೆದಾರರು ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸುತ್ತಾರೆ’ ಎಂದು ಬಿಡಿಎ ಆಯುಕ್ತ ರಾಜೇಶ್ ಗೌಡ ವಿಶ್ವಾಸ ವ್ಯಕ್ತಪಡಿಸುತ್ತಾರೆ. ನಿವೇಶನದಾರರು ಇಟ್ಟಿರುವ ವಿಶ್ವಾಸವನ್ನು ಬಿಡಿಎ ಉಳಿಸಿಕೊಳ್ಳುತ್ತದೆಯೇ ಕಾದು ನೋಡಬೇಕಿದೆ.

‘ಬಿಡಿಎ ದಂಡ ಪಾವತಿ ಮಾಡಬೇಕಾದೀತು’

ಬಿಡಿಎ ತನ್ನ ಯೋಜನೆಗಳನ್ನು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಅನುಷ್ಠಾನಗೊಳಿಸಬೇಕಿತ್ತು. ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯನ್ನೂ ಬಿಡಿಎ ಗಂಭೀರವಾಗಿ ಪರಿಗಣಿಸಿಲ್ಲ. ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಐದು ವರ್ಷಗಳ ಬಳಿಕವೂ ಮೂಲಸೌಕರ್ಯ ಕಲ್ಪಿಸಿಲ್ಲ. ರೇರಾಕ್ಕೆ ನೀಡಿದ ವಾಗ್ದಾನದಂತೆ ಸಕಾಲದಲ್ಲಿ ಯೋಜನೆಯನ್ನು ಪೂರ್ಣಗೊಳಿಸದೇ ಹೋದರೆ ನಿವೇಶನದಾರರಿಗೆ ಬಿಡಿಎಯೇ ದಂಡ ಪಾವತಿ ಮಾಡಬೇಕಾಗುತ್ತದೆ.

- ಶ್ರೀಧರ್‌ ನುಗ್ಗೇಹಳ್ಳಿ,ಎನ್‌ಪಿಕೆಎಲ್‌ ನಿವೇಶನದಾರರ ಮುಕ್ತ ವೇದಿಕೆ ಅಧ್ಯಕ್ಷ

‘ಕಾಮಗಾರಿ ಪ್ರಗತಿ ಸಾಲದು’

ನೀಲನಕ್ಷೆ ನೋಡಿದರೆ ಇದು ಮಾದರಿ ಬಡಾವಣೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಅದರ ಅನುಷ್ಠಾನದಲ್ಲಿ ಬಿಡಿಎ ವಿಫಲವಾಗಿದೆ. ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಏನೇನೂ ಸಾಲದು. ಬ್ಲಾಕ್‌ 6ರಲ್ಲಿ ಶೇ 10ರಷ್ಟೂ ಕಾಮಗಾರಿಗಳಾಗಿಲ್ಲ

- ಎಂ.ಅಶೋಕ್‌,ಎನ್‌ಪಿಕೆಎಲ್‌ ನಿವೇಶನದಾರರ ಮುಕ್ತ ವೇದಿಕೆಯ ಕಾರ್ಯದರ್ಶಿ

‘ಮನೆ ನಿರ್ಮಾಣ ವೆಚ್ಚ ಜಾಸ್ತಿ ಆಗಲಿದೆ’

ಬಾಡಿಗೆ ಮನೆಯಲ್ಲಿರುವ ನಮ್ಮಂಥವರು ಈಗಾಗಲೇ ನಿವೇಶನ ಖರೀದಿಗೆ ‍ಪಡೆದ ಸಾಲದ ಬಡ್ಡಿಯನ್ನೂ ಕಟ್ಟುತ್ತಿದ್ದೇವೆ. ಸಾಮಗ್ರಿ ದರ ಏರಿಕೆ ಆಗುತ್ತಿದೆ. ಮೂಲಸೌಕರ್ಯ ವಿಳಂಬವಾದಷ್ಟೂ ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ ಜಾಸ್ತಿ ಆಗುತ್ತಲೇ ಸಾಗುತ್ತದೆ.

- ಎ.ಎಸ್‌.ಸೂರ್ಯಕಿರಣ್‌,ಎನ್‌ಪಿಕೆಎಲ್‌ ನಿವೇಶನದಾರರ ಮುಕ್ತ ವೇದಿಕೆಯ ವಕ್ತಾರ

‘ಹಸಿರೀಕರಣಕ್ಕೆ ಸಿಗಲಿ ಆದ್ಯತೆ’

ಈ ಬಡಾವಣೆಗಾಗಿ 2 ಲಕ್ಷಕ್ಕೂ ಅಧಿಕ ಗಿಡ ಮರಗಳನ್ನು ಕಡಿಯಲಾಗಿದೆ. ಈ ಬಡಾವಣೆಯ ಹಸಿರೀಕರಣಕ್ಕೂ ಬಿಡಿಎ ಆದ್ಯತೆ ನೀಡಬೇಕು. ಸಾಧ್ಯವಿರುವ ಕಡೆಗಳಲ್ಲೆಲ್ಲ ಗಿಡಗಳನ್ನು ಬೆಳೆಸಬೇಕು

- ಸಂಜೀವ,ನಿವೇಶನದಾರರು

‘ನಾಲ್ಕನೇ ಬ್ಲಾಕ್‌ಗೆ ದೊಡ್ಡ ರಸ್ತೆಯೇ ಇಲ್ಲ’

ಬಡಾವಣೆಯ ನಾಲ್ಕನೇ ಬ್ಲಾಕ್‌ನಲ್ಲಿ ಇಲ್ಲಿಗೆ ಸಿಟಿ ಬಸ್‌ ಬರಲು ಸಾಧ್ಯವಾಗುವಂತಹ 30 ಅಡಿಗಿಂತ ಅಗಲದ ರಸ್ತೆಯೇ ಇಲ್ಲ. ರಾಜಕಾಲುವೆ ಪಕ್ಕದಲ್ಲಿ ಅಗಲವಾದ ರಸ್ತೆ ನಿರ್ಮಿಸಬೇಕು.

- ಪದ್ಮಾ ಪ್ರಸಾದ್‌,ಬಡಾವಣೆಯ ನಿವೇಶನದಾರರು

‘ನಿವೇಶನ ಗುರುತಿಸಲಾಗುತ್ತಿಲ್ಲ’

ಮೂಲಸೌಕರ್ಯ ಕಾಮಗಾರಿ ಕುಂಠಿತವಾಗಿರುವುದು ಮಾತ್ರವಲ್ಲ, ನಮ್ಮ ನಿವೇಶನಗಳು ಎಲ್ಲಿವೆ ಎಂದೇ ತಿಳಿಯುತ್ತಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ನಿವೇಶನ ಖರೀದಿಸಿದರೂ ಇಲ್ಲಿ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಿವೇಶನದಾರರ ಅಳಲು.

‘ಬಿಡಿಎ ಬಡಾವಣೆಯಲ್ಲಿ ನಿವೇಶನಕ್ಕಾಗಿ 1987ರಿಂದ ಅರ್ಜಿ ಹಾಕುತ್ತಲೇ ಇದ್ದೆವು. 2016ರಲ್ಲಿ ನಿವೇಶನ ಹಂಚಿಕೆ ಮಾಡಿದ ಬಿಡಿಎ ಎರಡು ವರ್ಷಗಳೊಳಗೆ ಮನೆಕಟ್ಟುವಂತೆ ಒತ್ತಡ ಹಾಕಿತ್ತು. ಇಲ್ಲಿ ನೋಡಿದರೆ ನಮ್ಮ ನಿವೇಶನ ಯಾವುದೆಂದೇ ತಿಳಿಯದಷ್ಟು ಗಿಡ–ಗಂಟಿಗಳು ಬೆಳೆದಿವೆ’ ಎಂದು ಜಿ.ಕೃಷ್ಣಯ್ಯ ಹಾಗೂ ಮಹಾಲಕ್ಷ್ಮಿ ಬೇಸರ ತೋಡಿಕೊಂಡರು.

ಇಲ್ಲಿನ 1ನೇ ಬ್ಲಾಕ್‌ನ ‘ಎಲ್‌’ ಸೆಕ್ಟರ್‌ ಹಾಗೂ 2ನೇ ಬ್ಲಾಕ್‌ನ ‘ಬಿ’ ಮತ್ತು ‘ಎಚ್‌’ ಸೆಕ್ಟರ್‌ಗಳ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಇದರಿಂದಾಗಿ ಮೂಲಸೌಕರ್ಯ ಕಾಮಗಾರಿ ನಡೆಸುವುದೂ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ 2 ಅಡಿಪಾಯ ತೆಗೆಯುವಷ್ಟರಲ್ಲಿ ನೀರು ಬರುತ್ತದೆ ಎಂಬುದು ನಿವೇಶನದಾರರು ಅಳಲು.

ನಿವೇಶನದಾರರಿಗೆ ಹತ್ತು ಹಲವು ಚಿಂತೆ

ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ನಿಶ್ಚಿಂತರಾಗುವ ಕನಸು ಹೊತ್ತಿದ್ದ ನಿವೇಶನದಾರರನ್ನು ಹತ್ತು ಹಲವು ಚಿಂತೆಗಳು ಕಾಡುತ್ತಿವೆ. ಸಾಲ ಮಾಡಿ ನಿವೇಶನ ಖರೀದಿಸಿದ್ದೇವೆ. ಬೇಗ ಮನೆ ನಿರ್ಮಿಸಿ ಇಲ್ಲೇ ವಾಸ ಮಾಡುವಾಸೆ. ಇಲ್ಲಿ ಮೂಲ ಸೌಕರ್ಯ ಸಿಗದೇ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈಗ ಮನೆ ಬಾಡಿಗೆ ಹಾಗೂ ನಿವೇಶನ ಖರೀದಿಗೆ ಮಾಡಿದ ಸಾಲದ ಕಂತುಗಳೆರಡನ್ನೂ ಪಾವತಿಸಬೇಕಿದೆ. ಬಿಡಿಎ ಆದಷ್ಟು ಬೇಗ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ನಿವೇಶನದಾರರ ಒತ್ತಾಯ

ಇಲ್ಲೂ ಭೂಸ್ವಾಧೀನ ಕಗ್ಗಂಟು

ಈ ಬಡಾವಣೆಗೆ ಬಿಡಿಎ ಒಟ್ಟು 4,043 ಎಕರೆ 27 ಗುಂಟೆ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ 600 ಎಕರೆ 17 ಗುಂಟೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳಿವೆ. ಭೂಸ್ವಾಧೀನ ಪೂರ್ಣಗೊಳ್ಳದ ಕಾರಣ ಕೆಲವೆಡೆ ನಿವೇಶನಗಳಿಗೆ ಸಂಪರ್ಕ ರಸ್ತೆ ಹಾಗೂ ಇತರ ಮೂಲಸೌಕರ್ಯ ಕಲ್ಪಿಸುವುದು ಕಗ್ಗಂಟಾಗಿದೆ.

‘ಡಿಸೆಂಬರ್‌ವರೆಗೂ ಇದೆ ಕಾಲಾವಕಾಶ’

ಕೋವಿಡ್‌ ಕಾರಣದಿಂದ ಕಾಮಗಾರಿ ಎರಡು– ಮೂರು ತಿಂಗಳುಗಳಷ್ಟು ವಿಳಂಬವಾಗಿರಬಹುದು. ಕಾಮಗಾರಿ ಪೂರ್ಣಗೊಳಿಸಲು 2021ರ ಡಿಸೆಂಬರ್‌ವರೆಗೆ ಕಾಲಾವಕಾಶ ಇದೆ. ಗುತ್ತಿಗೆದಾರರು ಈ ಗಡುವಿನೊಳಗೆ ಎಲ್ಲ ಕೆಲಸ ಪೂರ್ಣಗೊಳಿಸಲೇಬೇಕು

- ಎಂ.ಬಿ.ರಾಜೇಶ್‌ ಗೌಡ,ಬಿಡಿಎ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT