ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ‘ಜೀವಂತಿಕೆ’– ಪೂರಕವಾಗಿಲ್ಲ ಪುನರುಜ್ಜೀವನ

Last Updated 27 ಡಿಸೆಂಬರ್ 2020, 21:06 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಸಾವಿರ ಕೆರೆಗಳ ಊರು ಎಂಬ ಹೆಗ್ಗಳಿಕೆ ಪಡೆದಿದ್ದ ಬೆಂಗಳೂರಿನಲ್ಲಿ ಸರ್ಕಾರದ ಪ್ರಕಾರ ಈಗ ಉಳಿದಿರುವುದು 210 ಕೆರೆಗಳು ಮಾತ್ರ. ಇವುಗಳಲ್ಲಿ 65 ಕೆರೆಗಳನ್ನು ಬಿಬಿಎಂಪಿ ಕಳೆದೊಂದು ದಶಕದಲ್ಲಿ ಪುನರುಜ್ಜೀವನಗೊಳಿಸಿದೆ. ಈ ಪುನರುಜ್ಜೀವನ ಕಾರ್ಯದಿಂದ ಈ ಜಲಕಾಯಗಳು ಮರಳಿ ‘ಜೀವಂತಿಕೆ’ ಪಡೆದಿವೆಯೇ? ಈ ಪ್ರಶ್ನೆಗೆ ಉತ್ತರ ಮಾತ್ರ ನಿರಾಶದಾಯಕ. ಪುನರುಜ್ಜೀವನಗೊಂಡ ಬಹುತೇಕ ಕೆರೆಗಳಲ್ಲಿ ‘ಜೈವಿಕ ವ್ಯವಸ್ಥೆ’ ಮರುಸ್ಥಾಪನೆ ಮರೀಚಿಕೆಯಾಗಿಯೇ ಉಳಿದಿದೆ.

ಕೆ.ಆರ್‌.ಪುರ ಭಟ್ರಹಳ್ಳಿ ಸಮೀಪದ ಸೀಗೇಹಳ್ಳಿ ಕೆರೆಯ ಉದಾಹರಣೆಯನ್ನು ನೋಡಿ. ಬಿಬಿಎಂಪಿ ಈ ಕೆರೆಯನ್ನು 2017–18ರಲ್ಲಿ ₹ 6.25 ಕೋಟಿ ಪುನರುಜ್ಜೀವನಗೊಳಿಸಿದೆ. ಕಳೆದ ತಿಂಗಳು ಈ ಕೆರೆಯ ನೀರು ಕಲುಷಿತಗೊಂಡ ಬಗ್ಗೆ ಕೂಗೆಬ್ಬಿತು.

‘31 ಎಕರೆ 19 ಗುಂಟೆ ವಿಸ್ತಾರದ ಈ ಕೆರೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಕೆರೆಗೆ ಒಳಚರಂಡಿಯ ಕೊಳಚೆ ನೀರು ಸೇರದಂತೆ ತಡೆಯಲು ತಡೆಗೋಡೆ ನಿರ್ಮಿಸಲಾಗಿದೆ. ಬೇಲಿಯನ್ನೂ ಹಾಕಲಾಗಿದೆ. ಆದರೆ, ಇಲ್ಲಿ ಮಳೆ ನೀರು ಮತ್ತು ಕೊಳಚೆ ನೀರು ಹರಿಯಲು ಪ್ರತ್ಯೇಕ ಮಾರ್ಗಗಳಿಲ್ಲ. ಮಳೆ ಬಂದಾಗ ಅಥವಾ ಕೊಳಚೆ ನೀರಿನ ಹರಿವು ಜಾಸ್ತಿಯಾದಾಗ, ಕೊಳಚೆ ನೀರು ತಡೆಗೋಡೆ ದಾಟಿ ಕೆರೆಯನ್ನು ಸೇರುತ್ತಿದೆ’ ಎಂದು ದೂರುತ್ತಾರೆ ’ನೀರಿನ ಹಕ್ಕಿಗಾಗಿನ ಜನಾಂದೋಲನ ಕರ್ನಾಟಕ‘ ಸಂಘಟನೆಯ ರಾಜ್ಯ ಸಂಚಾಲಕ ಈಶ್ವರಪ್ಪ ಎಂ.

ಈ ಕೆರೆಯ ನೀರನ್ನು ಈಶ್ವರಪ್ಪ ಅವರು ಸ್ಕೆಲೀನ್‌ ಎನರ್ಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದಾರೆ. ಕೆರೆಯ ನೀರಿನಲ್ಲಿ ಕರಗಿರುವ ಆಮ್ಲಜನಕ ಪ್ರಮಾಣ 4 ಪಿಪಿಎಂಗಿಂತ ಕಡಿಮೆ ಇರಬಾರದು. 5ರಿಂದ 15 ಪಿಪಿಎಂನ ಒಳಗಿರಬೇಕು. ಆದರೆ, ಈ ಕೆರೆಯಲ್ಲಿ ಐದು ಕಡೆ ಸಂಗ್ರಹಿಸಿದ ಮಾದರಿಗಳಲ್ಲೂ ಇದರ ಪ್ರಮಾಣ ಇದಕ್ಕಿಂತ ಕಡಿಮೆಯೇ ಇದೆ. 2.3 ಪಿಪಿಎಂಗಿಂತ ಹೆಚ್ಚು ಆಮ್ಲಜನಕ ಎಲ್ಲೂ ಕಂಡು ಬಂದಿಲ್ಲ.

ನೀರಿನಲ್ಲಿ ಕರಗಿರುವ ಘನಪದಾರ್ಥವು 500 ಪಿಪಿಎಂಗಿಂತ ಕಡಿಮೆ ಇರಬೇಕು. ಕೆರೆಯಲ್ಲಿ ಒಂದು ಕಡೆ ಈ ಪ್ರಮಾಣ 518 ಇತ್ತು. ಗಡಸುತನ 50– 200 ಪಿಪಿಎಂನಷ್ಟಿರಬೇಕು. ಆದರೆ, ಇದು ಎಲ್ಲ ಕಡೆಯೂ 400 ಪಿಪಿಎಂಗಿಂತ ಜಾಸ್ತಿ ಇತ್ತು. ಕರಗಿರುವ ರಾಸಾಯನಿಕಗಳ ಪ್ರಮಾಣ (ಸಿಒಡಿ) 20– 250 ಪಿಪಿಎಂನಷ್ಟಿರಬಹುದು. ಆದರೆ, ಕೆರೆಯಲ್ಲಿ ಸಂಗ್ರಹಿಸಿದ ಎಲ್ಲ ಮಾದರಿಗಳಲ್ಲೂ ಇದರ ಪ್ರಮಾಣ 250 ಪಿಪಿಎಂಗಿಂತ ಜಾಸ್ತಿ ಇತ್ತು. ಒಂದು ಕಡೆ 979 ಪಿಪಿಎಂ ವರೆಗೂ ಇತ್ತು. ಮಲದಲ್ಲಿ ಕಂಡು ಬರುವ ಕೋಲಿಫಾರ್ಮ್‌ ಹಾಗೂ ವಿಷಮ ಶೀತ ಜ್ವರಕ್ಕೆ (ಟೈಫಾಯಿಡ್‌) ಕಾರಣವಾಗುವ ಸಾಲ್ಮೊನೆಲ್ಲ ಟೈಫಿ ಬ್ಯಾಕ್ಟೀರಿಯಾಗಳೂ ಕಂಡು ಬಂದಿವೆ. ಈ ಕೆರೆಯ ಜೈವಿಕ ವ್ಯವಸ್ಥೆ ಆರೋಗ್ಯಕರವಾಗಿಲ್ಲ ಎಂಬುದನ್ನು ಈ ಫಲಿತಾಂಶಗಳು ಸಾರಿ ಹೇಳುತ್ತವೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಜಲಕಾಯಗಳ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತದೆ. ಅದರ ಫಲಿತಾಂಶದ ಆಧಾರದಲ್ಲಿ ನೀರನ್ನು ಎ (ಸಂಸ್ಕರಣೆಗೊಳಪಡಿಸದೆಯೇ ಕುಡಿಯಬಹುದು), ಬಿ (ಸ್ನಾನಕ್ಕೆ ಬಳಸಬಹುದು), ಸಿ (ಸಂಸ್ಕರಣೆಗೊಳಪಡಿಸಿ ಕುಡಿಯಬಹುದು), ಡಿ (ಜೀವಿವೈವಿಧ್ಯ, ಮೀನುಗಾರಿಗೆಗ ಬಳಸಬಹುದು) ಹಾಗೂ ಇ (ನೀರಾವರಿ, ಕೈಗಾರಿಕೆಗಳಲ್ಲಿ ಕೂಲಿಂಗ್‌ ನಿಯಂತ್ರ ಕಸ ವಿಲೇವಾರಿಗೆ ಮಾತ್ರ ಬಳಸಬಹುದು) ಎಂದು ವರ್ಗೀಕರಿಸುತ್ತದೆ.

ಕೆಎಸ್‌ಪಿಸಿಬಿಯು ಕೆರೆಗಳ ಗುಣಮಟ್ಟದ ಬಗ್ಗೆ 2019ರ ಏಪ್ರಿಲ್‌ನಿಂದ 2020ರ ಜುಲೈವರೆಗೆ ನಡೆಸಿರುವ ಪರೀಕ್ಷೆಗಳ ಫಲಿತಾಂಶಗಳನ್ನು ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರಾಘವೇಂದ್ರ ಬಿ.ಪಚ್ಚಾಪುರ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಬಿಬಿಎಂಪಿ ಅಭಿವೃದ್ಧಿಪಡಿಸಿರುವ 65 ಕೆರೆಗಳಲ್ಲಿ 15 ಕೆರೆಗಳ ನೀರಿ ಪರೀಕ್ಷಾ ಫಲಿತಾಂಶಗಳು ಚಿಂತಾಜನಕವಾಗಿವೆ. ದುರಸ್ತಿಯ ಬಳಿಕವೂ ಈ ಕೆರೆಗಳ ಆರೋಗ್ಯ ಹೇಗಿದೆ ಎಂಬುದಕ್ಕೆ ಈ ಫಲಿತಾಂಶಗಳು ಬೊಟ್ಟು ಮಾಡುತ್ತಿವೆ. ಅವರು ಇಬ್ಬಲೂರು, ಕಾಳೇನ ಅಗ್ರಹಾರ, ಸಿಂಗಸಂದ್ರ, ದೊಡ್ಡನೆಕ್ಕುಂದಿ, ಗರುಡಾಚಾರ್‌ಪಾಳ್ಯ, ದೇವರಬೀಸನಹಳ್ಳಿ, ವಿಭೂತಿಪುರ, ವಿಶ್ವನೀಡಂ, ನಾಯಂಡಹಳ್ಳಿ, ಉಲ್ಲಾಳ, ಜಕ್ಕೂರು, ನರಸೀಪುರ, ರಾಚೇನಹಳ್ಳಿ, ಕೋಗಿಲು ಕೆರೆಗಳ ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ಅಧ್ಯಯನ ನಡೆಸಿದ್ದರು.

‘15 ಕೆರೆಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಅವುಗಳಲ್ಲಿ ಶೇ 66ರಷ್ಟು ಮಾದರಿಗಳ ಗುಣಮಟ್ಟವೂ ಡಿ ಎಂದು ಹಾಗೂ ಶೇ 34ರಷ್ಟು ಮಾದರಿಗಳ ಗುಣಮಟ್ಟ ‘ಇ’ ಎಂದು ಬಂದಿದೆ. ಸಂಗ್ರಹಿಸಲಾದ ಎಲ್ಲ ಮಾದರಿಗಳೂ ಅತೃಪ್ತಿಕರವಾಗಿ ಇವೆ’ ಎಂದು ಹೇಳುತ್ತಾರೆ ರಾಘವೇಂದ್ರ.

ಈ ಕೆರೆಗಳು ಈ ಸ್ಥಿತಿ ತಲುಪುವುದಕ್ಕೆ ಅವುಗಳ ದುರಸ್ತಿ ವೇಳೆ ಅನುಸರಿಸಿರುವ ವಿನ್ಯಾಸದಲ್ಲಿ ಲೋಪವಿರುವುದೂ ಕಾರಣ. ಕೆರೆಗಳಿಗೆ ಮತ್ತು ರಾಜಕಾಲುವೆಗಳಿಗೆ ಕಸ ಎಸೆಯುವುದನ್ನು ತಡೆಯುವ ಪರಿಣಾಮಕಾರಿ ವ್ಯವಸ್ಥೆಯೂ ಇಲ್ಲ. ಈ ನೀರಿನಲ್ಲಿರುವ ಮಾಲಿನ್ಯಕಾರಕಗಳು ಅದರ ಜೀವವೈವಿಧ್ಯವನ್ನು ಹಾಗೂ ಪರಿಸರ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ ಎಂಬುದು ಅವರ ದೂರು.

ದುರಸ್ತಿ ಬಳಿಕವೂ ಕೆರೆಗಳ ಜೀವಂತಿಕೆಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲವಾದರೆ ಈ ಉದ್ದೇಶಕ್ಕಾಗಿ ಪ್ರತಿವರ್ಷ ಕೋಟಿಗಟ್ಟಲೆ ವೆಚ್ಚ ಮಾಡಿ ಪ್ರಯೋಜನವೇನು ಎಂಬುದು ಕೆರೆಗಳ ಸಂರಕ್ಷಣೆಯ ಕಳಕಳಿ ಹೊಂದಿರುವ ಹೋರಾಟಗಾರರ ಪ್ರಶ್ನೆ.

ನಗರದಲ್ಲಿರುವ ಎಲ್ಲ ಕೆರೆಗಳ ನೀರಿನ ಗುಣಮಟ್ಟವನ್ನು ಬಿಬಿಎಂಪಿ ಸ್ವಯಂ ಅಧ್ಯಯನಕ್ಕೆ ಒಳಪಡಿಸಬೇಕು. ಇನ್ನು ಮುಂದೆ ಕೆರೆಗಳನ್ನು ಅಭಿವೃದ್ಧಿಪಡಿಸುವಾಗಲಾದರೂ ಈ ಹಿಂದಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ದೊಡ್ಡಕಲ್ಲಸಂದ್ರ ಕೆರೆಯ ಹೂಳೆತ್ತುವ ಕಾಮಗಾರಿ

ಪುನರುಜ್ಜೀವನ–ವಿನ್ಯಾಸದಲ್ಲೇ ಇದೆ ಲೋಪ
ಕೆರೆಗಳು ಪುನರುಜ್ಜೀವನದ ಬಳಿಕ ಜೀವಂತಿಕೆ ಪಡೆಯಬೇಕಾದರೆ ಅವುಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ವಿನ್ಯಾಸದಲ್ಲೇ ಮಾರ್ಪಾಡು ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾರೆ ಕೆರೆ ಸಂರಕ್ಷಣೆಯ ಬಗ್ಗೆ ಕಳಕಳಿ ಹೊಂದಿರುವ ಸಾಮಾಜಿಕ ಕಾರ್ಯಕರ್ತರು.

‘ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಗೆ ಸೀಮಿತವಾಗಿ ಡಿಪಿಆರ್‌ ಸಿದ್ಧಪಡಿಸುತ್ತಾರೆ. ಅವರ ಪ್ರಕಾರ ಕೆರೆ ಎಂದರೆ ಭೌತಿಕವಾಗಿ ಕಾಣಿಸಿಕೊಳ್ಳುವ ಜಲಕಾಯದ ಪ್ರದೇಶ ಮಾತ್ರ. ಅದರಾಚೆಗೆ ಅವರು ಆಲೋಚಿಸುವುದಿಲ್ಲ’ ಎಂದು ರಾಘವೇಂದ್ರ ಹೇಳಿದರು.

‘ಕೆರೆಯ ಹೂಳೆತ್ತಿ ದಂಡೆ ಬಲಪಡಿಸಿ, ಕೊಳಚೆ ನೀರು ಸೇರದಂತೆ ಕಟ್ಟೆ ಕಟ್ಟುವುದು ಈಗ ಅನುಸರಿಸುತ್ತಿರುವ ಪುನರುಜ್ಜೀವನ ಸೂತ್ರ. ಬರೇ ಇಷ್ಟನ್ನೇ ಮಾಡಿದರೆ ಕೆರೆ ಜೀವಂತಿಕೆ ಪಡೆಯಲು ಸಾಧ್ಯವಿಲ್ಲ. ಕೆರೆಗೆ ಮಳೆ ನೀರು ಹರಿದು ತರುವ ಕಾಲುವೆಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಶೌಚಯುಕ್ತ ನೀರು ಕೆರೆ ಒಡಲು ಸೇರುವುದನ್ನು ತಡೆಯುವುದಕ್ಕೂ ವ್ಯವಸ್ಥೆ ರೂಪಿಸಬೇಕು’

‘ಪ್ರತಿ ಕೆರೆಯನ್ನು ಅಭಿವೃದ್ಧಿಪಡಿಸುವಾಗಲೂ ಕನಿಷ್ಠ 1 ಕಿ.ಮೀ ಪ್ರದೇಶದ ಮಳೆ ನೀರು ಅದಕ್ಕೆ ಸೇರಲು ವ್ಯವಸ್ಥೆ ರೂಪಿಸಬೇಕು. ಅನೇಕ ಕಡೆಗೆ ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯುವ ನೆಪದಲ್ಲಿ ಮಳೆಯ ನೀರೂ ಸೇರದಂತೆ ತಡೆಯಲಾಗುತ್ತಿದೆ. ಹಾಗಾಗಿ ಭಾರಿ ಮಳೆಯಾದರೂ ಕೆರೆಯ ಒಡಲು ತುಂಬಿಕೊಳ್ಳುವುದೇ ಇಲ್ಲ’ ಎಂದರು.

‘ರಾಜಕಾಲುವೆಯಲ್ಲಿ ಕೊಳಚೆ ನೀರು ಮಳೆ ನೀರು ಎರಡೂ ಹರಿಯುತ್ತದೆ. ಅದನ್ನು ಕೆರೆಗಳಿಗೆ ಜೋಡಿಸುವ ವಿನ್ಯಾಸವೇ ಸರಿಯಿಲ್ಲ. ರಾಜಕಾಲುವೆಯಲ್ಲಿ ಮಳೆ ನೀರು ಮಾತ್ರ ಹರಿಯುವಂತಾಗಬೇಕು. ಒತ್ತುವರಿಗಳನ್ನು ತೆರವುಗೊಳಿಸುವುದರ ಜೊತೆಗೆ, ರಾಜಕಾಲುವೆಗೆ ಶೌಚಯುಕ್ತ ನೀರು ಹರಿಯಬಿಡುವುದಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕುವ ಅಗತ್ಯವೂ ಇದೆ’ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಇಲಾಖೆಗಳ ನಡುವೆ ಸಮನ್ವಯ ಕೊರತೆ

ನಮ್ಮಲ್ಲಿ ನೀರಿನ ನಿರ್ವಹಣೆ ಮಾಡುವ ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದ ಕಾರಣ ಕೆರೆಗಳು ಅಧ್ವಾನಗೊಳ್ಳುತ್ತಿವೆ. ಬಿಬಿಎಂಪಿ ಕೆರೆಗಳ ಹಾಗೂ ರಾಜಕಾಲುವೆಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗಗಳಿವೆ. ರಾಜಕಾಲುವೆಗಳಲ್ಲಿ ಕೊಳಚೆ ನೀರು ಹರಿಯದಂತೆ ನೋಡಿಕೊಳ್ಳಬೇಕಾದ ಜಲಮಂಡಳಿಯು ಬಿಬಿಎಂಪಿ ಅಧೀನದಲ್ಲಿಲ್ಲ. ಕೆರೆ ಅಭಿವೃದ್ಧಿ ಕಾಮಗಾರಿಗಳ ಡಿಪಿಆರ್‌ಗಳನ್ನು ಅನುಮೋದಿಸಬೇಕಾಗಿರುವುದು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ.

‘ಜಲಮಂಡಳಿ ದಿನವೊಂದಕ್ಕೆ 1440 ಕೋಟಿ ಲೀಟರ್‌ ನೀರನ್ನು ನಗರಕ್ಕೆ ಹೊರಗಿನಿಂದ ತರಿಸುತ್ತಿದೆ. ಅದು ಕೊಳಚೆ ನೀರಾಗಿ ಪರಿವರ್ತನೆಯಾಗುತ್ತಿದೆ. ಅದರಲ್ಲಿ ಅರ್ಧ ಭಾಗದಷ್ಟು ನೀರನ್ನು ಸಂಸ್ಕರಿಸುವಷ್ಟು ಸಾಮರ್ಥ್ಯದ ಎಸ್‌ಟಿಪಿಗಳನ್ನು ಅದು ಹೊಂದಿಲ್ಲ. ಇನ್ನು ಕೊಳವೆಬಾವಿಗಳಿಂದ ಮೇಲೆತ್ತುವ ನೀರು ಇದರಲ್ಲಿ ಸೇರಿಲ್ಲ. ನೀರು ಶುದ್ಧೀಕರಣದ ಸಮಗ್ರ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಕೆರೆಗಳ ದುರಸ್ತಿಗಾಗಿ ಏನೇ ಕಸರತ್ತು ನಡೆಸಿದರೂ, ಅವು ಗತವೈಭವಕ್ಕೆ ಮರಳುವಂತೆ ಮಾಡುವುದು ಕನ್ನಡಿಯೊಳಗಿನ ಗಂಟೇ ಸರಿ’ ಎಂದು ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

‘ಬಿ– ವರ್ಗದಲ್ಲಿ ಬರಬೇಕು’
‘ಅಭಿವೃದ್ಧಿಗೊಂಡ ಕೆರೆಗಳ ನೀರಿನ ಮಟ್ಟ ಕನಿಷ್ಠಪಕ್ಷ ಬಿ–ವರ್ಗದಲ್ಲಾದರೂ ಇರಬೇಕು ಎಂಬುದು ನಮ್ಮ ಆಶಯವೂ ಆಗಿದೆ. ಆದರೆ, ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುವಿಕೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗದ ಕಾರಣ ಇದು ಸಾಕಾರಗೊಳ್ಳುತ್ತಿಲ್ಲ’ ಎನ್ನುತ್ತಾರೆ ಬಿಬಿಎಂಪಿಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನಕೃಷ್ಣ.

‘ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತಹ ಕಠಿಣ ಕ್ರಮವನ್ನೂ ನಾವು ಕೈಗೊಂಡಿದ್ದೇವೆ, ಆದರೂ ಪ್ರಯೋಜನವಾಗಿಲ್ಲ’ ಎಂದರು.

‘ಕೆರೆಯ ಸುತ್ತ ಕನಿಷ್ಠ 1 ಕಿ.ಮೀ ವ್ಯಾಪ್ತಿಯಲ್ಲಿ ಮಳೆ ನೀರನ್ನು ಮಾತ್ರ ಕೆರೆಗೆ ಹರಿಸುವ ರಾಜಕಾಲುವೆ ರೂಪಿಸಬೇಕು ಎನ್ನುವುದು ಉತ್ತಮ ಸಲಹೆ. ಆದರೆ, ಈಗಿನ ಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಅದರ ಅನುಷ್ಠಾನ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಮತ್ತೆ 25 ಕೆರೆಗೆಳ ಅಭಿವೃದ್ಧಿ’
‘ಬಿಬಿಎಂಪಿಯು ‘ಬೆಂಗಳೂರು ವಿಷನ್‌ 2020’ ಯೋಜನೆಯಡಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮವನ್ನೂ ಕೈಗೆತ್ತಿಕೊಳ್ಳಲಿದೆ. ಇದರಡಿ 25 ಕೆರೆಗಳನ್ನು ಇನ್ನು ಎರಡು ವರ್ಷಗಳಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಮೋಹನಕೃಷ್ಣ ತಿಳಿಸಿದರು.

ಕಂಟಕಗಳಿವು

ಕಸ ಅಸಮರ್ಪಕ ವಿಲೇವಾರಿ
ಕಸ ವಿಲೇವಾರಿ ವ್ಯವಸ್ಥೆಯ ಲೋಪವು ಕೆರೆಗಳು ಕಲುಷಿತಗೊಳ್ಳುವುದಕ್ಕೂ ಕಾರಣವಾಗುತ್ತಿದೆ. ಕೆರೆಗಳು ಕಸ ವಿಲೇವಾರಿ ತಾಣಗಳಂತೆ (ಡಂಪಿಂಗ್‌ ಯಾರ್ಡ್‌) ಬಳಕೆಯಾಗುತ್ತಿವೆ. ಮನೆ ಮನೆಯ ಕಸ,ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಆಹಾರ ತ್ಯಾಜ್ಯ, ಜೊತೆ, ಪ್ರಾಣಿಗಳ ತ್ಯಾಜ್ಯ, ವೈದ್ಯಕೀಯ ಕಸ, ಕಟ್ಟಡಗಳ ಭಗ್ನಾವಶೇಷ, ಕೈಗಾರಿಕೆಗಳ ಕಸಗಳನ್ನೂ ಗುಟ್ಟಾಗಿ ತಂದು ಕೆರೆ ಒಡಲಿಗೆ ಸುರಿಯಲಾಗುತ್ತಿದೆ.

**
ಕೊಳಚೆ ನೀರು
ಮಳೆ ನೀರು ಹರಿಯುವ ರಾಜಕಾಲುವೆಗಳ ಮೂಲಕ ಒಳಚರಂಡಿಯ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ. ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ಮನೆಯ ಶೌಚಾಲಯಗಳ ನೀರನ್ನು ರಾಜಕಾಲುವೆಗಳಿಗೆ ಹರಿಯಬಿಡುತ್ತಿರುವುದು ಕೆರೆಗಳ ಒಡಲು ಮಲಿನಗೊಳ್ಳುವುದಕ್ಕೆ ಮೂಲ ಕಾರಣ.

**
ಕಳೆ ಮತ್ತು ಹೂಳು
ರಾಜಕಾಲುವೆಗಳಲ್ಲಿ ಕೆರೆಗೆ ಹರಿದು ಬರುವ ಕೊಳಚೆ ನೀರು ಹೂಳು ಮಾಲಿನ್ಯಕಾರಕಗಳನ್ನು ಮತ್ತು ಪೋಷಕಾಂಶಗಳನ್ನು ಜಲಮೂಲಗಳಿಗೆ ತಂದು ಸೇರಿಸುತ್ತಿದೆ. ಇದು ನೀರಿನ ಗುಣಮಟ್ಟವನ್ನು ಹದಗೆಡಿಸುತ್ತದೆ. ಅಸಹಜ ಪ್ರಮಾಣದಲ್ಲಿ ಕೆರೆ ಸೇರುವ ಸಾವಯವ ಪೋಷಕಾಂಶಗಳು ಕೆರೆಯಲ್ಲಿ ಕಳೆ ಸಸ್ಯ ಬೆಳೆಯುವುದಕ್ಕೆ ಕಾರಣವಾಗುತ್ತಿವೆ. ಕೆರೆಯ ಪರಿಸರ ವ್ಯವಸ್ಥೆ ಹದಗೆಡುವಂತೆ ಮಾಡುತ್ತಿವೆ.

**
ನೀರು ಪೂರಣ ವ್ಯವಸ್ಥೆ ಇಲ್ಲದಿರುವಿಕೆ
ಈ ಹಿಂದೆ ಒಂದು ಹನಿ ಮಳೆ ನೀರು ವ್ಯರ್ಥವಾಗದೆ ಕೆರೆ ಸೇರುವಂತೆ ಚರಂಡಿ ಹಾಗೂ ರಾಜಕಾಲುವೆಗಳ ಜಾಲವಿತ್ತು. ನಗರೀಕರಣದಿಂದಾಗಿ ಇದು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ನೀರು ಕೆರೆ ಒಡಲು ತುಂಬುವ ವ್ಯವಸ್ಥೆಯೇ ಇಲ್ಲದಂತಾಗಿದೆ. ಈ ಕೊರೆತೆಯು ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಗೂ ಕಾರಣವಾಗುತ್ತಿದೆ.

**
ಸಾಮಾಜಿಕ ಕಳಕಳಿಯ ಕೊರತೆ
ಕೆರೆ ಊರಿನ ಎಲ್ಲರಿಗೂ ಸಂಬಂಧಿಸಿದ ಸ್ವತ್ತು. ಅದರ ಕಾಳಜಿ ವಹಿಸುವುದು ನಾಗರಿಕರೆಲ್ಲರ ಜವಾಬ್ದಾರಿ. ಆದರೆ, ಇಂತಹ ಸಾಮಾಜಿಕ ಬದ್ಧತೆ ನಗರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಒತ್ತುವರಿ ಅವ್ಯಾಹತವಾಗುವುದಕ್ಕೆ ಜನರ, ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗದ ನಿಷ್ಕ್ರಿಯತೆಯೂ ಕಾರಣ. ಕೆರೆಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಎಂಬ ಮನೋಭಾವ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT