ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು| ಪೀಣ್ಯ ಅಭಿವೃದ್ಧಿ, ಬಿಡದ ಗ್ರಹಣ

ಬಜೆಟ್‌ನಲ್ಲಿ ನಿಗದಿಯಾಗಿದ್ದ ₹100 ಕೋಟಿ ಅನುದಾನ l ಆರಂಭವೇ ಆಗದ ಪ್ರತ್ಯೇಕ ಪ್ರಾಧಿಕಾರ ರಚಿಸುವ ಪ್ರಕ್ರಿಯೆ
Last Updated 3 ಜನವರಿ 2022, 19:37 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ 2020–21ನೇ ಸಾಲಿನ ಬಜೆಟ್‌ನಲ್ಲಿ ₹100 ಕೋಟಿ ನಿಗದಿಯಾಗಿದ್ದರೂ ಅನುದಾನ ಬಳಕೆಗೆ ಈವರೆಗೆ ಯೋಜನೆಯೇ ರೂಪುಗೊಂಡಿಲ್ಲ. ಟೌನ್‌ಶಿಪ್ ಸ್ಥಾಪಿಸಬೇಕೋ, ಬಿಬಿಎಂಪಿ ಮೂಲಕ ಮೂಲಸೌಕರ್ಯ ಕಾಮಗಾರಿ ಆರಂಭಿಸಬೇಕೋ ಎಂಬ ಗೊಂದಲದಲ್ಲೇ ಸರ್ಕಾರವಿದ್ದು, ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.

‘‌ಉತ್ಪಾದನಾ ವಲಯದ ಇನ್ನಷ್ಟು ಕೈಗಾರಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಪೀಣ್ಯದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಟೌನ್‌ಶಿಪ್) ಸ್ಥಾಪಿಸಲಾಗುವುದು. ₹100 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು 2021–22ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಪ್ರಾಧಿಕಾರ ರಚನೆ ಮಾಡುವ ನಿಟ್ಟಿನಲ್ಲಿ ಯಾವ ಪ್ರಕ್ರಿಯೆಯೂ ಈವರೆಗೆ ಆರಂಭವಾಗಿಲ್ಲ.

ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಉಪನಗರ ಪ್ರಾಧಿಕಾರದ ಪ್ರತಿನಿಧಿ, ಎಂಎಸ್‌ಎಂಇ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮತ್ತು ಬಿಬಿಎಂಪಿ ದಾಸರಹಳ್ಳಿ ವಲಯದ ಜಂಟಿ ನಿರ್ದೇಶಕರ ಸಮ್ಮುಖದಲ್ಲಿ ಒಂದು ಸುತ್ತಿನ ಪೂರ್ವಭಾವಿ ಸಭೆ ನಡೆದಿರುವುದು ಹೊರತುಪಡಿಸಿ ಟೌನ್‌ಶಿಪ್‌ ರಚನೆ ಸಂಬಂಧ ಯಾವುದೇ ಪ್ರಕ್ರಿಯೆಯೂ ಮುಂದುವರಿದಿಲ್ಲ.

‘ಒಟ್ಟು 1,570 ಎಕರೆ ಪ್ರದೇಶದಲ್ಲಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆಎಸ್‌ಎಸ್‌ಐಡಿಸಿ) ಮೂಲಕ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆಸ್ತಿ ತೆರಿಗೆ ಹೆಸರಿನಲ್ಲಿ ನೂರಾರು ಕೋಟಿ ವರಮಾನ ಬಿಬಿಎಂಪಿಗೂ ಸಂದಾಯವಾಗುತ್ತಿದೆ. ಆದರೆ, ವರ್ಷಕ್ಕೆ ₹20 ಕೋಟಿಯಷ್ಟು ಮೊತ್ತವೂ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗ ಆಗುತ್ತಿಲ್ಲ’ ಎಂದು ಪೀಣ್ಯ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಪ್ರಕಾಶ್ ಬೇಸರ ವ್ಯಕ್ತಪಡಿಸುತ್ತಾರೆ.

‘ಪ್ರತ್ಯೇಕ ಪ್ರಾಧಿಕಾರ ರಚನೆಯಾದರೆ ಅದರ ಮೂಲಕ ಸಂಗ್ರಹವಾಗುವ ಆಸ್ತಿ ತೆರಿಗೆಯಲ್ಲಿ ಸರ್ಕಾರಕ್ಕೂ ಶೇ 50ರಷ್ಟು ನೀಡಿ, ಉಳಿದ ಹಣವನ್ನು ಈ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಿದೆ. ಆಗ ಮಾತ್ರ ಈ ಪ್ರದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಮೂಲಸೌಕರ್ಯ ಸಮರ್ಪಕವಾಗಿ ಕಲ್ಪಿಸಿಕೊಳ್ಳಲು ಸಾಧ್ಯ’ ಎಂಬುದು ಅವರ ಅಭಿಪ್ರಾಯ.

ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಅದರ ಮೂಲಕ₹100 ಕೋಟಿ ಅನುದಾನ ಬಳಸುವ ಬದಲು ಬಿಬಿಎಂಪಿ ಮೂಲಕವೇ ಮೂಲಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ‘ಪ್ರಾಧಿಕಾರ ರಚಿಸಿ ಅದರ ಮೂಲಕ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವುದು ವಿಳಂಬವಾಗಲಿದೆ. ಪೀಣ್ಯ ಕೈಗಾರಿಕಾ ಪ್ರದೇಶವನ್ನು ಈಗಾಗಲೇ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ. ಪಾಲಿಕೆ ಮೂಲಕವೇ ಕಾಮಗಾರಿ ಕೈಗೆತ್ತಿಕೊಳ್ಳುವುದು ಸೂಕ್ತ’ ಎಂದು ತೋಟಗಾರಿಕಾ ಸಚಿವ ಎನ್. ಮುನಿರತ್ನ ಮತ್ತು ಶಾಸಕ ಆರ್. ಮಂಜುನಾಥ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಈ ಅನುದಾನವನ್ನು ಬಿಬಿಎಂಪಿಗೆ ವರ್ಗಾಯಿಸಲು ಸಾಧ್ಯವೇ ಎಂಬುದರ ಕುರಿತು ಅಭಿಪ್ರಾಯ ತಿಳಿಸುವಂತೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವ ಉದ್ದೇಶವನ್ನು ಸರ್ಕಾರ ಕೈಬಿಟ್ಟಂತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪೀಣ್ಯ ಪ್ರದೇಶದ ಕೈಗಾರಿಕೋದ್ಯಮಿಗಳು.

‘ತಡ ಮಾಡದೆ ಕಾಮಗಾರಿ ಆರಂಭಿಸಲಿ’

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹಲವು ವರ್ಷಗಳಿಂದ ರಸ್ತೆಗಳು ಅಭಿವೃದ್ಧಿಯೇ ಆಗಿಲ್ಲ. ರಸ್ತೆಗಳೆಲ್ಲಾ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಪ್ರದೇಶ ಅಭಿವೃದ್ಧಿಗೆ ಮಂಜೂರು ಮಾಡಿದ್ದ ಹಣವನ್ನೂ ಬಿಜೆಪಿ ನೇತೃತ್ವದ ಸರ್ಕಾರ ವಾಪಸ್ ಪಡೆಯಿತು. 2020–21ರ ಬಜೆಟ್‌ನಲ್ಲಿ ನಿಗದಿ ಮಾಡಿರುವ ₹100 ಕೋಟಿಯಲ್ಲಿ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಅದರ ಮೂಲಕ ಮೂಲ ಸೌಕರ್ಯ ಕಲ್ಪಿಸುವುದು ವಿಳಂಬವಾಗಲಿದೆ. ಬಿಬಿಎಂಪಿ ಮೂಲಕ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಏಪ್ರಿಲ್‌ನಲ್ಲೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇನೆ. ಈವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕಾಮಗಾರಿ ಆರಂಭಿಸಿ ಜನರಿಗೆ ಅನುಕೂಲ ಮಾಡಬೇಕು.

–ಆರ್. ಮಂಜುನಾಥ್, ಶಾಸಕ

ಪ್ರತ್ಯೇಕ ಪ್ರಾಧಿಕಾರ ರಚನೆಯೊಂದೇ ಪರಿಹಾರ

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಧಿಕಾರ ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಯಾವ ಪ್ರಕ್ರಿಯೆಯೂ ಆರಂಭವೇ ಆಗಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಮತದಾರರು ಇಲ್ಲದಿರುವುದಕ್ಕೆ ಮೂಲಸೌಕರ್ಯ ಒದಗಿಸಲು ಜನ ಪ್ರತಿನಿಧಿಗಳು ಮನಸು ಮಾಡುವುದಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವುದೊಂದೇ ಪರಿಹಾರ. ಆದರೆ, ಕೆಲ ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಧಿಕಾರ ರಚನೆ ಆಗಲೇಬೇಕು ಎಂದು ಕೈಗಾರಿಕೋದ್ಯಮಿಗಳು ಒತ್ತಡ ಹೇರುತ್ತಿದ್ದೇವೆ.

–ಡಿ.ಟಿ. ವೆಂಕಟೇಶ್, ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ

‘ಬಿಬಿಎಂಪಿ ಮೂಲಕವೇ ಕಾಮಗಾರಿ ಆರಂಭಿಸಲಿ’

ಪೀಣ್ಯ ಕೈಗಾರಿಕಾ ಪ್ರದೇಶದ ಆಜುಬಾಜಿನಲ್ಲಿ ಕೆಲವು ಹಳ್ಳಿಗಳೂ ಹೊಂದಿಕೊಂಡಿವೆ. ಈ ಹಳ್ಳಿಗಳ ಅಭಿವೃದ್ಧಿಯ ಹೊಣೆಯನ್ನೂ ಪ್ರಾಧಿಕಾರ ಹೊರುವುದು ಕಷ್ಟವಾಗಲಿದೆ. ಈ ರೀತಿಯ ಹಲವು ತೊಡಕುಗಳಿವೆ. ಎಲ್ಲಾ ಸಾಧಕ– ಬಾಧಕ ಪರಿಶೀಲಿಸಿ ಪ್ರಾಧಿಕಾರ ರಚನೆಯಾಗಲು ಸಾಕಷ್ಟು ಸಮಯಾವಕಾಶ ಬೇಕಾಗಲಿದೆ. ಕಾಯುತ್ತಾ ಕುಳಿತರೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನ ವಾಪಸ್ ಹೋಗಲಿದೆ. ಆದ್ದರಿಂದ ಬಿಬಿಎಂಪಿ ಮೂಲಕವೇ ಕಾಮಗಾರಿ ಕೈಗೆತ್ತಿಕೊಂಡು ಆದಷ್ಟು ಬೇಗ ಮೂಲ ಸೌಕರ್ಯ ಒದಗಿಸುವಂತೆ ಸಚಿವ ಎನ್.ಮುನಿರತ್ನ ಮತ್ತು ಶಾಸಕ ಆರ್. ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದೆವು. ಹಾಳಾಗಿರುವ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಕಾರ್ಯವನ್ನು ಆದಷ್ಟು ಬೇಗ ಸರ್ಕಾರ ಕೈಗೆತ್ತಿಕೊಳ್ಳಬೇಕು.

-ಮುರಳಿಕೃಷ್ಣ ಬಿ., ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ

ಅಂಕಿ–ಅಂಶ

10 ಸಾವಿರ – ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳ ಸಂಖ್ಯೆ

45 ಚದರ ಕಿಲೋ ಮೀಟರ್ – ಪೀಣ್ಯ ಕೈಗಾರಿಕಾ ಪ್ರದೇಶದ ವಿಸ್ತೀರ್ಣ

8 ಲಕ್ಷ – ಪೀಣ್ಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಜನಸಂಖ್ಯೆ

***

ಬಿಬಿಎಂಪಿ ಮೂಲಕವೇ ಕಾಮಗಾರಿ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇನೆ. ಪೀಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವುದು, ಬಿಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಷಯ.

–ಮುನಿರತ್ನ, ತೋಟಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT