ಭಾನುವಾರ, ಮಾರ್ಚ್ 26, 2023
23 °C

ಲಂಚ: ಬೆಸ್ಕಾಂ ಎಇಇ, ಎಇ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಟ್ಟಡವೊಂದರ ವಿದ್ಯುತ್‌ ಸಂಪರ್ಕದ ಸಾಮರ್ಥ್ಯದ ಮಿತಿಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಮಂಜೂರಾತಿ ನೀಡಲು ₹ 20,000 ಲಂಚ ಪಡೆದ ಬೆಸ್ಕಾಂ ಸುಮನಹಳ್ಳಿ (ಎನ್‌–6) ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಭಾರತಿ ಮತ್ತು ಕಾಮಾಕ್ಷಿಪಾಳ್ಯ ಸೆಕ್ಷನ್‌ನ ಸಹಾಯಕ ಎಂಜಿನಿಯರ್‌ ಕನಾಲ್ ಕುಮಾರ್‌ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕಟ್ಟಡವೊಂದಕ್ಕೆ 30 ಕಿಲೋ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಹೊಂದಿದ್ದು, ಅದನ್ನು 60 ಕಿಲೋ ವ್ಯಾಟ್‌ಗೆ ಮೇಲ್ದರ್ಜೆಗೇರಿಸಲು ಬ್ಯಾಡರಹಳ್ಳಿ ನಿವಾಸಿ ಅನಂತರಾಜು ಕೆ.ಎಂ. ಎಂಬುವವರು ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತಾವಕ್ಕೆ ಮಂಜೂರಾತಿ ನೀಡಲು ₹ 25,000 ಲಂಚ ನೀಡುವಂತೆ ಇಬ್ಬರೂ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆಸಿದಾಗ ₹ 20,000 ಕೊಟ್ಟರೆ ಕಡತ ವಿಲೇವಾರಿ ಮಾಡುವುದಾಗಿ ಹೇಳಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಅರ್ಜಿದಾರರು, ಲೋಕಾಯುಕ್ತದ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು.

ಆರೋಪಿಗಳ ಸೂಚನೆಯಂತೆ ಶನಿವಾರ ಸಂಜೆ ಸುಮನಹಳ್ಳಿಯ ಬೆಸ್ಕಾಂ ಕಚೇರಿಗೆ ತೆರಳಿದ ಅನಂತರಾಜು, ₹ 20,000 ನಗದನ್ನು ಆರೋಪಿಗಳಿಗೆ ತಲುಪಿಸಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎದುರಿನಲ್ಲೇ ಸಹಾಯಕ ಎಂಜಿನಿಯರ್‌ ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಭಾರತಿ ಮತ್ತು ಕನಾಲ್‌ ಕುಮಾರ್‌ ಅವರನ್ನು ಬಂಧಿಸಿದರು.

ಲೋಕಾಯಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಪ್ರಕಾಶ್‌ ರೆಡ್ಡಿ, ಇನ್‌ಸ್ಪೆಕ್ಟರ್‌ಗಳಾದ ಆನಂದ್‌, ಮಹದೇವಯ್ಯ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು