ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ: ಕುಲಪತಿ–ಕುಲಸಚಿವರ ಶೀತಲ ಸಮರ; ನಡೆಯದ ಶೈಕ್ಷಣಿಕ ಚಟುವಟಿಕೆ ?

ಶಿಕ್ಷಕೇತರ ನೌಕರರ ಪ್ರತಿಭಟನೆ | ವಿದ್ಯಾರ್ಥಿಗಳಿಗೆ ಸಂಕಷ್ಟ
Last Updated 3 ಜನವರಿ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರ ನಡುವೆ ಶೀತಲ ಸಮರ ನಡೆಯುತ್ತಿದ್ದರೆ, ಮತ್ತೊಂದೆಡೆ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಶಿಕ್ಷಕೇತರ ನೌಕರರ ಸಂಘದ ಸದಸ್ಯರು 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದ್ದು, ತೊಂದರೆಯಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‘ಘಟಿಕೋತ್ಸವ ಇನ್ನೂ ನಡೆದಿಲ್ಲ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ನಾವು ಬೇರೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕಾಗಿದೆ. ಈವರೆಗೆ ಪ್ರಮಾಣ ಪತ್ರವನ್ನೂ ವಿತರಿಸಿಲ್ಲ. ನಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಸರ್ಕಾರವಾದರೂ ಇತ್ತ ಗಮನ ನೀಡಬೇಕು’ ಎಂದು ವಿದ್ಯಾರ್ಥಿಯೊಬ್ಬರು ಒತ್ತಾಯಿಸಿದರು.

‘ಪಿಎಚ್‌.ಡಿಯಂತಹ ಸಂಶೋಧನಾ ತರಗತಿಗಳು, ಪರೀಕ್ಷೆಗಳ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

‘ಕುಲಪತಿ ಮತ್ತು ಕುಲಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕುಲಪತಿಯವರ ಕುಮ್ಮಕ್ಕಿನಿಂದಲೇ ಶಿಕ್ಷಕೇತರ ನೌಕರರು ಕುಲಸಚಿವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಪ್ರಸಕ್ತ ಶೈಕ್ಷಣಿಕ ವರ್ಷವೇ ಸರಿಯಾಗಿ ಪ್ರಾರಂಭವಾಗಿಲ್ಲ. ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ. ಎಚ್. ಸುಧಾಕರ್ ಹೇಳಿದರು.

‘ಬಹಳಷ್ಟು ನೌಕರರಿಗೆ ಅರ್ಹತೆಗೆ ತಕ್ಕಂತೆ ಬಡ್ತಿ ಸಿಗುತ್ತಿಲ್ಲ. ಅಲ್ಲದೆ, ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳು ನೌಕರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಕಾರಣದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸೋಮವಾರದಿಂದ ಈ ಪ್ರತಿಭಟನೆ ಇನ್ನೂ ತೀವ್ರಗೊಳ್ಳಲಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಕಾರ್ಯದರ್ಶಿ ಎಚ್. ಕೃಷ್ಣಪ್ಪ ಹೇಳಿದರು.

‘ನೀವು ಎಂಜಲು ಕಾಸಿಗೆ ಆಸೆ ಪಡುತ್ತೀರಾ ಎಂದೆಲ್ಲ ಕುಲಸಚಿವರು ನಿಂದಿಸಿದರು. ಅವರ ವಿರುದ್ಧ ಮಾತ್ರವಲ್ಲದೆ, ಕುಲಪತಿಯವರೂ ಸೇರಿದಂತೆ ಆಡಳಿತ ವರ್ಗದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಕುಲಪತಿಯವರ ಒತ್ತಡದಿಂದ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರತಿಭಟಿಸುತ್ತಿರುವ ನೌಕರರನ್ನು ಮೊದಲ ದಿನವೇ ಮಾತುಕತೆಗೆ ಕರೆದಿದ್ದೇನೆ. ಅವರ ಬೇಡಿಕೆಗಳನ್ನು ಮುಂದಿನ ಸಿಂಡಿಕೇಟ್‌ ಸಭೆಯಲ್ಲಿ ಇಡುತ್ತೇನೆ ಎಂದೂ ಹೇಳಿದ್ದೇನೆ. ಕೆಲಸಗಳು ವಿಳಂಬವಾದಾಗ ನೌಕರರಿಗೆ ಬೈದಿದ್ದೇನೆ. ಆದರೆ, ಅವಾಚ್ಯವಾಗಿ ನಿಂದಿಸಿಲ್ಲ. ತಿಂಗಳುಗಳ ನಂತರವೂ ಕೆಲಸವಾಗದಿದ್ದಾಗ ನೋಟಿಸ್ ನೀಡಿದ್ದೇನೆ. ಭ್ರಷ್ಟಾಚಾರ ಮಾಡಿದರೆ ಅದು ಎಂಜಲಿಗೆ ಸಮಾನ ಎಂದಿದ್ದೇನೆ. ಅದು ಅವಾಚ್ಯ ಪದ ಅಲ್ಲ’ ಎಂದೂ ಕುಲಸಚಿವರಾದ ಕೆ. ಜ್ಯೋತಿ ಹೇಳಿದರು.

‘ಬ್ಯಾನರ್‌ನಲ್ಲಿ ನನ್ನ ಹೆಸರು ಹಾಕಿಕೊಂಡು ಪ್ರತಿಭಟಿಸುತ್ತಿರುವುದು ಸರಿಯಲ್ಲ. ನಾನು ನಿಯಮದಂತೆಯೇ ನೌಕರರಿಗೆ ನೋಟಿಸ್ ನೀಡಿದ್ದೇನೆ. ಪ್ರತಿಭಟನಾ ಸ್ಥಳಕ್ಕೆ ಹೋಗಿ ಮಾತನಾಡುವ ಅಗತ್ಯವಿಲ್ಲ’ ಎಂದೂ ಹೇಳಿದರು.

‘ನೌಕರರು ಪ್ರತಿಭಟನೆ ನಡೆಯುತ್ತಿರುವುದರಿಂದ ಕಡತಗಳ ವಿಲೇವಾರಿ ಸ್ವಲ್ಪ ನಿಧಾನವಾಗಿರಬಹುದು. ಆದರೆ, ಶೈಕ್ಷಣಿಕ ಚಟುವಟಿಕೆ ಯಾವುದೂ ಸ್ಥಗಿತಗೊಂಡಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT